ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ಮೇರೆಗೆ ವೈದ್ಯರು, ತಜ್ಞರ ನೇಮಕ: ಡಾ. ಕೆ.ಸುಧಾಕರ್‌

ಹಳೇ ಮೈಸೂರು ಮತ್ತು ಬೆಂಗಳೂರು ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಹಿಂದುಳಿದ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ವೈದ್ಯರು ಮತ್ತು ತಜ್ಞರ ಹುದ್ದೆಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡಲಾಗುವುದು ಎಂದು ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.
ಡಾ ಕೆ ಸುಧಾಕರ್
ಡಾ ಕೆ ಸುಧಾಕರ್
Updated on

ಗದಗ: ಹಳೇ ಮೈಸೂರು ಮತ್ತು ಬೆಂಗಳೂರು ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದ ಹಿಂದುಳಿದ, ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ವೈದ್ಯರು ಮತ್ತು ತಜ್ಞರ ಹುದ್ದೆಗಳನ್ನು ಆದ್ಯತೆ ಮೇರೆಗೆ ನೇಮಕ ಮಾಡಲಾಗುವುದು. ಕೆಲ ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೋವಿಡ್‌ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಕೋವಿಡ್‌ ಪರಿಸ್ಥಿತಿಐನ್ನು ಶುಕ್ರವಾರ ಪರಾಮರ್ಶೆ ನಡೆಸಿದ ಅವರು ಈ ಭರವಸೆ ನೀಡಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ವೈದ್ಯರು ಮತ್ತು ತಜ್ಞರ ಹುದ್ದೆ ಖಾಲಿಯಿವೆ. ಅವುಗಳ ನೇಂಕಕ್ಕೆ ಆದ್ಯತೆ ನೀಡಲಾಗುವುದು. ಇಲ್ಲವಾದಲ್ಲಿ ಗ್ರಾಮೀಣ ಭಾಗದ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಆಗುತ್ತದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹಿಂತಿರುಗಿದ ಕೂಡಲೇ ಈ ಬಗ್ಗೆ ಕ್ರಮ ಜರುಗಿಸುವುದಾಗಿ ತಿಳಿಸಿದರು.

ತಾಲ್ಲೂಕು ಆಸ್ಪತ್ರೆ ಆಗಿದ್ದರೂ ಇನ್ನೂ ೩೦ ಹಾಸಿಗೆಗಳ ಆಸ್ಪತ್ರೆ ಆಗಿರುವ ಶಿರಹಟ್ಟಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ನೂರು ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಕನಿಷ್ಟ ಆರು ವೆಂಟಿಲೇಟರ್‌ ಮತ್ತು ಐವತ್ತು ಆಕ್ಸಿಜನ್‌ ಹಾಸಿಗೆಗಳನ್ನು ಸಿದ್ಧಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. 

ಮೆಡಿಕಲ್‌ ಕಾಲೇಜು ಆಸ್ಪತ್ರೆಯ ನಿರ್ಮಾಣ ಕಾರ್ಯ ವಿಳಂಬ ಆಗುತ್ತಿದೆ. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು. ಕೆವಿಆರ್‌ ಕಂಪನಿ ಮುಖ್ಯಸ್ಥರ ಜತೆ ಶೀಘ್ರದಲ್ಲಿ ವಿಡಿಯೋ ಸಂವಾದ ನಡೆಸಲಾಗುವುದು. ಆಗಸ್ಟ್‌ ಅಂತ್ಯದೊಳಗೆ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದರು.

ಹೆಚ್ಚುವರಿಯಾಗಿ ಆಕ್ಸಿಜನ್‌ ಕಾನ್ಸಟ್ರೇಟರ್ಸ್‌ಗಳನ್ನು ಜಿಲ್ಲೆಗೆ ಕಳುಹಿಸಲಾಗುವುದು. ತಾಲ್ಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಪ್ಲಾಂಟ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಜಿಮ್ಸ್‌ನಲ್ಲಿ 270 ವೈದ್ಯರು ಇದ್ದಾರೆ. 87 ಬೋಧಕ ಹುದ್ದೆಗಳು ಖಾಲಿ ಇವೆ. ಅವುಗಳ ನೇಮಕಕ್ಕೆ ಎರಡು ವಾರದಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ನೋಂದಣಿ ಆಗಬೇಕು ಎಲ್ಲಾ 450 ಬೆಡ್‌ಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲು ಇಡಲಾಗಿದೆ. ಕೋವಿಡ್‌ ಯೇತರ ರೋಗಗಳ ತುರ್ತು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಿ ಅವರಿಗೆ ಸಾಸ್ಟ್‌ನಿಂದ ನೋಂದಣಿ ಆಗದಿದ್ದರೂ ನೆರವು ನೀಡಬೇಕು. ಖಾಸಗಿ ೫೪ ಆಸ್ಪತ್ರೆಗಳ ಪೈಕಿ ೮ ಆಸ್ಪತ್ರೆಗಳು ಮಾತ್ರ ಸಾಸ್ಟ್‌ನಲ್ಲಿ ನೋಂದಣಿ ಆಗಿರುವುದರಿಂದ ಉಳಿದವುಗಳನ್ನು ನೋಂದಣಿ ಮಾಡಬೇಕು ಎಂದು ಸೂಚನೆ ನೀಡಿದರು.

ಆಕ್ಸಿಜನ್‌ನ ನ್ಯಾಯಸಮ್ಮತ ಬಳಕೆ ಆಗಬೇಕು. ಆಡಿಟ್‌ ಮಾಡಬೇಕು, ಅದಕ್ಕೆ ತಜ್ಞರಿರುವ ಸಮಿತಿ ರಚಿಸಬೇಕು. ಈ ರೀತಿ ಮಾಡುತ್ತಿರುವುದರಿಂದ ಆಕ್ಸಿಜನ್‌ ಮೇಲಿನ ಒತ್ತಡ ಕಡಿಮೆ ಆಗಲಿದೆ. ಜಿಲ್ಲೆಗೆ 15 ಕೆಎಲ್‌ ಆಕ್ಸಿಜನ್‌ ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಕೊರತೆ ನಿವಾರಣೆ ಆದಂತಾಗುತ್ತದೆ. ಅಗತ್ಯ ಬಿದ್ದಲ್ಲಿ ಹೆಚ್ಚಿನ ವೆಂಟಿಲೇಟರ್‌ಗಳನ್ನು ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

ಕೋವಿಡ್‌ ಕೇರ್‌ ಸೆಂಟರ್‌ ದಾಖಲು ಕಡ್ಡಾಯ
ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್‌ ಕೇರೆ ಸೆಂಟರ್‌ಗಳಿಗೆ ದಾಖಲು ಮಾಡಬೇಕು. ಪಿಎಚ್‌ಸಿ ವ್ಯಾಪ್ತಿಯಲ್ಲಿ ಒಂದು ಸಿಸಿಸಿ ಇರುವಂತೆ ನೋಡಿಕೊಳ್ಳಬೇಕು. ಪೌಷ್ಟಿಕ ಆಹಾರ, ಶುಚಿತ್ವಕ್ಕೆ ಒತ್ತು ನೀಡಬೇಕು.  ಟೆಸ್ಟ್‌ ವರದಿಗಳು ಅದೇ ದಿನ ಬರುವಂತೆ ಎಚ್ಚರವಹಿಸಬೇಕು. ಸದ್ಯ 36 ಗಂಟೆಗಳಲ್ಲಿ ಸಿಗುತ್ತಿರುವ ಅವಧಿಯನ್ನು 24 ತಾಸಿಗೆ ಇಳಿಸಬೇಕು. ಇದಕ್ಕೆ ಟಾರ್ಗೇಟೆಡ್‌ ಟೆಸ್ಟಿಂಗ್‌ ಮಾಡಬೇಕು. ಮೂರು ಪಾಳಿಯಲ್ಲಿ ಕೆಲಸ ಮಾಡಬೇಕು ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರ ನಿಗದಿಗೊಳಿಸಿರುವ ದರಕ್ಕಿಂತ ಹೆಚ್ಚು ಹಣ ಪಡೆಯಬಾರದು. ಸಿಟಿ ಸ್ಕ್ಯಾನ್‌ ಮಾಡಿಸಿಕೊಂಡವರಿಗೂ ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ಹಣ ಪಡೆಯಬಾರದು. ಒಂದು ವೇಳೆ ಆ ರೀತಿ ಹಣ ಪಡೆದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಜರುಗಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದರಾದ ಶಿವಕುಮಾರ್‌ ಉದಾಸಿ, ಗದ್ದಿಗೌಡರ್‌, ಮಾಜಿ ಸಚಿವರಾದ ಎಚ್‌.ಕೆ. ಪಾಟೀಲ್‌, ಶಾಸಕರಾದ ರಾಮಣ್ಣ ರಮಣ್‌, ಎಂಎಲ್ಸಿ ಸಂಕನೂರ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com