ಸಮಯೋಚಿತ ಕ್ರಮಗಳಿಂದ ಆಕ್ಸಿಜನ್‌ ಕೊರತೆ ನಿವಾರಣೆ: ಸಚಿವ ಸುಧಾಕರ್‌

ಆಕ್ಸಿಜನ್‌ ಸರಬರಾಜಿನಲ್ಲಿ ತಾಂತ್ರಿಕ ದೋಷದಿಂದ ಉಂಟಾಗಿದ್ದ ಕೊರತೆಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.
ಸಚಿವ ಡಾ. ಕೆ. ಸುಧಾಕರ್
ಸಚಿವ ಡಾ. ಕೆ. ಸುಧಾಕರ್
Updated on

ಬೆಂಗಳೂರು: ಆಕ್ಸಿಜನ್‌ ಸರಬರಾಜಿನಲ್ಲಿ ತಾಂತ್ರಿಕ ದೋಷದಿಂದ ಉಂಟಾಗಿದ್ದ ಕೊರತೆಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ಹೇಳಿದ್ದಾರೆ.

ಸೋಮವಾರ ಮತ್ತು ಮಂಗಳವಾರ ಎರಡು ದಿನಗಳಿಗೆ ಸೀಮಿತವಾದಂತೆ ರಾಜ್ಯಕ್ಕೆ ಸಿಗಬೇಕಿದ್ದ ಒಟ್ಟು ಆಕ್ಸಿಜನ್‌ ಪ್ರಮಾಣದಲ್ಲಿ 28.64 ಮೆಟ್ರಿಕ್‌ ಟನ್‌ನಷ್ಟು ಕೊರತೆ ಎದುರಾಗಿತ್ತು. ಉತ್ಪಾದನಾ ಘಟಕಗಳಲ್ಲಿ ತಲೆದೂರಿದ್ದ ತಾಂತ್ರಿಕ ದೋಷಗಳಿಂದ ಈ ಸಮಸ್ಯೆ ಉಂಟಾಗಿತ್ತು. ಆದರೆ ಸಮಯೋಚಿತ ಕ್ರಮಗಳಿಂದ ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. 

ಈ ಬೆಳವಣಿಗೆಯಿಂದ ಕೋವಿಡ್‌ ರೋಗಿಗಳ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ರಾಜ್ಯದ ಎಲ್ಲೆಡೆ ಎಲ್ಲಿಯೂ ಕೊರತೆ ಕಾಣಿಸಿಕೊಳ್ಳದಂತೆ ಪರಿಸ್ಥಿತಿಯನ್ನು ನಿಭಾಯಿಸಲಾಗಿದೆ. ಲಭ್ಯವಿದ್ದ ಆಕ್ಸಿಜನ್‌ ಅನ್ನು ನ್ಯಾಯಸಮ್ಮತ ರೀತಿಯಲ್ಲಿ ಬಳಕೆ ಮಾಡಿಕೊಳ್ಳಲಾಯಿತು. ಈ ಸಂಬಂಧ ಎಲ್ಲಾ ಜಿಲ್ಲಾಡಳಿತಗಳಿಗೆ ಮಾರ್ಗಸೂಚಿ ನೀಡಲಾಗಿದೆ. ಜತೆಗೆ ಹೆಚ್ಚುವರಿ ದಾಸ್ತಾನನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿದ್ದರಿಂದ ಇದು ಸಾಧ್ಯವಾಯಿತು ಎಂದಿದ್ದಾರೆ. 

ಮರು ಹೊಂದಾಣಿಕೆ 

ಕೇಂದ್ರದ “ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲುʼ ಸೋಮವಾರ ನಗರಕ್ಕೆ ಆಗಮಿಸಿತು. ಅದರಿಂದ 130 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಲಭ್ಯವಾಯಿತು. ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ 120 ಮೆಟ್ರಿಕ್‌ ಟನ್‌ ದಾಸ್ತಾನು ಇತ್ತು. ಉಳಿದಂತೆ ಜಿಲ್ಲೆಗಳಲ್ಲಿ ೧೦೦ ಮೆಟ್ರಿಕ್‌ ಟನ್‌ ದಾಸ್ತಾನು ಇತ್ತು. ಇದನ್ನು ಬೇಡಿಕೆಗೆ ಅನುಗುಣವಾಗಿ ಮರು ಹೊಂದಾಣಿಕೆ ಮಾಡಿ ತಲುಪಿಸುವ ಕೆಲಸ ಮಾಡಲಾಯಿತು.  ಹೀಗಾಗಿ ರಾಜ್ಯಾದ್ಯಂತ ಎಲ್ಲಿಯೂ ಆಕ್ಸಿಜನ್‌ ಕೊರತೆ ಎದುರಾಗದಂತೆ ನೋಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಬಳ್ಳಾರಿಯ ಉತ್ಪಾದನಾ ಘಟಕಗಳಲ್ಲಿ ತಲೆದೂರಿದ್ದ ತಾಂತ್ರಿಕ ದೋಷ ಎರಡು ದಿನ ಮಾತ್ರ ಎಂದು ಆಡಳಿತ ಮಂಡಳಿಗಳು ತಿಳಿಸಿವೆ.

ಮಂಗಳವಾರ ಸಂಜೆ ವೇಳೆಗೆ ಪರಿಸ್ಥಿತಿ ಸುಧಾರಣೆ ಆಗುವ ನಿರೀಕ್ಷೆಯಿದೆ. ಹೀಗಾಗಿ ಬುಧವಾರದಿಂದ ಆಕ್ಸಿಜನ್‌ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ಮಧ್ಯೆ ರಾಜ್ಯಕ್ಕೆ ನಿಗದಿಪಡಿಸಿದ್ದ 1015 ಮೆಟ್ರಿಕ್‌ ಟನ್‌ ಆಕ್ಸಿಜನ್‌  ಪ್ರಮಾಣವನ್ನು ಕೇಂದ್ರವು 1200 ಮೆಟ್ರಿಕ್‌ ಟನ್‌ಗಳಿಗೆ ಹೆಚ್ಚಿಸಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಚಿವ ಸಂಪುಟ ಸಹೋದ್ಯೋಗಿಗಳು ಕೇಂದ್ರದ ಸಚಿವರ ಜತೆ ನಿರಂತರ ಸಂಪರ್ಕ ಇಟ್ಟುಕೊಂಡು ರಾಜ್ಯದ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಈ ಹೆಚ್ಚಳ ಮಾಡಲಾಗಿದೆ. ಜತೆಗೆ ನೆರೆಯ ಮಹಾರಾಷ್ಟ್ರದಿಂದಲೇ ನಮಗೆ ಅಲಾಟ್‌ ಮಾಡಿರುವುದರಿಂದ ಸರಬರಾಜಿಗೂ ಹೆಚ್ಚು ಅನುಕೂಲ ಆಗಲಿದೆ ಎಂದು ಸಚಿವ ಸುಧಾಕರ್‌ ತಿಳಿಸಿದ್ದಾರೆ. 
 
ಪದನಾಮ ಆದೇಶ 

ಕಳೆದ ಆರು ತಿಂಗಳಿಂದ ಸಚಿವಾಲಯದಲ್ಲಿ ನನೆಗುದಿಗೆ ಬಿದ್ದಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿಗಳ ಪದನಾಮ ಬದಲಾವಣೆ ಕಡತವನ್ನು ವಿಲೇವಾರಿ ಮಾಡಲಾಗಿದೆ. ಹೀಗಾಗಿ ಅನೇಕ ದಿನಗಳಿಂದ ಬಾಕಿ ಉಳಿದಿದ್ದ ಸಿಬ್ಬಂದಿ ಬೇಡಿಕೆಯನ್ನು ಈಡೇರಿಸಿದಂತಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com