
ಹುಬ್ಬಳ್ಳಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆಗೆ ಚಿಂತನೆ ಮಾಡಲಾಗುವುದು ಎಂದು ಅವರು ಭಾನುವಾರ ತಿಳಿಸಿದ್ದಾರೆ.
ಹಾನಗಲ್ ಉಪಚುನಾವಣೆ ಪ್ರಚಾರಕ್ಕೆ ತೆರಳಲು ಇಂದು ಬೆಳಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ನಿಲ್ದಾಣ ಬಳಿ ಸುದ್ದಿಗಾರರ ಜೊತೆ ಮಾತನಾಡಿದರು. ತೈಲ ಬೆಲೆ ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯದ ಆರ್ಥಿಕತೆ ಸುಧಾರಣೆಯಾದರೆ ಉಪಚುನಾವಣೆ ಬಳಿಕ ಬೆಲೆ ಇಳಿಕೆ ಮಾಡುವ ಬಗ್ಗೆ ಚಿಂತನೆಯಿದೆ ಎಂದು ಹೇಳಿದ್ದಾರೆ.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಹಾನಗಲ್ ಕ್ಷೇತ್ರದ ಅಭಿವೃದ್ಧಿಗೆ 2 ಸಾವಿರದ 400 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದಾಗಿ ಹೇಳಿರುವ ಸಿದ್ದರಾಮಯ್ಯನವರು ಹಣವನ್ನು ಯಾವುದಕ್ಕೆ ಕೊಟ್ಟಿದ್ದಾರೆ ಎಂದು ಬಹಿರಂಗಪಡಿಸಲಿ. ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ನಾನು ಏನು ಕೊಟ್ಟಿದ್ದೇನೆ ಎಂಬುದನ್ನು ಕ್ಷೇತ್ರದ ಮತದಾರರ ಮುಂದೆ ನಾನು ಹೇಳುತ್ತೇನೆ, ಕ್ಷೇತ್ರದ ಜನರೂ ತೋರಿಸುತ್ತಾರೆ ಎಂದರು.
ಹಾನಗಲ್ ಮತ್ತು ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಇಂದಿನಿಂದ ಪ್ರಚಾರ ಮಾಡುತ್ತೇನೆ. ನಮ್ಮ ಅಭ್ಯರ್ಥಿಗಳು ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಗೂರ ಸಕ್ಕರೆ ಕಾರ್ಖಾನೆಯನ್ನು ಬಿಜೆಪಿಯವರು ಮುಳುಗಿಸಿದರು ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ಸಕ್ಕರೆ ಕಾರ್ಖಾನೆಗೆ ತನ್ನದೇ ಆದ ಇತಿಹಾಸವಿದೆ. ಕಾರ್ಖಾನೆ ಮುಳುಗಿಸುವುದರಲ್ಲಿ ಕಾಂಗ್ರೆಸ್ ಪಾತ್ರ ದೊಡ್ಡದಾಗಿದೆ ಎಂದರು.
Advertisement