ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವುದಕ್ಕೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದ್ದು, ಕೋವಿಡ್ ವಿರುದ್ಧ ಹೋರಾಡಲು ಸರ್ಕಾರ ಸಮರೋಪಾದಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ವೋಲ್ವೋ ಗ್ರೂಪ್ ಮತ್ತು ಐಕಿಯಾ ಗ್ರೂಪ್ ಜಂಟಿಯಾಗಿ ಸ್ಥಾಪಿಸಿರುವ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ (ಸಿಸಿಸಿ) ಉದ್ಘಾಟಿಸಿಮಾತನಾಡಿದ ಸಿಎಂ, ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಸಂಕಷ್ಟದಲ್ಲಿರುವವರ ಸಹಾಯಕ್ಕಾಗಿ ಸರ್ಕಾರ 1,250 ಕೋಟಿ ರೂ. ವಿಶೇಷ ಹಣಕಾಸು ಪ್ಯಾಕೇಜ್ ಘೋಷಿಸಿದೆ ಎಂದು ಹೇಳಿದ್ದಾರೆ.
ಕೋವಿಡ್ ಕೇರ್ ಕೇಂದ್ರ ತೆರೆದಿದ್ದಕ್ಕಾಗಿ ವೋಲ್ವೋ ಮತ್ತು ಐಕಿಯಾವನ್ನು ಶ್ಲಾಘಿಸಿದ ಅವರು, ಕಷ್ಟದ ಸಮಯದಲ್ಲಿ ಅವರು ನೀಡಿದ ಬೆಂಬಲವನ್ನು ರಾಜ್ಯ ಸರ್ಕಾರ ಶ್ಲಾಘಿಸುತ್ತಿದೆ ಮತ್ತು ಸಾಂಕ್ರಾಮಿಕ ರೋಗದ ಹೋರಾಟದಲ್ಲಿ ಅನೇಕ ಖಾಸಗಿ ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಿವೆ ಎಂದು ಪ್ರಶಂಸಿದರು.
Advertisement