ಆಕ್ಸಿಜನ್ ಕೊರತೆಯಾಗದಂತೆ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮೊದಲೇ ಎಚ್ಚೆತ್ತುಕೊಳ್ಳಬೇಕು: ಸಂಸದ ಪ್ರತಾಪ್ ಸಿಂಹ

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 24 ರೋಗಿಗಳ ಸಾವಿನಂತಹ ಪ್ರಕರಣಗಳನ್ನು ತಡೆಯಲು ಜಿಲ್ಲಾ ಉಸ್ತುವಾರಿ ಸಚಿವರುಗಳು ಮತ್ತು ಜಿಲ್ಲಾಧಿಕಾರಿಗಳು ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದು ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ
Updated on

ಮೈಸೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಕಳೆದ ರಾತ್ರಿಯಿಂದ ಸೋಮವಾರ ನಸುಕಿನ ಜಾವದವರೆಗೆ ಮೃತಪಟ್ಟ 24 ರೋಗಿಗಳ ಸಾವಿನಂತಹ ಪ್ರಕರಣಗಳನ್ನು ತಡೆಯಲು ಜಿಲ್ಲಾ ಉಸ್ತುವಾರಿ ಸಚಿವರುಗಳು ಮತ್ತು ಜಿಲ್ಲಾಧಿಕಾರಿಗಳು ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದು ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇವತ್ತು ಚಾಮರಾಜನಗರದಲ್ಲಿ ಆಗಿರುವ ಘಟನೆ ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಆಗುವುದರಲ್ಲಿತ್ತು. ಅಂತಹ ವಾತಾವರಣ ನಿರ್ಮಾಣವಾಗಿತ್ತು. ಆಗ ತಕ್ಷಣವೇ ಉಸ್ತುವಾರಿ ಸಚಿವರಾಗಿರುವ ಎಸ್ ಟಿ ಸೋಮಶೇಖರ್ ಅವರು ಮತ್ತು ನಾನು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಖಾಸಗಿ ಆಸ್ಪತ್ರೆಯವರಿಗೆ ಕೂಡ ಹೇಳಿ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆ ಮಾಡಬೇಕೆಂದು ಹೇಳಿ ಎಚ್ಚರಿಸಿದ್ದೆವು.ಇಲ್ಲದಿದ್ದರೆ ಇಂದು ಚಾಮರಾಜನಗದಲ್ಲಿ ಆಗಿರುವ ಘಟನೆ ರೀತಿಯೇ ದುರಂತ ನಡೆಯುತ್ತಿತ್ತು ಎಂದರು.

ಮುಂದಿನ ದಿನಗಳಲ್ಲಿ ಇದು ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಈ ರೀತಿ ಘಟನೆ ಪುನರಾವರ್ತನೆಯಾಗಬಾರದು, ಇದೊಂದು ಎಚ್ಚರಿಕೆಯ ಗಂಟೆಯಾಗಬೇಕು, ಅದಕ್ಕೆ ಅಲ್ಲಿನ ಜಿಲ್ಲಾಡಳಿತ, ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರು ತಮಗೆ ಎಷ್ಟು ಆಕ್ಸಿಜನ್ ಸಿಲಿಂಡರ್ ಗಳ ಅಗತ್ಯವಿದೆ ಎಂಬುದನ್ನು ಮನಗಂಡು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟು ಆಕ್ಸಿಜನ್ ತರಿಸಿಕೊಳ್ಳಬೇಕು. ಮೈಸೂರಲ್ಲಿ ಆಕ್ಸಿಜನ್ ಪೂರೈಸುವ ಏಜೆನ್ಸಿಯಿದೆ ಹೊರತು ಇಲ್ಲಿ ಆಕ್ಸಿಜನ್ ತಯಾರು ಮಾಡುವುದಿಲ್ಲ ಎಂದರು.

ಮೈಸೂರಿನಲ್ಲಿ ಪ್ರತಿನಿತ್ಯ 44 ಎಂಎಲ್ ಟಿ ಆಕ್ಸಿಜನ್ ಬೇಕು, ನಮಗೆ ಸಿಗುತ್ತಿರುವುದು 22 ಎಂಎಲ್ ಟಿ, ಅದರಲ್ಲಿ ನಾವು ನಿರ್ವಹಿಸುತ್ತಿದ್ದೇವೆ. ಮೈಸೂರಿನ ಜನರ ಜೀವರಕ್ಷಣೆ ಬಗ್ಗೆ ನಾವು ಕೂಡ ಗಮನಹರಿಸಬೇಕಾಗುತ್ತದೆ. ಹಾಗಾಗಿ ಚಾಮರಾಜನಗರಕ್ಕೆ ಇಲ್ಲಿಂದ ಆಕ್ಸಿಜನ್ ಪೂರೈಸಲಿಲ್ಲ ಎಂದು ಹೇಳುವುದು ಸಮಂಜಸವಲ್ಲ ಎಂದರು.

ಇನ್ನು ಮುಂದೆ ಇಂತಹ ಘಟನೆ ನಡೆಯಬಾರದು, ಇದು ಪುನರಾವರ್ತಿಸಬಾರದು, ಇಲ್ಲಿ ಯಾರನ್ನೂ ದೋಷಾರೋಪಣೆ ಮಾಡುವುದು ಬೇಡ, ಅದಕ್ಕೆ ಇದು ಸಮಯವಲ್ಲ, ನಮಗೆ ಜನರ ಜೀವರಕ್ಷಣೆ ಮುಖ್ಯವಷ್ಟೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com