ಬೆಳಗಾವಿ: ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಜಿಲ್ಲೆಯ ಖಾನಾಪುರ ಹೊರವಲಯದಲ್ಲಿ ಸೆ.28ರಂದು ನಡೆದಿದ್ದ ಯುವಕನ ಕೊಲೆ ಪ್ರಕರಣದ ಹಂತಕರನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಯುವತಿಯ ತಂದೆ ಈರಪ್ಪ ಕಂಬಾರ, ತಾಯಿ ಸುಶೀಲಾ ಕಂಬಾರ, ಶ್ರೀರಾಮಸೇನಾ ಹಿಂದೂಸ್ತಾನ್ ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕ ಅಲಿಯಾಸ್ ಮಹಾರಾಜ ಮುತಗೇಕರ್, ಕುತಬುದ್ದೀನ್ ಬೇಪಾರಿ, ಪ್ರಲ್ಹಾದ್ ಸುಗತೆ, ಮಂಜುನಾಥ ಗೋಂದಳಿ, ಗಣಪತಿ ಸುಗತೆ, ಪ್ರಶಾಂತ ಪಾಟೀಲ್, ಪ್ರವೀಣ್ ಪೂಜೇರಿ, ಶ್ರೀಧರ್ ಡೋಣಿ ಸೇರಿ ಒಟ್ಟು 10 ಜನ ಬಂಧಿತ ಆರೋಪಿಗಳು.
ಸೆ. 28ರಂದು ಅರ್ಬಾಜ್ ಮೃತದೇಹ ಖಾನಾಪುರ ಹೊರವಲಯದ ರೈಲು ಹಳಿಯಲ್ಲಿ ಕೈಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ಸಂಬಂಧ ಆತ ತಾಯಿ ನಾಜಿಮಾ ಶೇಖ್ ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ರೈಲ್ವೆ ಪೊಲೀಸ್ ಠಾಣೆಯಿಂದ ಈ ಪ್ರಕರಣ ಖಾನಾಪುರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿತ್ತು. ಬೈಲಹೊಂಗಲ ಡಿವೈಎಸ್ಪಿ ಶಿವಾನಂದ ಕಟಗಿ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಜಿಲ್ಲಾ ಪೊಲೀಸರಿಗೆ ಪ್ರಕರಣ ವರ್ಗಾವಣೆಗೊಳ್ಳುತ್ತಿದ್ದಂತೆ ತೀವ್ರತೆ ಪಡೆದ ತನಿಖೆ ಕ್ಲಿಷ್ಟಕರ ಕೇಸ್ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಯುವತಿಯ ಪಾಲಕರು ಶ್ರೀರಾಮಸೇನಾ ಹಿಂದೂಸ್ತಾನ್ ತಾಲೂಕು ಘಟಕದ ಅಧ್ಯಕ್ಷ ಪುಂಡಲೀಕರಿಗೆ ಅರ್ಬಾಜ್ ನನ್ನು ಕೊಲೆ ಮಾಡಲು ಸುಪಾರಿ ನೀಡಿದ್ದರು. ಅಂತೆಯೇ ಸೆ.28ರಂದು ಅರ್ಬಾಜ್ ನನ್ನು ಕರೆಸಿಕೊಂಡಿದ್ದ ಆರೋಪಿಗಳು ಹಣ ಪಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.
ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಯುವಕನ ಮೃತದೇಹ ರೈಲ್ವೇ ಹಳಿ ಮೇಲೆ ಎಸೆದು ಪರಾರಿಯಾಗಿದ್ದರು ಎಂಬುದು ಸದ್ಯ ಪ್ರಾಥಮಿಕ ತನಿಖೆಯಿಂದ ಬಹಿರಂಗಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ ಎಂದರು.
Advertisement