ಬೆಳಗಾವಿ: ಬಿಮ್ಸ್ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ, ಕೋವಿಡ್ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಮಾಧ್ಯಮಗಳ ವರದಿ ನಂತರ ಆಸ್ಪತ್ರೆಗೆ ಶನಿವಾರ ಬೆಳಗ್ಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಸ್ಪತ್ರೆಯ ಅವ್ಯವಸ್ಥೆ ಕಂಡು ಹೌಹಾರಿದರು.
ಕೋವಿಡ್ ವಾರ್ಡ್ ನ ಸ್ಥಿತಿ ಕಂಡು ಇದೇನು ಆಸ್ಪತ್ರೆಯೇ, ದನದ ಕೊಟ್ಟಿಗೆ ಇದಕ್ಕಿಂತ ಚೆನ್ನಾಗಿರುತ್ತದೆ ಎಂದು ಬಿಮ್ಸ್ ನಿರ್ದೇಶಕ ವಿನಯ್ ಜಾಸ್ತಿಕೊಪ್ಪಗೆ ಅವರನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಬಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್ ಗೆ ಭೇಟಿ ನೀಡಿದ ಡಿಸಿಎಂ ಲಕ್ಷ್ಮಣ ಸವದಿ ಪಿಪಿಇ ಕಿಟ್ ಧರಿಸಿ ವೈದ್ಯರೊಂದಿಗೆ ರೋಗಿಗಳಿರುವಲ್ಲಿಗೆ ಹೋಗಿ ತಪಾಸಣೆ ನಡೆಸಿದರು. ಕೋವಿಡ್ ನ ತೀವ್ರ ನಿಗಾ ಘಟಕ, ಸಾಮಾನ್ಯ ವಾರ್ಡ್ ನ ಅವ್ಯವಸ್ಥೆ ಕಂಡು ಕೆಂಡಮಂಡಲರಾದರು.
ಸರಿಯಾದ ಸಮಯದಲ್ಲಿ ಆಹಾರ ಬರುವುದಿಲ್ಲ, ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂದು ರೋಗಿಗಳು ಉಪ ಮುಖ್ಯಮಂತ್ರಿಗಳಲ್ಲಿ ಆರೋಪವನ್ನು ಮಾಡಿದರು. ಈ ವೇಳೆ ಸೋಂಕಿತರ ಪಕ್ಕದಲ್ಲಿ ಕೋವಿಡ್ ನಿಂದ ಮೃತಪಟ್ಟ ಶವ ಕಂಡು ಡಿಸಿಎಂ ಹೌಹಾರಿದರು. ಶವವನ್ನು ಇಲ್ಲೇ ಇಟ್ಟುಕೊಂಡರೆ ಉಳಿದ ರೋಗಿಗಳ ಪಾಡೇನು, ಅವರಲ್ಲಿ ಯಾವ ಭಾವನೆ ಮೂಡುತ್ತದೆ ಹೇಳಿ ಎಂದು ನಿರ್ದೇಶಕ ವಿನಯ್ ದಾಸ್ತಿಕೊಪ್ಪಗೆ ತರಾಟೆ ತೆಗೆದುಕೊಂಡರು.
ಕೋವಿಡ್ ವಾರ್ಡ್ ಪರಿಶೀಲನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಮಾಧ್ಯಮಗಳಿಂದ ಕೇಳಿ ತಿಳಿದುಕೊಂಡಿದ್ದೇನೆ. ಬಿಮ್ಸ್ ನಿರ್ದೇಶಕರಿಗೆ ಈ ಹಿಂದೆ ಕೂಡ ಎಚ್ಚರಿಕೆ ನೀಡಿದ್ದೆ. ಸಿಎಂ ವಿಡಿಯೊ ಕಾನ್ಫರೆನ್ಸ್ ಮುಗಿದ ಮೇಲೆ ಮಾತನಾಡುತ್ತೇನೆ. ಅಲ್ಲಿನ ಪರಿಸ್ಥಿತಿ ಕಂಡು ನನಗೂ ಗೊಂದಲವಾಗುತ್ತಿದೆ. ಆಸ್ಪತ್ರೆ ಸಿಬ್ಬಂದಿಗೆ ಇನ್ನು ಯಾವ ಭಾಷೆಯಲ್ಲಿ ಹೇಳಬೇಕೊ ಅರ್ಥವಾಗುತ್ತಿಲ್ಲ ಎಂದರು.
Advertisement