ಬಾಬಗೌಡ ಪಾಟೀಲ್
ಬಾಬಗೌಡ ಪಾಟೀಲ್

ಕೇಂದ್ರ ಸರ್ಕಾರದ ಮಾಜಿ ಸಚಿವ, ರೈತ ಮುಖಂಡ ಬಾಬಗೌಡ ಪಾಟೀಲ್ ಬೆಳಗಾವಿಯಲ್ಲಿ ನಿಧನ 

ಕೇಂದ್ರ ಸರ್ಕಾರದ ಮಾಜಿ ಸಚಿವ, ರೈತ ಮುಖಂಡ ಬಾಬಗೌಡ ರುದ್ರಗೌಡ ಪಾಟೀಲ್ ಶುಕ್ರವಾರ ನಸುಕಿನ ಜಾವ ನಿಧನರಾಗಿದ್ದಾರೆ.ಅವರಿಗೆ 80 ವರ್ಷ ವಯಸ್ಸಾಗಿತ್ತು.
Published on

ಬೆಳಗಾವಿ: ಕೇಂದ್ರ ಸರ್ಕಾರದ ಮಾಜಿ ಸಚಿವ, ರೈತ ಮುಖಂಡ ಬಾಬಗೌಡ ರುದ್ರಗೌಡ ಪಾಟೀಲ್ ಶುಕ್ರವಾರ ನಸುಕಿನ ಜಾವ ನಿಧನರಾಗಿದ್ದಾರೆ.ಅವರಿಗೆ 80 ವರ್ಷ ವಯಸ್ಸಾಗಿತ್ತು.

ತೀವ್ರ ರಕ್ತದ ಒತ್ತಡದಿಂದ ವಾರದ ಹಿಂದೆ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಎನ್ ಡಿಎ ಸರ್ಕಾರದಲ್ಲಿ ಬಾಬಗೌಡ ಪಾಟೀಲ್ ಸಂಪುಟ ದರ್ಜೆ ಸಚಿವರಾಗಿದ್ದರು.1998ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಅಭ್ಯರ್ಥಿಯಾಗಿ ಪ್ರತಿನಿಧಿಸಿ ಸಂಸದರಾಗಿ ಗೆದ್ದುಬಂದು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದರು.

ರೈತ ಮುಖಂಡರಾಗಿ ಕೆಲಸ: ವಿಶೇಷವೆಂದರೆ ಬಾಬಗೌಡ ಅವರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆಯ ಮುಂಚೂಣಿ ವಹಿಸಿದ್ದರು. ಬೆಳಗಾವಿಯ ಸುವರ್ಣ ಸೌಧಕ್ಕೆ ಟ್ರ್ಯಾಕ್ಟರ್ ತಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದ್ದರು. ರೈತ ವಿರೋಧಿ ಕಾನೂನು ತಂದ ಬಿಜೆಪಿಯನ್ನು ಸೋಲಿಸಬೇಕು ಎಂದು ರೈತರಿಗೆ ಕರೆ ನೀಡಿದ್ದರು.

1989ರಲ್ಲಿ ಬೆಳಗಾವಿ ಮತ್ತು ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಜಯಗಳಿಸಿದ ಪಾಟೀಲ್, ಕರ್ನಾಟಕ ರಾಜ್ಯ ರೈತ ಸಂಘದ ಮೊದಲ ನಾಯಕರಾಗಿದ್ದರು. ಎರಡೂ ಕ್ಷೇತ್ರಗಳಲ್ಲಿ ಗೆದ್ದ ನಂತರ ಧಾರವಾಡ ಗ್ರಾಮೀಣ ಸ್ಥಾನವನ್ನು ಬಿಟ್ಟುಬಿಟ್ಟಿದ್ದರು. ನಂತರ ಆ ಸ್ಥಾನಕ್ಕೆ ರಾಜ್ಯ ರೈತ ಸಂಘದ ಅಧ್ಯಕ್ಷ ಎಂ ಡಿ ನಂಜುಂಡಸ್ವಾಮಿ ಸ್ಪರ್ಧಿಸಿದ್ದರು.

2000ದ ಆರಂಭದಲ್ಲಿ ಬಿಜೆಪಿ ತೊರೆದ ಬಾಬಗೌಡ ಪಾಟೀಲ್ ಅವರು ನಂತರ ಜೆಡಿಎಸ್ ಸೇರ್ಪಡೆಯಾಗಿದ್ದರು. 2013ರಲ್ಲಿ ಜೆಡಿಎಸ್ ತೊರೆದು ರೈತರನ್ನು ಸಂಘಟಿಸುವಲ್ಲಿ, ರೈತರ ಪರವಾಗಿ ಕೆಲಸ ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಬಾರಿ ಮೊನ್ನೆ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಬೆಂಬಲ ಸೂಚಿಸಿದ್ದರು. ಪ್ರಸ್ತುತ ಇರುವ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೃಷಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಿದ್ದರು.

ಬಾಬಗೌಡ ಪಾಟೀಲ್ ಅವರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com