ಪೇಜಾವರ ಹಿರಿಯ ಶ್ರೀಗಳ ಬಗ್ಗೆ ಹೇಳಿಕೆ: ಹಂಸಲೇಖ ವಿಚಾರಣೆಗೆ ಹಾಜರು, ಪೊಲೀಸ್ ಠಾಣೆ ಬಳಿ ಹೈಡ್ರಾಮಾ; ಒಂದು ತಾಸಿನ ನಂತರ ನಿರ್ಗಮನ
ಬೆಂಗಳೂರು: ದಲಿತರ ಮನೆಯಲ್ಲಿ ಬಲಿತರು ಬಂದು ಮಾಂಸಾಹಾರ ಸೇವಿಸುವುದು, ಪೇಜಾವರದ ಹಿರಿಯ ಯತಿಗಳು ದಲಿಕೇರಿಗೆ ಹೋಗುತ್ತಿದ್ದ ಬಗ್ಗೆ ಹೇಳಿಕೆ ನೀಡಿ ತೀವ್ರ ವಿವಾದ ಉಂಟಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಹಿನ್ನೆಲೆಯಲ್ಲಿ ಹಿರಿಯ ಸಂಗೀತ ನಿರ್ದೇಶಕ ಡಾ ಹಂಸಲೇಖ ಗುರುವಾರ ಬಸವನಗುಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಹಂಸಲೇಖ ಸಮಾಜದಲ್ಲಿ ಸ್ವಾಸ್ಥ್ಯ ಕೆಡಿಸಲು ಪ್ರಯತ್ನಿಸಿದ್ದಾರೆ, ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆ ನೀಡಿ ಅವಮಾನ ಮಾಡಿದ್ದಾರೆ ಎಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೊಟೀಸ್ ನೀಡಿದ್ದರು. ಇಷ್ಟು ದಿನ ವಿಚಾರಣೆಗೆ ಸಮಯಾವಕಾಶ ಕೇಳಿದ್ದ ಸಂಗೀತ ನಿರ್ದೇಶಕರು ಇಂದು ಮಧ್ಯಾಹ್ನ ತೀವ್ರ ಭದ್ರತೆ ನಡುವೆ ಪೊಲೀಸ್ ಠಾಣೆಗೆ ಆಗಮಿಸಿದರು.
ತನಿಖಾಧಿಕಾರಿಯೊಬ್ಬರು ಹಂಸಲೇಖ ಅವರ ಹೇಳಿಕೆಯನ್ನು ದಾಖಲಿಸಿಕೊಂಡರು ಮತ್ತು ಶ್ರೀಗಳ ವಿರುದ್ಧ ಹೇಳಿಕೆ ನೀಡಲು ಕಾರಣವಾದ ಉದ್ದೇಶ ಕುರಿತು ಅವರನ್ನು ಪ್ರಶ್ನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಮ್ಮ ಭಾಷಣದ ವೇಳೆ ಸಂದರ್ಭಕ್ಕನುಸಾರವಾಗಿ ಪ್ರಸ್ತಾಪಿಸಿದ್ದಾಗಿ, ಯಾವುದೇ ವ್ಯಕ್ತಿ ಅಥವಾ ಗುಂಪಿಗೆ ನೋವುಂಟು ಮಾಡುವ ಉದ್ದೇಶ ನನಗಿಲ್ಲ, ಒಂದು ದಿನದ ನಂತರ ಕ್ಷಮೆ ಕೇಳಿದರೂ ಅನಗತ್ಯವಾಗಿ ಎಳೆದು ತರಲಾಗುತ್ತಿದೆ ಎಂದು ಹಂಸಲೇಖ ಸ್ಪಷ್ಟಪಡಿಸಿದ್ದಾರೆ. ಒಂದು ಗಂಟೆ ಕಾಲದ ನಂತರ ಅವರು ಠಾಣೆಯಿಂದ ನಿರ್ಗಮಿಸಿದರು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಪೊಲೀಸ್ ಠಾಣೆ ಮುಂದೆ ಹೈಡ್ರಾಮವೇ ನಡೆಯಿತು. ಹಂಸಲೇಖ ಪರ ಮತ್ತು ವಿರೋಧಿಗಳು ಪ್ರತಿಭಟನೆ ನಡೆಸಿದರು. ಈ ಮಧ್ಯೆ ನಟ ಚೇತನ್ ಹಂಸಲೇಖ ಪರ ವಹಿಸಿ ಮಾತನಾಡಿ ನಾನು ಕೂಡ ಪೊಲೀಸ್ ಠಾಣೆಗೆ ಬಂದು ಅವರಿಗೆ ಸಾಥ್ ಕೊಡುತ್ತೇನೆ ಎಂದಿದ್ದರು.
ಅದಕ್ಕೆ ಭಜರಂಗದಳ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಚೇತನ್ ಬಂದರೆ ಕಪ್ಪು ಬಾವುಟ ಪ್ರದರ್ಶಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಭಜರಂಗದಳ ಮುಖಂಡ ತೇಜಸ್ ಮಾತನಾಡಿ, ಸಂಗೀತ ನಿರ್ದೇಶಕ ಹಂಸಲೇಖ ಅವರು ಬೇಷರತ್ ಕ್ಷಮೆಯಾಚಿಸಬೇಕು. ಈ ವಿಷಯದಲ್ಲಿ ನಟ ಚೇತನ್ ಏಕೆ ಮಧ್ಯೆ ಪ್ರವೇಶಿಸಬೇಕು, ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ, ಚೇತನ್ ಈ ದೇಶದ ನಾಗರಿಕನೇ ಅಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಮಧ್ಯೆ ಬಸವನಗುಡಿ ಪೊಲೀಸ್ ಠಾಣೆ ಬಳಿ ಬಂದ ನಟ ಚೇತನ್ ಮತ್ತು ಕಾರ್ಯಕರ್ತರನ್ನು ಪೊಲೀಸರು ತಡೆದ ಪ್ರಸಂಗ ನಡೆಯಿತು. ಹಂಸಲೇಖ ಅವರಿಗೆ ಚೇತನ್ ಜೊತೆಗೆ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ.
ಪೊಲೀಸ್ ಠಾಣೆಯ ಮುಂದೆ ಪರ ವಿರೋಧಿಗಳು ಸೇರಿ ಪ್ರತಿಭಟನೆ ಮಾಡುತ್ತಿರುವುದರಿಂದ ವಿಪರೀತ ಗೊಂದಲ, ಹಾಗೂ ಮತ್ತಷ್ಟು ಸಮಸ್ಯೆ ಏರ್ಪಟ್ಟಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ