ಬೆಂಗಳೂರು: ಹಿಂದುಳಿದವರು, ತುಳಿತಕ್ಕೊಳಗಾದವರು, ಜನ ಸಾಮಾನ್ಯರು ಸೇರಿದಂತೆ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ನೀಡುವ ಮನೋಭಾವವನ್ನು ಸದಾ ಹೊಂದಿರಬೇಕು ಎಂದು ‘ಯುಪಿಎಸ್ಸಿ-2020’ರಲ್ಲಿ ಕರ್ನಾಟಕದಿಂದ ಆಯ್ಕೆಯಾದವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ಕಿವಿ ಮಾತು ಹೇಳಿದರು.
ರಾಜ್ಯದ 31 ಸಾಧಕರಿಗೆ ‘ಇಂಡಿಯಾ 4 ಐಎಎಸ್’ ಅಕಾಡೆಮಿ ಬೆಂಗಳೂರಿನ ಡಾ.ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಸಚಿವ ಬಿ.ಸಿ ನಾಗೇಶ್ ಮಾತನಾಡಿದರು.
‘ಯುಪಿಎಸ್‌ಸಿ/ಐಎಎಸ್ ಪಾಸ್ ಮಾಡಿರುವವರಿಗೆ ‘ಐಎಎಸ್ ಫಾರ್ ಭಾರತ’ ಎನ್ನುವ ಮನೋಭಾವ ಎಂದೆಂದಿಗೂ ಮನಸ್ಸಿನಲ್ಲಿರಬೇಕು. ಐಎಎಸ್ ಪಾಸ್ ಮಾಡಿದ್ದೇನೆ ಎನ್ನುವ ಮನೋಭಾವವನ್ನು ತಲೆಯಿಂದ ತೆಗೆದು ಸೇವಾ ಮನೋಭಾವದೊಂದಿಗೆ ಕೆಲಸ ಮಾಡಬೇಕು. ನನಗೆ ಎಲ್ಲ ಗೊತ್ತಿದೆ ಎನ್ನುವುದಕ್ಕಿಂತ ತರಬೇತಿ ಹಂತದಲ್ಲಿ ಎಲ್ಲವನ್ನು ಕಲಿಯುವ ಪ್ರಯತ್ನ ಮಾಡಬೇಕು. ಜನಸಾಮಾನ್ಯರು ದೂರುಗಳನ್ನು, ಸಮಸ್ಯೆಗಳನ್ನು ಹೊತ್ತು ತಂದಾಗ ಅವುಗಳನ್ನು ಕೇಳಿಸಿಕೊಳ್ಳಬೇಕು. ಸಮಾಜದ ಒಳಿತಿಗಾಗಿ ನೀಡುವ ಸಲಹೆ ಸೂಚನೆಗಳು ಬಂದಾಗ ಕೇಳಿಸಿಕೊಳ್ಳುವ ವ್ಯವಧಾನ ತೋರಬೇಕು. ಕಚೇರಿಗೆ ಬರುವವರನ್ನು ಕಾಯಿಸದೆ ಆದಷ್ಟು ಬೇಗ ಅಹವಾಲು ಆಲಿಸಿ ಪರಿಹಾರ ಕೊಡುವ ಪ್ರಯತ್ನ ಮಾಡಬೇಕು. ಈ ಮೂರು ಪ್ರಮುಖ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಆಗ ಯಶಸ್ವಿ ಐಎಎಸ್ ಅಧಿಕಾರಿಯಾಗಲು ಸಾಧ್ಯ’ ಎಂದು ಸಚಿವರು ಸಲಹೆ ನೀಡಿದರು.
‘ಉನ್ನತ ಸ್ಥಾನದಲ್ಲಿ ಇರುವವರು, ಪ್ರಭಾವ, ಶಿಫಾರಸ್ಸು ಹೊಂದಿರುವವರಿಗೆ ಉನ್ನತ ಅಧಿಕಾರಿಗಳ ಬಳಿ ತೆರಳಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ತುಳಿತಕ್ಕೊಳಗಾದವರು, ಬಡವರು, ಅನಕ್ಷರಸ್ಥರು ಸೇರಿದಂತೆ ಹಲವರಿಗೆ ಐಎಎಸ್ ಎಂಬ ಕಲ್ಪನೆಯೇ ಇರುವುದಿಲ್ಲ. ಅಂತಹ ವ್ಯಕ್ತಿಗಳ ಸೇವೆ ಮಾಡುವ ಮನಸ್ಸು ಇರಬೇಕು. ಬೆಳಕು ಕಾಣದ ವ್ಯಕ್ತಿಗಳಿಗೆ ಬೆಳಕು ತೋರಿಸುವವರಾಗಬೇಕು’ ಎಂದು ಸಚಿವರು ಕಿವಿಮಾತು ಹೇಳಿದರು.
'ಇಂಡಿಯಾ 4 ಐಎಎಸ್' ಹೊರ ತಂದಿರುವ ಕೃತಕ ಬುದ್ಧಿಮತ್ತೆಯ ಆನ್‌ಲೈನ್ ಯುಪಿಎಸ್‌ಸಿ ಸಂದರ್ಶನ ಮಾರ್ಗದರ್ಶನ ಕಾರ್ಯಕ್ರಮ "ಮಾರ್ಗದರ್ಶಿ"ಯನ್ನು ಸಚಿವರು ಲೋಕಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, 'ಐಐಐಟಿ-ಬಿ'ಯ ಪ್ರೊ. ಜೆ. ದಿನೇಶ್, ಇಂಡಿಯಾ 4 ಐಎಎಸ್ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಡಾ. ಸಿ.ಎಸ್ ಕೇದಾರ್, ಇಂಡಿಯಾ 4 ಐಎಎಸ್ ಅಕಾಡೆಮಿ ಸಂಸ್ಥಾಪಕ ಶ್ರೀನಿವಾಸ್, ಯುಎಎಸ್-ಬಿ ವಿಶ್ರಾಂತಿ ಕುಲಪತಿ ಡಾ.ಕೆ. ನಾರಾಯಣ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Advertisement