
ಬೆಂಗಳೂರು: ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸಿರುವ ಕೊರೊನಾ ನಿರೋಧಕ ಲಸಿಕೆ ಕೊವ್ಯಾಕ್ಸಿನ್ ಅನ್ನು 2 ರಿಂದ 18 ವರ್ಷ ವಯಸ್ಸಿನ ಮಕ್ಕಳ ಮೇಲೆ ಪ್ರಯೋಗ ನಡೆಸುವ ಸಂಬಂಧ ಕ್ಲಿನಿಕಲ್ ಟ್ರಯಲ್ಸ್ ಗೆ ದೇಶದ ಐದು ವೈದ್ಯಕೀಯ ಸಂಸ್ಥೆಗಳಿಗೆ ಸಾಂಸ್ಥಿಕ ನೈತಿಕ ಸಂಸ್ಥೆ ಅನುಮತಿ ನೀಡಿದೆ.
ಮೂರು ವಯೋಮಾನ ಗುಂಪಿನ ಒಟ್ಟು 525 ಮಕ್ಕಳು ಪ್ರಯೋಗದ ಭಾಗವಾಗಲಿದ್ದು, ಮಕ್ಕಳಲ್ಲಿ ಲಸಿಕೆಯ ಸುರಕ್ಷತೆ, ರಿಯಾಕ್ಟೋಜೆನಿಸಿಟಿ ಹಾಗೂ ಇಮ್ಯುನೊಜೆನೆಸಿಟಿಯನ್ನು ನಿರ್ಣಯಿಸಲಾಗುತ್ತದೆ.
ಅಮೆರಿಕಾದದಲ್ಲಿ ಫಿಜರ್ ಸಂಸ್ಥೆಯ ಪ್ರಯೋಗಕ್ಕಾಗಿ 12-15 ವರ್ಷ ವಯಸ್ಸಿನ 2,260 ಮಕ್ಕಳನ್ನು ದಾಖಲಿಸಿದೆ. ಮಾಡರ್ನಾ ಅಮೆರಿಕಾ ಹಾಗೂ ಕೆನಡಾದಲ್ಲಿ ಆರು ತಿಂಗಳ ನಿಂದ 11 ವರ್ಷದೊಳಗಿನ ಸುಮಾರು 6,750 ಮಕ್ಕಳನ್ನು ನೊಂದಾಯಿಸಿಕೊಂಡಿದೆ.
ಭಾರತದಲ್ಲಿ 2-6 ವರ್ಷಗಳು, 6-12 ವರ್ಷಗಳು ಹಾಗೂ 12 -18 ವರ್ಷಗಳು ಮೂರು ವಯೋಮಾನ ಗುಂಪಿನಲ್ಲಿ ಪ್ರತಿ ವಯಸ್ಸಿನಲ್ಲೂ 175 ಮಕ್ಕಳಿಗೆ ಲಸಿಕೆ ನೀಡಲಿದ್ದು, ಪ್ರಸ್ತುತ, ಪ್ರತಿ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿ ವಯಸ್ಸಿನ ಕನಿಷ್ಠ 35 ಮಕ್ಕಳಿಗೆ ಲಸಿಕೆ ಪ್ರಯೋಗ ನಡೆಸುವ ಗುರಿಯನ್ನು ಹೊಂದಿದೆ.
ಕ್ಲಿನಿಕಲ್ ಟ್ರಯಲ್ ರಿಜಿಸ್ಟ್ರಿ ಪ್ರಕಾರ, ಕಾನ್ಪುರದ ಪ್ರಖರ್ ಆಸ್ಪತ್ರೆ, ಪಾಟ್ನಾದ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿ ಆರ್), ಹೈದ್ರಾಬಾದ್ ಪ್ರಣಮ್ ಆಸ್ಪತ್ರೆ, ನಾಗ್ಪುರದ ಮೆಡಿಟ್ರಿನಾ ವೈದ್ಯಕೀಯ ವಿಜ್ಞಾನ ಸಂಸ್ಥೆ ಕ್ಲಿನಿಕಲ್ ಪ್ರಯೋಗಗಳು ನಡೆಸಲಿವೆ.
ದೇಶದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಸೋಂಕು ಹಬ್ಬುವಿಕೆ ಹೆಚ್ಚಾಗಿದ್ದು, ಇನ್ನು ಕೆಲ ತಿಂಗಳ ಬಳಿಕ ಮೂರನೇ ಅಲೆ ಬರುವ ಸಾಧ್ಯತೆಯೂ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮುಂದಿನ ಸನ್ನಿವೇಶಗಳನ್ನು ಎದುರಿಸಲು ಸಜ್ಜಾಗಿರಬೇಕಾದ ಅನಿವಾರ್ಯತೆ ಎದುರಾಗಿದ್ದು, ಈ ನಿಟ್ಟಿನಲ್ಲಿ 2 ರಿಂದ 18 ವರ್ಷದ ಮಕ್ಕಳಿಗೆ ನೀಡಲು ಎರಡು ಹಾಗೂ ಮೂರನೇ ಹಂತದ ವೈದ್ಯಕೀಯ ಪರೀಕ್ಷೆ ಆರಂಭಿಸುವಂತೆ ತಜ್ಞರ ಸಮಿತಿ ಭಾರತ್ ಬಯೋಟೆಕ್ ಸಂಸ್ಥೆಗೆ ಅನುಮತಿ ಕಲ್ಪಿಸಿದೆ.
Advertisement