ಮುಜರಾಯಿ ಇಲಾಖೆ ಅರ್ಚಕರು ಹಾಗೂ ದೇವಾಲಯ ನೌಕರರಿಗೆ ದಸರಾ ಬಂಪರ್ ಕೊಡುಗೆ
ಬೆಂಗಳೂರು: ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ನೌಕರರಿಗೆ ಮುಜರಾಯಿ ಇಲಾಖೆ ದಸರಾ ಹಬ್ಬಕ್ಕೆ ಬಂಪರ್ ಕೊಡುಗೆ ನೀಡಿದೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಜರಾಯಿ ಹಜ್ ಮತ್ತು ವಕ್ಪ್ ಸಚಿವರಾದ ಶಶಿಕಲಾ ಜೊಲ್ಲೆ ಅವರು, ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರಿಗೆ ವಿಮಾ ಯೋಜನೆ ಹಾಗೂ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿಗೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಅರ್ಚಕರು ಹಾಗೂ ದೇವಾಲಯ ಸಿಬ್ಬಂದಿ ಆರೋಗ್ಯ ಸಮಸ್ಯೆಗೆ ಒಳಗಾದರೆ ಅವರಿಗೆ ರಕ್ಷಣ ಒದಗಿಸಲು ನಾನು ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ಮೇಲೆ ವಿನೂತನ ವಿಮೆ ಯೋಜನೆ ಜಾರಿಗೊಳಿಸಿದ್ದು, ಅರ್ಚಕರು ಹಾಗೂ ಇಲಾಖೆ ನೌಕರರಿಗೆ ವಿಮೆ ಜಾರಿಗೊಳಿಸಲಾಗುತ್ತಿದೆ. ಇದರಿಂದ ಮುಜರಾಯಿ ಇಲಾಖೆಯ ಸುಮಾರು 37,000 ಸಿಬ್ಬಂದಿಗೆ ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದ್ದಾರೆ.
ಮುಜರಾಯಿ ಇಲಾಖೆಯ ಎ ಮತ್ತು ಬಿ ಶ್ರೇಣಿಯ ಸಿಬ್ಬಂದಿಗೆ ಆರನೇ ವೇತನ ಆಯೋಗದ ಶ್ರೇಣಿ ಜಾರಿಗೊಳಿಸಲಾಗಿದೆ. ಮುಜರಾಯಿ ಇಲಾಖೆಯ ಎ ಮತ್ತು ಬಿ ಅಧಿಸೂಚಿತ ಧಾರ್ಮಿಕ ಸಂಸ್ಥೆಗಳಲ್ಲಿ ಈಗಾಗಲೇ 5ನೇ ವೇತನ ಶ್ರೇಣಿ ಸೌಲಭ್ಯ ಪಡೆದು ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ 6ನೇ ವೇತನ ಆಯೋಗ ಶ್ರೇಣಿ ಜಾರಿಯಾಗಿರಲಿಲ್ಲ. 6ನೇ ವೇತನ ಶ್ರೇಣಿಯನ್ನು ಜಾರಿಗೊಳಿಸಬೇಕೆಂಬುದು ಹಲವಾರು ವರ್ಷಗಳ ಬೇಡಿಕೆಯಾಗಿತ್ತು. ಈಗ ಅದನ್ನು ಈಡೇರಿಸಲಾಗಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ