ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೆಟ್ರೊ ರೈಲುಗಳಲ್ಲಿ ತಡರಾತ್ರಿ ಮಹಿಳಾ ಗಾರ್ಡ್ ಗಳ ಮರು ನಿಯೋಜನೆ ಸಾಧ್ಯತೆ

ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಂಚಾರ ಸ್ಥಗಿತಗೊಳಿಸಿದ್ದ ಮೆಟ್ರೋ ರೈಲುಗಳ ಸಂಚಾರ ಹಿಂದಿನ ಸಮಯಗಳಂತೆ ಆರಂಭವಾಗುವ ಹೊತ್ತಿನಲ್ಲಿ ಪ್ರತಿ ರೈಲಿನ ಮಹಿಳಾ ಬೋಗಿಯಲ್ಲಿ ರಾತ್ರಿ 10 ಗಂಟೆಯ ನಂತರ ಮಹಿಳಾ ಗಾರ್ಡ್ ಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯೋಜಿಸುವ ಸಾಧ್ಯತೆಯಿದೆ. 
Published on

ಬೆಂಗಳೂರು: ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಂಚಾರ ಸ್ಥಗಿತಗೊಳಿಸಿದ್ದ ಮೆಟ್ರೋ ರೈಲುಗಳ ಸಂಚಾರ ಹಿಂದಿನ ಸಮಯಗಳಂತೆ ಆರಂಭವಾಗುವ ಹೊತ್ತಿನಲ್ಲಿ ಪ್ರತಿ ರೈಲಿನ ಮಹಿಳಾ ಬೋಗಿಯಲ್ಲಿ ರಾತ್ರಿ 10 ಗಂಟೆಯ ನಂತರ ಮಹಿಳಾ ಗಾರ್ಡ್ ಗಳನ್ನು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯೋಜಿಸುವ ಸಾಧ್ಯತೆಯಿದೆ. 

ತಡರಾತ್ರಿ ವೇಳೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಸುರಕ್ಷತೆ ಒದಗಿಸಲು 2019ರಲ್ಲಿ ಮಹಿಳಾ ಗಾರ್ಡ್ ಗಳನ್ನು ನೇಮಿಸಲಾಗಿತ್ತು, ಕೋವಿಡ್ ಬಂದ ಮೇಲೆ ಹಿಂಪಡೆಯಲಾಗಿತ್ತು. 

ಕೋವಿಡ್ ಸೋಂಕು ಕಡಿಮೆಯಾದ ನಂತರ ಕಳೆದ ವರ್ಷ ಸೆಪ್ಟೆಂಬರ್ 7ರಂದು ಮೆಟ್ರೊ ಸಂಚಾರ ಆರಂಭಿಸಲಾಗಿತ್ತಾದರೂ ರಾತ್ರಿ 10 ಗಂಟೆಯವರೆಗೆ ಮಾತ್ರ ಸಂಚಾರವಿತ್ತು. ಇದೀಗ ಇಂದಿನಿಂದ ಬೆಳಗ್ಗೆ 6 ಗಂಟೆಯಿಂದ ರಾತ್ರಿ 11.30ರವರೆಗೆ ಮೆಟ್ರೊ ರೈಲು ಸಂಚಾರ ನಡೆಸಲಿವೆ.

ಮಹಿಳಾ ಗಾರ್ಡ್ ಗಳನ್ನು ನಿಯೋಜಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ರೈಲು ಸಂಚಾರ ಅವಧಿಯನ್ನು ರಾತ್ರಿ 10ಗಂಟೆಯ ಬಳಿಕವೂ ವಿಸ್ತರಣೆ ಮಾಡಲಾಗಿದ್ದು ಕೆಲವು ನಿಲ್ದಾಣಗಳಿಗೆ ಮಧ್ಯರಾತ್ರಿ ಹೊತ್ತಿನಲ್ಲಿ ರೈಲು ತಲುಪಲಿದೆ. ಹೀಗಾಗಿ ಮಹಿಳಾ ಗಾರ್ಡ್ ಗಳನ್ನು ನಿಯೋಜಿಸುವ ಬಗ್ಗೆ ಮರುಚಿಂತನೆ ನಡೆಸಲಾಗುತ್ತಿದೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.

ಬಿಎಂಆರ್ ಸಿಎಲ್ ಕಾರ್ಯಕಾರಿ ನಿರ್ದೇಶಕ ಎ ಎಸ್ ಶಂಕರ್ ಮಾತನಾಡಿ, ಈಗ ಪ್ರಯಾಣಿಕರ ಸಂಖ್ಯೆ ಹೆಚ್ಚಿಲ್ಲ. ಮಹಿಳೆಯರಿಂದ ಇದುವರೆಗೆ ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ. ಪ್ರತಿ ಠಾಣೆಯ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ಹಿಂದೆ ಇದ್ದಂತಹ ಭದ್ರತಾ ಸಿಬ್ಬಂದಿಯನ್ನು ಈಗ ಒದಗಿಸಲಾಗಿದೆ ಎಂದು ಹೇಳುತ್ತಾರೆ.

2019ರಲ್ಲಿ ಮಹಿಳಾ ಗಾರ್ಡ್ ಗಳನ್ನು ನಿಯೋಜಿಸಿದಾಗ ಬಿಎಂಆರ್ ಸಿಎಲ್ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು. ಈ ಬಗ್ಗೆ ಮಹಿಳಾ ಪ್ರಯಾಣಿಕರನ್ನು ಕೇಳಿದರೆ ಮಹಿಳಾ ಗಾರ್ಡ್ ಗಳ ನೇಮಕ ಕ್ರಮವನ್ನು ಸ್ವಾಗತಿಸುತ್ತಾರೆ. 

ಮೆಟ್ರೊ ರೈಲಿನ ಒಳಗೆ ಸಿಸಿಟಿವಿ ಕ್ಯಾಮರಾಗಳಿದ್ದರೂ ಮಹಿಳಾ ಗಾರ್ಡ್ ಗಳಿದ್ದರೆ ನಮ್ಮಂತಹ ಪ್ರಯಾಣಿಕರಿಗೆ ಇನ್ನಷ್ಟು ಭದ್ರತೆಯೆನಿಸುತ್ತದೆ ಎನ್ನುತ್ತಾರೆ ಚಾರ್ಟೆರ್ಡ್ ಅಕೌಂಟೆಟ್ ನಲ್ಲಿ ಇಂಟರ್ನ್ ಶೆಪ್ ಪಡೆಯುತ್ತಿರುವ ಎಸ್ ಮೊನಿಶಾ.ಇವರಂತೆ ಅನೇಕ ಮಹಿಳೆಯರು ಮಹಿಳಾ ಗಾರ್ಡ್ ಗಳ ನಿಯೋಜನೆ ಸ್ವಾಗತಿಸಿದರೆ ಖಾಸಗಿ ಬ್ಯಾಂಕಿನ ನೌಕರೆ ಶರಿನ್ ವಿಲ್ಸನ್, ಮಹಿಳಾ ಗಾರ್ಡ್ ಗಳ ನೇಮಕ ಅವಶ್ಯಕತೆಯಿದೆ ಎಂದು ಅನಿಸುವುದಿಲ್ಲ, ನಮಗೆ ಪ್ರತ್ಯೇಕ ಬೋಗಿಯಿರುತ್ತದೆ. ಅಲ್ಲದೆ ರೈಲು ಪ್ರತಿ ಸ್ಟೇಷನ್ ಗೆ 2 ನಿಮಿಷದೊಳಗೆ ತಲುಪುತ್ತದೆ. ಎಲ್ಲಾ ನಿಲ್ದಾಣಗಳಲ್ಲಿ ಪೊಲೀಸರು ಇರುತ್ತಾರೆ. ಅಗತ್ಯವಿದ್ದರೆ ಅವರ ಸಹಾಯ ಪಡೆಯಬಹುದಲ್ಲವೇ ಎನ್ನುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com