ಸರ್ಫರಾಜ್ ಖಾನ್
ಸರ್ಫರಾಜ್ ಖಾನ್

ವಾರ್ ರೂಂ ಬೆಡ್ ಹಗರಣಕ್ಕೂ ನನಗೂ ಸಂಬಂಧವಿಲ್ಲ: ಜಂಟಿ ಆಯುಕ್ತ ಸರ್ಫರಾಜ್ ಖಾನ್ ನೋವಿನ ನುಡಿ

ಈ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಿರುವುದು  ಮತ್ತು ಅದರಲ್ಲಿ ನನ್ನ ಹೆಸರು ಎಳೆದುತಂದಿರುವುದು ನೋವು ತಂದಿದೆ. ಕಷ್ಟದ ಸಮಯದಲ್ಲೂ ವಿಷವನ್ನು ಹರಡುತ್ತಿರುವ ಬಗ್ಗೆ ತನಿಖೆಯಾಗಬೇಕು. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Published on

ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯದ ಕೋವಿಡ್‌ ವಾರ್‌ ರೂಮಗೂ ತಮಗೂ ಸಂಬಂಧವೇ ಇಲ್ಲದಿದ್ದರೂ ಹಾಸಿಗೆ ಬ್ಲಾಕ್‌ ಮಾಡುವ ಪ್ರಕರಣದಲ್ಲಿ ತಮ್ಮ ಹೆಸರನ್ನು ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಬಗ್ಗೆ ಜಂಟಿ ಆಯುಕ್ತ (ಕಸ ನಿರ್ವಹಣೆ) ಸರ್ಫರಾಜ್‌ ಖಾನ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಿರುವುದು  ಮತ್ತು ಅದರಲ್ಲಿ ನನ್ನ ಹೆಸರು ಎಳೆದುತಂದಿರುವುದು ನೋವು ತಂದಿದೆ. ಕಷ್ಟದ ಸಮಯದಲ್ಲೂ ವಿಷವನ್ನು ಹರಡುತ್ತಿರುವ ಬಗ್ಗೆ ತನಿಖೆಯಾಗಬೇಕು. ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಖಾತೆಯಲ್ಲಿ ನೋವು ಹಂಚಿಕೊಂಡಿದ್ದು, ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. 

ಕೊವಿಡ್ ಪೀಡಿತರಿಗೆ ಬೆಡ್ ಹಂಚುವ ಬಿಬಿಎಂಪಿ ವಾರ್ ರೂಮಿನಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ನನ್ನ ಹೆಸರನ್ನು ಸೇರಿಸಿಕೊಂಡ ಒಂದು ಸಂದೇಶ ಓಡಾಡುತ್ತಿರುವುದು ನನಗೆ ಅಪಾರವಾದ ನೋವು ತಂದಿದೆ.

ವಾರ್ ರೂಮಿನಲ್ಲಿ ನನ್ನ ಯಾವುದೇ ಪಾತ್ರವಿಲ್ಲ ಮಾತ್ರವಲ್ಲ ಅಲ್ಲಿ ಯಾವುದೇ ವೈದ್ಯರೂ ನನಗೆ ಗೊತ್ತಿಲ್ಲ. ಹೀಗಿದ್ದರೂ ನನ್ನನ್ನೂ ಆರೋಪಿಯನ್ನಾಗಿಸಿರುವುದು ನನಗೆ ಆಘಾತ ತಂದಿದೆ.‌ ವಾರ್ ರೂಮನ್ನು ನಡೆಸುತ್ತಿರುವುದು ವಿಶೇಷ ಆರೋಗ್ಯ ಆಯುಕ್ತರು. ನನ್ನ ಕಾರ್ಯವೇನಿದ್ದರೂ ಕೊವಿಡ್ ಕೇರ್ ಸೆಂಟರ್ ಗಳ ಉಸ್ತುವಾರಿ ಮತ್ತು ಘನ ತ್ಯಾಜ್ಯ ಇಲಾಖೆಯ ನಿರ್ವಹಣೆ.‌

ವಾರ್ ರೂಮ್ ಗೆ ಬೇಕಾದ ವೈದ್ಯರು ಅಥವಾ ಸಿಬ್ಬಂದಿಯ ನೇಮಕ ಮಾಡಿಕೊಳ್ಳುವುದು ಕೆಲಸ ಆರೋಗ್ಯ ಇಲಾಖೆಯ ಮತ್ತು ಆಯಾ ಬಿಬಿಎಂಪಿ ವಲಯಗಳ ಕೆಲಸವಾಗಿದೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಈ ವಿಷಯಕ್ಕೆ ಕೋಮು ಬಣ್ಣ ಹಚ್ಚಿರುವುದು ಮತ್ತು ಅದರಲ್ಲಿ ಆ ಇಲಾಖೆಗೆ ಯಾವ ರೀತಿಯಲ್ಲಿಯೂ ಸಂಬಂಧವೇ ಇರದ ನನ್ನ ಹೆಸರು ಸೇರಿಸಿರುವುದು ನನಗೆ ನಿಜಕ್ಕೂ ನೋವು ತಂದಿದೆ. ಎಲ್ಲಾ ಕೊವಿಡ್ ಕೇರ್ ಕೇಂದ್ರಗಳಿಗೆ ಆಕ್ಸಿಜನ್, ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ವ್ಯವಸ್ಥೆ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ನಾನು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದೇನೆ.

ನನ್ನ ಕುಟುಂಬಸ್ಥರೆಲ್ಲಾ ಕೋವಿಡ್ ಸೋಂಕಿಗೆ ಒಳಗಾಗಿದ್ದರೂ ನಾನು ಆಕ್ಸಿಜನ್ ಒದಗಿಸುವುದು ಮುಂತಾದ ಕೆಲಸಗಳಲ್ಲಿ ನಿರತನಾಗಿದ್ದೆ ಎಂದಿರುವ ಅವರು ಈ ಸಂಬಂಧ ಸೈಬರ್ ಸೆಲ್ ಗೆ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಸರ್ಪರಾಜ್ ಖಾನ್ ಅವರಿಗೆ ಕರೆ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ ಸಮಾಧಾನ ಮಾಡಿದ್ದಾರೆ, ಮುಸ್ಲಿಂ ಸಮುದಾಯದಿಂದ ಬಂದ ಕಾರಣ ನನ್ನನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಖಾನ್ ಅಳಲು ತೋಡಿಕೊಂಡಿದ್ದಾರೆ. ಇನ್ನೂ ಇದೇ ವೇಳೆ ಖಾನ್ ಅವರ ಒಳ್ಳೆಯ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ. ಯಾರಾದರೂ ನಿಮಗೆ ತೊಂದರೆ ನೀಡಿದರೇ, ನಿಮ್ಮನ್ನು ರಕ್ಷಿಸುವುದಾಗಿ ಖಾನ್ ಗೆ ತೇಜಸ್ವಿ ಸೂರ್ಯ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com