ಪುನೀತ್ ಎರಡು ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ನೀಡಿದ್ದು ಹೇಗೆ? ನೇತ್ರತಜ್ಞ ಡಾ ಭುಜಂಗ ಶೆಟ್ಟಿ ವಿವರಿಸಿದ್ದು ಹೀಗೆ

ಕಳೆದ ಶುಕ್ರವಾರ ತೀವ್ರ ಹೃದಯಾಘಾತದಿಂದ ದಿಢೀರನೆ ಅಗಲಿದ ಪುನೀತ್ ರಾಜ್ ಕುಮಾರ್ ಅವರ ನೇತ್ರಗಳನ್ನು ಅವರ ಕುಟುಂಬಸ್ಥರು ತೀವ್ರ ಆಘಾತ-ದುಃಖದ ನಡುವೆಯೂ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದರು. 
ಪುನೀತ್ ರಾಜ್ ಕುಮಾರ್, ಡಾ ಭುಜಂಗ ಶೆಟ್ಟಿ(ಸಂಗ್ರಹ ಚಿತ್ರ)
ಪುನೀತ್ ರಾಜ್ ಕುಮಾರ್, ಡಾ ಭುಜಂಗ ಶೆಟ್ಟಿ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಕಳೆದ ಶುಕ್ರವಾರ ತೀವ್ರ ಹೃದಯಾಘಾತದಿಂದ ದಿಢೀರನೆ ಅಗಲಿದ ಪುನೀತ್ ರಾಜ್ ಕುಮಾರ್ ಅವರ ನೇತ್ರಗಳನ್ನು ಅವರ ಕುಟುಂಬಸ್ಥರು ತೀವ್ರ ಆಘಾತ-ದುಃಖದ ನಡುವೆಯೂ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದರು. 

ಮರುದಿನ ಅಂದರೆ ಶನಿವಾರ ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಪುನೀತ್ ಅವರ ಎರಡು ಕಣ್ಣುಗಳನ್ನು ನಾಲ್ವರಿಗೆ ದಾನ ಮಾಡಲಾಗಿದೆ. ಎರಡು ಕಣ್ಣುಗಳನ್ನು ನಾಲ್ವರಿಗೆ ನೀಡಿದ್ದು ಹೇಗೆ, ಶಸ್ತ್ರಚಿಕಿತ್ಸೆ ಹೇಗೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಈ ಬಗ್ಗೆ ಡಾ ಭುಜಂಗ ಶೆಟ್ಟಿ ಹಾಗೂ ಅವರ ವೈದ್ಯಕೀಯ ತಂಡ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದು ಹೀಗೆ: 

ಮೊನ್ನೆ ಶುಕ್ರವಾರ ಪುನೀತ್ ಅವರು ನಿಧನ ಹೊಂದಿದ ನಂತರ ಮಧ್ಯಾಹ್ನ 2.30ರ ವೇಳೆಗೆ ಅವರ ಕಣ್ಣುಗಳು ದಾನವಾದವು. ಅವರ ಕಣ್ಣುಗಳನ್ನು ಸಂಗ್ರಹಿಸಿ ನಾರಾಯಣ ನೇತ್ರಾಲಯಕ್ಕೆ ತಂದು ಪರಿಶೀಲಿಸಿ ಉತ್ತಮ ಸ್ಥಿತಿಯಲ್ಲಿದ್ದರಿಂದ ಮರುದಿನವೇ ಬೇಕಾಗಿರುವ ರೋಗಿಗಳನ್ನು ಕರೆದು ಟ್ರಾನ್ಸ್ ಪ್ಲಾಂಟ್(ಕಸಿ) ಸರ್ಜರಿಯನ್ನು ಮಾಡಿ ಮುಗಿಸಿದೆವು. 

ಕಸಿ ಶಸ್ತ್ರಚಿಕಿತ್ಸೆಯನ್ನು ಡಾ ಶರಣ್ ನೇತೃತ್ವದ ಐವರು ವೈದ್ಯರ ತಂಡ ಯಶಸ್ವಿಯಾಗಿ ಮಾಡಿದ್ದಾರೆ. ಇದಕ್ಕೆ ಮಿಂಟೊ ಸರ್ಕಾರಿ ಆಸ್ಪತ್ರೆಯ ವೈದ್ಯರು ಕೂಡ ಸಹಕಾರ ನೀಡಿದ್ದಾರೆ. ಈ ಸರ್ಜರಿ ವಿಭಿನ್ನವಾಗಿತ್ತು. ಸಾಮಾನ್ಯವಾಗಿ ಕಣ್ಣುದಾನ ಮಾಡಿದರೆ ಎರಡು ಕಣ್ಣುಗಳನ್ನು ಇಬ್ಬರು ಅಂಧರಿಗೆ ನೀಡುತ್ತೇವೆ. ಅಪ್ಪು ಅವರದ್ದು ನಾಲ್ವರಿಗೆ ಕಸಿ ಮಾಡಿ ಅದು ಯಶಸ್ವಿಯಾಗಿದೆ. ಇದು ಸಾಧ್ಯವಾಗಿದ್ದು ಅತ್ಯಾಧುನಿಕ ತಂತ್ರಜ್ಞಾನದಿಂದ ಎಂದರು.

ಕಾರ್ನಿಯಾದ ಮುಂಭಾಗ ಮತ್ತು ಹಿಂಭಾಗವಿರುತ್ತದೆ. ಕಾರ್ನಿಯಾವನ್ನು ನಾವು ಒಂದು ಗ್ಲಾಸ್ ಎಂದು ತಿಳಿದುಕೊಂಡರೆ ಕೆಲವು ದೃಷ್ಟಿ ಸಮಸ್ಯೆಯಿರುವವರಿಗೆ ಮುಂಭಾಗ ಅಥವಾ ಹಿಂಭಾಗದ ಸಮಸ್ಯೆ ಮಾತ್ರ ಇರುತ್ತದೆ. ಮೊದಲೆಲ್ಲಾ ದಾನ ಮಾಡಿದವರ ಕಣ್ಣುಗಳನ್ನು ಇಡೀ ಕಾರ್ನಿಯಾವನ್ನು ಕತ್ತರಿಸಿ ದೃಷ್ಟಿಹೀನರಿಗೆ ಸಂಪೂರ್ಣವಾಗಿ ನೀಡುತ್ತಿದ್ದೆವು. 

ಈ ಬಾರಿ ಪುನೀತ್ ಅವರ ಕಣ್ಣುಗಳನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಎರಡು ಭಾಗ ಮಾಡಿದೆವು. ಇದರಿಂದ ಕಾರ್ನಿಯಾದ ಮುಂದಿನ ಭಾಗ ಯಾರಿಗೆ ಸಮಸ್ಯೆಯಿದೆಯೋ ಅವರಿಗೆ ಮುಂದಿನ ಭಾಗವನ್ನು ಕಸಿ ಮಾಡಿದ್ದೇವೆ. ಹಿಂದಿನ ಭಾಗವನ್ನು ಹಿಂದಿನ ಭಾಗದ ಕಾರ್ನಿಯಾ ಸಮಸ್ಯೆ ಹೊಂದಿರುವವರಿಗೆ ಜೋಡಿಸಿದೆವು. ಹೀಗಾಗಿ ನಾಲ್ವರಿಗೆ ದೃಷ್ಟಿ ನೀಡಲು ಸಾಧ್ಯವಾಯಿತು. ಒಂದೇ ಬಾರಿಗೆ ಒಬ್ಬರ ಕಣ್ಣುಗಳನ್ನು ನಾಲ್ಕು ಮಂದಿಗೆ ಒಂದೇ ದಿನ ಮಾಡಿದ್ದು ನಮ್ಮ ರಾಜ್ಯದಲ್ಲಿಯೇ ಮೊದಲ ಪ್ರಯತ್ನ ಎಂದರು.

ದಾನ ಮಾಡಿದ ಕಣ್ಣುಗಳು ಆರೋಗ್ಯವಾಗಿದ್ದು ಕಾರ್ನಿಯಾದ ಮುಂದಿನ ಮತ್ತು ಹಿಂದಿನ ಭಾಗದಲ್ಲಿ ಸಮಸ್ಯೆ ಹೊಂದಿರುವವರಿಗೆ ಮಾತ್ರ ಈ ರೀತಿ ಚಿಕಿತ್ಸೆ ನೀಡಲು ಸಾಧ್ಯ ಎಂದು ಡಾ ಭುಜಂಗ ಶೆಟ್ಟಿ ವಿವರಿಸಿದರು.

ನಂತರ ಡಾ ಭುಜಂಗ ಶೆಟ್ಟಿಯವರು ಸುದ್ದಿಗೋಷ್ಠಿಯಲ್ಲಿ ಕಣ್ಣಿನ ಕಸಿ ಮಾಡಿರುವ ಶಸ್ತ್ರಕ್ರಿಯೆಯ ವಿಧಾನವನ್ನು ಚಿತ್ರದ ಮೂಲಕ ವಿವರಿಸಿದರು. ಈ ಹಿಂದೆ ವೈಯಕ್ತಿಕವಾಗಿ ಮಾಡಲಾಗಿತ್ತು. ಆದರೆ ಒಂದೇ ಬಾರಿಗೆ ನಾಲ್ವರಿಗೆ ಒಟ್ಟಿಗೆ ಮಾಡಿದ್ದು ಇದೇ ಮೊದಲು, ಶಸ್ತ್ರಕ್ರಿಯೆ ಯಶಸ್ವಿ ಕೂಡ ಆಗಿರುವುದು ಖುಷಿಯ ವಿಚಾರ ಎಂದರು.

ನಾಲ್ವರಿಗೆ ಪುನೀತ್ ಕಣ್ಣುಗಳಿಂದ ಬೆಳಕು: ಪುನೀತ್ ಅವರ ಕಣ್ಣುಗಳನ್ನು ಯಾರಿಗೆ ನೀಡಲಾಗಿದೆ ಎಂದು ಹೆಚ್ಚು ವಿವರ ಬಹಿರಂಗಪಡಿಸುವುದಿಲ್ಲ. ಆದರೆ ಅವರು ಯುವ ವಯಸ್ಸಿನವರಾಗಿದ್ದು ನಿಜವಾಗಿಯೂ ಅವರ ಬಾಳಿಗೆ ಬೆಳಕು ಬೇಕಾದವರಾಗಿದ್ದರು. ಒಬ್ಬ ಯುವತಿ ಮತ್ತು ಮೂವರು ಯುವಕರಾಗಿದ್ದು ಅವರ ಬಾಳಿಗೆ ಅತ್ಯಗತ್ಯವಾಗಿತ್ತು ಎಂದರು.

ಡಾ. ಶರಣ್ ಮಾತನಾಡಿ, ಈ ಶಸ್ತ್ರಕ್ರಿಯೆಗೆ ಹೆಚ್ಚು ಪರಿಣತಿ, ಕೌಶಲ್ಯ ಬೇಕು. ಕರಿಗುಡ್ಡೆ ಮುಂಭಾಗ ತುಂಬಾ ತೆಳುವಾಗಿದ್ದು ಸೂಕ್ಷ್ಮವಾಗಿರುತ್ತದೆ. ಅದನ್ನು ಇಬ್ಭಾಗ ಮಾಡಿ ರಕ್ಷಿಸಿಟ್ಟುಕೊಂಡು ಇಬ್ಬರಿಗೆ ಆರಪೇಷನ್ ಮಾಡಿದ್ದೇವೆ. ಒಂದು ಹೊಲಿಗೆರಹಿತ ಮತ್ತು ಇನ್ನೊಂದು ಹೊಲಿಗೆ ಸಹಿತವಾಗಿರುತ್ತದೆ. ಕಣ್ಣು ಶಸ್ತ್ರಕ್ರಿಯೆ ಮಾಡಿಸಿಕೊಂಡವರನ್ನು ನಿನ್ನೆಯೂ ಇವತ್ತೂ ನಿಗಾವಹಿಸಿದ್ದು ಆರೋಗ್ಯವಾಗಿದ್ದಾರೆ ಎಂದರು.

ನೇತ್ರದಾನ ಮಾಡಿದವರ ಕಣ್ಣಿನ ಕರಿಗುಡ್ಡೆ ಮತ್ತು ಸುತ್ತಲಿನ ಬಿಳಿಗುಡ್ಡೆಯನ್ನು ಸಂಗ್ರಹಿಸಿ ಲ್ಯಾಬೊರೋಟರಿಗೆ ಕಳುಹಿಸುತ್ತೇವೆ, ಅದರಲ್ಲಿರುವ ಸ್ಟೆಮ್ ಸೆಲ್ಸ್ ಗಳು(ಕೋಶಗಳು) ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಸಮಸ್ಯೆಯಾಗಿ ನೇತ್ರಾಲಯಕ್ಕೆ ಬರುವವರಿಗೆ ಈ ಸ್ಟೆಮ್ ಸೆಲ್ಸ್ ಗಳು ಸಹಾಯವಾಗುತ್ತವೆ ಎಂದರು.

ಹೀಗಾಗಿ ಪುನೀತ್ ರಾಜ್ ಕುಮಾರ್ ಅವರ ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಬಂದಿರುವುದು ಮಾತ್ರವಲ್ಲದೆ ಸ್ಟೆಮ್ ಸೆಲ್ಸ್ ಗಳಿಂದ ಇನ್ನೂ ಕೆಲವರಿಗೆ ಉಪಯೋಗವಾಗಬಹುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com