ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ

ಬೆಡ್ ಬುಕ್ಕಿಂಗ್ ಅವ್ಯವಹಾರ, ಮಾಫಿಯಾ ಬಯಲಿಗೆಳೆದ ಸಂಸದ ತೇಜಸ್ವಿ ಸೂರ್ಯ: ಸಿಎಂ ಭೇಟಿ ಮಾಡಿ ಕ್ರಮಕ್ಕೆ ಆಗ್ರಹ

ಕೊರೋನಾ ಕಾಲದಲ್ಲೂ ಜನರ ಜೀವದ ಜೊತೆ ಆಟಾಡುತ್ತಿರುವ, ಅಕ್ರಮವಾಗಿ ಬೆಡ್ ಬುಕ್ಕಿಂಗ್ ಮಾಡುತ್ತಿದ್ದ ಮಾಫಿಯಾವನ್ನು ಸಂಸದ ತೇಜಸ್ವಿ ಸೂರ್ಯ ಬಹಿರಂಗಪಡಿಸಿದ್ದಾರೆ. 
Published on

ಬೆಂಗಳೂರು: ಕೊರೋನಾ ಕಾಲದಲ್ಲೂ ಜನರ ಜೀವದ ಜೊತೆ ಆಟಾಡುತ್ತಿರುವ, ಅಕ್ರಮವಾಗಿ ಬೆಡ್ ಬುಕ್ಕಿಂಗ್ ಮಾಡುತ್ತಿದ್ದ ಮಾಫಿಯಾವನ್ನು ಸಂಸದ ತೇಜಸ್ವಿ ಸೂರ್ಯ  ಬಹಿರಂಗಪಡಿಸಿದ್ದಾರೆ. 

ಮೇ.04 ರಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿರುವ ಸಂಸದ ತೇಜಸ್ವಿ ಸೂರ್ಯ, ಅಕ್ರಮವಾಗಿ ಬಿಬಿಎಂಪಿ ಬೆಡ್ ಗಳು ಅಕ್ರಮವಾಗಿ ಬುಕ್ ಆಗುತ್ತಿರುವುದನ್ನು ಬಹಿರಂಗಪಡಿಸಿದ್ದು, ಇದರಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. 

ಬೆಂಗಳೂರಿನಲ್ಲಿ ವಾರ್ ರೂಮ್ ಗಳಿಂದಲೇ ಈ ವರೆಗೂ ಪ್ರಭಾವಿಗಳಿಂದ 4,065 ಬೆಡ್ ಗಳನ್ನು ಬುಕ್ ಮಾಡಿದ್ದಾರೆ.  

ಬಿಬಿಎಂಪಿ ಬೆಡ್ ಬುಕ್ಕಿಂಗ್ ವೆಬ್ ಸೈಟ್ ಗಳಲ್ಲಿ ಬೆಡ್ ಗಳು ಭರ್ತಿಯಾಗಿರುವುದು ತೋರಿಸುತ್ತಿದೆ. ಆದರೆ ಬೆಡ್ ಅಗತ್ಯವಿಲ್ಲದೇ ಇರುವ ಮನೆಯಲ್ಲಿಯೇ ಐಸೊಲೇಷನ್ ಆಗಿರುವವರ, ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿರುವವರ ಹೆಸರಿನಲ್ಲಿ ಹಣ ಪಡೆದು ತಮಗೆ ಬೇಕಾಗಿರುವವರಿಗೆ ಅಕ್ರಮವಾಗಿ ಬೆಡ್ ಬುಕ್ ಮಾಡುತ್ತಿರುವ ಮಾಫಿಯಾವನ್ನು ತೇಜಸ್ವಿ ಸೂರ್ಯ ಸಾಕ್ಷ್ಯ ಸಮೇತವಾಗಿ ಬಹಿರಂಗಗೊಳಿಸಿದ್ದಾರೆ. 

"ಕಳೆದ 1 ತಿಂಗಳ ಅವಧಿಯಲ್ಲಿನ 10 ಸಾವಿರಕ್ಕೂ ಅಧಿಕ ರೋಗಿಗಳಿಗೆ ಬೆಡ್ ಹಂಚಿಕೆ, ವಿಧಾನ, ಸಮಯವನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಬೆಂಗಳೂರು ದಕ್ಷಿಣ ಸಂಸದರ ಕಚೇರಿ ಬಿಬಿಎಂಪಿ ಅಧಿಕಾರಿಗಳು, ಆಸ್ಪತ್ರೆಗಳ ಹಾಗೂ ವಲಯವಾರು ಸಹಾಯವಾಣಿ ಸಿಬ್ಬಂದಿಗಳ ಅವ್ಯವಹಾರವನ್ನು ಬಯಲಿಗೆಳೆದಿದೆ.

ತನಿಖೆ ನಡೆಸಿದಾಗ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆರೋಗ್ಯ ಮಿತ್ರ ಸಿಬ್ಬಂದಿ ಬಿಬಿಎಂಪಿ ಹೆಲ್ಪ್ ಲೈನ್ ಹಾಗೂ ಬೆಡ್ ಹಂಚಿಕೆಗೆ ನಿಯುಕ್ತರಾಗಿರುವ ಸಿಬ್ಬಂದಿಗಳು ಕೆಲವು ಖಾಸಗಿ ಆಸ್ಪತ್ರೆಗಳು ಸೇರಿ ಕೃತಕ ಬೆಡ್ ಅಭಾವ ಸೃಷ್ಟಿಸಿ ಸಾರ್ವಜನಿಕರ ಜೀವಗಳ ಜೊತೆ ಚೆಲ್ಲಾಟ ಆಡುತ್ತಿರುವುದು ಕಂಡುಬಂಡಿದೆ. 

ಕೃತಕ ಅಭಾವ ಸೃಷ್ಟಿಸುತ್ತಿರುವುದು ಹೇಗೆ?

"ಕೋವಿಡ್-19 ನ ಯಾವುದೇ ಗುಣ ಲಕ್ಷಣಗಳನ್ನು ಹೊಂದಿರದ ಸೋಂಕಿತರ ಹೆಸರಿನಲ್ಲಿ ಬಿಬಿಎಂಪಿ ಉಸ್ತುವಾರಿ ಹೊಂದಿರುವ ಸಿಬ್ಬಂದಿ ಬೆಡ್ ನೋಂದಣಿಗೊಳಿಸಿ, ಕೆಲವೇ ಕ್ಷಣಗಳ ನಂತರ ಅದೇ ಬೆಡ್ ನ್ನು ಹಣಕ್ಕೆ ಮತ್ತೊಬ್ಬರ ಹೆಸರಿನಲ್ಲಿ ನೋಂದಣಿಗೊಳಿಸುತ್ತಾರೆ. ನಿಜವಾಗಿಯೂ ಅವಶ್ಯಕತೆ ಇರುವ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಬೆಡ್ ಸಲುವಾಗಿ ಅಲೆದಾಡುತ್ತಿದ್ದರೆ, ಕೆಲವೇ ಕೆಲವರು ಅಕ್ರಮವಾಗಿ ಬೆಡ್ ಗಳನ್ನು ದುಡ್ಡಿಗೆ ಹಂಚಿಕೆ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಬೆಡ್ ಗಳ ಕೃತಕ ಅಭಾವ ಸೃಷ್ಟಿಯನ್ನು ವಿವರಿಸಿದ್ದಾರೆ.

"ಎಷ್ಟೋ ಮಂದಿಗೆ ತಮ್ಮ ಹೆಸರಿನಲ್ಲಿ ಬೆಡ್ ಬುಕ್ ಆಗಿರುವುದೇ ತಿಳಿದಿಲ್ಲ" ಎಂಬ ಆಘಾತಕಾರಿ ಅಂಶವನ್ನು ಸುದ್ದಿಗೋಷ್ಠಿಯಲ್ಲಿ ಸಂಸದರು ತೆರೆದಿಟ್ಟಿದ್ದಾರೆ.

"ಕೆಲವು ಬಿಬಿಎಂಪಿ ಅಧಿಕಾರಿಗಳೆ ಇದರಲ್ಲಿ ಶಾಮೀಲಾಗಿದ್ದಾರೆ, ಮನಸೋ ಇಚ್ಛೆ ಬೆಡ್ ಬುಕ್ ಮಾಡುವುದಕ್ಕೆ ಅದೇನು ಬಿಬಿಎಂಪಿ ಅಧಿಕಾರಿಗಳ ಜಹಗೀರ? ಎಂದು ತೇಜಸ್ವಿ ಸೂರ್ಯ ಕೆಂಡಾಮಂಡಲರಾಗಿದ್ದಾರೆ. 

"ಕೋವಿಡ್-19 ವಾರ್ ರೂಮ್ ಗೆ ಹೋಗಿ ಸಮಸ್ಯೆಗಳಿದ್ದರೆ ಬಗೆಹರಿಸಲು ಸಹಕರಿಸಲು ಯತ್ನಿಸಿದರೂ ಜನಪ್ರತಿನಿಧಿಗಳಿಗೆ ವಾರ್ ರೂಮ್ ಗಳಿಗೆ ಹೋಗಲು ಬಿಡುತ್ತಿರಲಿಲ್ಲ" ಶಾಸಕ ಸತೀಶ್ ರೆಡ್ಡಿ ಅವರು ಜನರನ್ನು ಕರೆದೊಯ್ದು ಪ್ರತಿಭಟನೆ ನಡೆಸಿದರೂ ಸಹ ವಾರ್ ರೂಮ್ ಒಳಗೆ ಹೋಗಿ ತಪಾಸಣೆ ನಡೆಸುವುದಕ್ಕೆ ಬಿಡದಂತಹ ವಾತಾವರಣ ಇದೆ" ಎಂದು ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ. 

"ಹಣ ನೀಡಿ ಬೆಡ್ ಪಡೆದವರು ತಮಗೆ ಯಾವುದೇ ಭಯವಿಲ್ಲದೇ ಮಾಹಿತಿ ನೀಡಬೇಕು, ಮಾಹಿತಿ ನೀಡಿದವರ ಗೌಪ್ಯತೆಯನ್ನು ಕಾಪಾಡಲಾಗುವುದು" ಎಂದು ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ. 
    
"ಸಂಜೆ 5:30 ಕ್ಕೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತೇನೆ, ವಿಶೇಷ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇನೆ, ಇದು ಕೇವಲ ಭ್ರಷ್ಟಾಚಾರವಲ್ಲ, ಕೊಲೆ, ಬೆಡ್ ಸಿಗದೇ ಸಾವನ್ನಪ್ಪಿದವರ ಕುಟುಂಬ ಸದಸ್ಯರಲ್ಲಿ ಕ್ಷಮೆ ಕೇಳುತ್ತೇನೆ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಈ ವಿಷಯವನ್ನು ಬಿಡುವುದಿಲ್ಲ" ಎಂದು ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ರವಿಸುಬ್ರಹ್ಮಣ್ಯ, ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಭಾಗಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com