ಅನಾಥ ಮಕ್ಕಳ ಮುಂದೆ ಉಳ್ಳವರ ಆಡಂಬರ ಬೇಡ: ರಾಜ್ಯ ಸರ್ಕಾರದ ಆದೇಶ

ಅನಾಥಾಶ್ರಮಗಳಿಗೆ ಹೋಗಿ ಅಲ್ಲಿನ ಮಕ್ಕಳ ಮುಂದೆ ತಮ್ಮ ಮಕ್ಕಳ ಹುಟ್ಟುಹಬ್ಬ ಮತ್ತಿತರ ಆಚರಣೆಗಳನ್ನು ಅದ್ದೂರಿಯಿಂದ ಆಚರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅನಾಥಾಶ್ರಮಗಳಿಗೆ ಹೋಗಿ ಅಲ್ಲಿನ ಮಕ್ಕಳ ಮುಂದೆ ತಮ್ಮ ಮಕ್ಕಳ ಹುಟ್ಟುಹಬ್ಬ ಮತ್ತಿತರ ಆಚರಣೆಗಳನ್ನು ಅದ್ದೂರಿಯಿಂದ ಆಚರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಿಷೇಧಕ್ಕೆ ಕಾರಣವೇನು ಎಂಬ ಅಂಶಗಳು ಮುಂದಿವೆ.

ಕರ್ನಾಟಕ ಸರ್ಕಾರದ ಮಕ್ಕಳ ರಕ್ಷಣಾ ನಿರ್ದೇಶನಾಲಯ ಈ ಸಂಬಂಧಿತ ಸುತ್ತೋಲೆ ಹೊರಡಿಸಿದೆ. ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳ (Celebrities ಇತ್ಯಾದಿ) ಹಾಗೂ ಅವರ ಮಕ್ಕಳ ಹುಟ್ಟುಹಬ್ಬ ಆಚರಣೆಯನ್ನು ನಿಷೇಧಿಸುವ ಕುರಿತು ಹೊರಡಿಸಿರುವ ಕುರಿತ ಸುತ್ತೋಲೆ ಇದಾಗಿದೆ ಎಂದು ಹೇಳಲಾಗಿದೆ.

ಸಿನಿಮಾ ರಂಗ, ಕ್ರೀಡೆ, ಕಾರ್ಪೋರೇಟ್ ಸಂಸ್ಥೆಗಳು, ಮಠಾಧೀಶರು, ರಾಜಕೀಯ ರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು, ಜನಪ್ರಿಯ ವ್ಯಕ್ತಿಗಳು ತಮ್ಮ ಅಥವಾ ತಮ್ಮ ಮಕ್ಕಳ ಜನ್ಮ ದಿನವನ್ನು ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಇತ್ಯಾದಿ ಹಂಚುವ ಮೂಲಕ ಅದ್ದೂರಿಯಾಗಿ ಆಚರಿಸುತ್ತಿರುವುದು ತಿಳಿದು ಬಂದಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಸರ್ಕಾರಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಿಗೆ ದಾಖಲಾಗುವ ಮಕ್ಕಳು ಕಾನೂನು ಸಂಘರ್ಷಕ್ಕೆ ಒಳಗಾದ ಮಕ್ಕಳು, ಬಾಲ ಕಾರ್ಮಿಕ ಪದ್ಧತಿಯಿಂದ ರಕ್ಷಿಸಲ್ಪಟ್ಟ, ಬಾಲ್ಯ ವಿವಾಹಕ್ಕೆ ಒಳಗಾದ, ಅತ್ಯಾಚಾರಕ್ಕೆ ಒಳಗಾದ, ತಂದೆ-ತಾಯಿಯಿಂದ ತಿರಸ್ಕರಿಸಲ್ಪಟ್ಟ, ತಾಯಿ ಅಥವಾ ತಂದೆ ಇಲ್ಲದ, ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟ ಇತ್ಯಾದಿ ಪಾಲನೆ ಮತ್ತು ರಕ್ಷಣೆಯ ಅವಶ್ಯವಿರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಬಾಲನ್ಯಾಯ ಮಂಡಳಿ ಆದೇಶದ ಮೂಲಕ ಮಕ್ಕಳ ಪಾಲನಾ ಸಂಸ್ಥೆಗಳಿಗೆ ದಾಖಲು ಮಾಡಲಾಗಿರುತ್ತದೆ ಎಂದು ಹೇಳಲಾಗಿದೆ.

ಈ ಎಲ್ಲಾ ವರ್ಗದ ಮಕ್ಕಳು ಸಮಾಜದಿಂದ ವಂಚಿತರಾಗಿ ಮನನೊಂದವರಾಗಿರುವುದರಿಂದ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ದಾಖಲಾಗಿರುವ ಮಕ್ಕಳ ಮನಸ್ಸಿಗೆ ಖುಷಿ ತರುವಂತಹ ಸೃಜನಶೀಲತೆಯ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಕ್ಕಳ ಮನಸ್ಸು ಸಧೃಡ ಹಾಗೂ ಆಹ್ಲಾದಕರವಾಗುವಂತೆ ಪ್ರೋತ್ಸಾಹಿಸಬೇಕಾಗುತ್ತದೆ.

ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸಂಸ್ಥೆಯ ಸಿಬ್ಬಂದಿ, ಅಧಿಕಾರಿಗಳು, ಖಾಸಗಿ ವ್ಯಕ್ತಿಗಳು, ಸೆಲೆಬ್ರಿಟಿಸ್ ಇತ್ಯಾದಿ ಗಣ್ಯವ್ಯಕ್ತಿಗಳು ಅವರ ಹಾಗೂ ಅವರ ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ಇತ್ಯಾದಿ... ಹಂಚುವ ಅದ್ದೂರಿ ಕಾರ್ಯಕ್ರಮಗಳನ್ನು ಸಂಸ್ಥೆಯಲ್ಲಿ ಆಚರಿಸುವುದರಿಂದ ಪಾಲನಾ ಸಂಸ್ಥೆಗಳ ಮಕ್ಕಳ ಮನಸಿನ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎಂದು ಹೇಳಲಾಗಿದೆ.

ಮಕ್ಕಳ ಪಾಲನಾ ಸಂಸ್ಥೆಯ ಮಕ್ಕಳಿಗೆ ಅವರ ಹುಟ್ಟು ಹಬ್ಬ ಈ ರೀತಿ ಆಚರಿಸಿಕೊಳ್ಳಲು ಸಾಧ್ಯವಾಗದೇ ಆಚರಿಸಲ್ಪಡುತ್ತಿರುವ ಹುಟ್ಟುಹಬ್ಬದೊಂದಿಗೆ ಹೋಲಿಕೆ(comparision)ಮಾಡಿಕೊಂಡಲ್ಲಿ ಈ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಿ, ಮನಸ್ಸಿಗೆ ಆಘಾತವಾಗಿ ಮಕ್ಕಳ ಮನಸ್ಸು ದುರ್ಬಲವಾಗುವ ಸಂಭವ ಹೆಚ್ಚಾಗಿರುತ್ತದೆ. ಇಂಥ ಆಡಂಬರದ ಆಚರಣೆಗಳು ಮಕ್ಕಳ ಆತ್ಮಾಭಿಮಾನ, ಆತ್ಮಗೌರವಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ ಎಂದು ಅಭಿಪ್ರಾಯಪಡಲಾಗಿದೆ.

ಪಾಲನಾ ಸಂಸ್ಥೆಗಳಲ್ಲಿರುವ ಮಕ್ಕಳು, ಕುಟುಂಬದಲ್ಲಿ ಬೆಳೆಯುವ ಬೇರೆ ಯಾವುದೇ ಮಗುವಿಗಿಂತ ಕಡಿಮೆ ಇಲ್ಲ ಎಂಬ ಭಾವನೆಯನ್ನು ಕಾಪಾಡುವ ಸಲುವಾಗಿ ಸರ್ಕಾರದ ಆದೇಶದ ಮೂಲಕ ನಿಗದಿಪಡಿಸಿದ ವ್ಯಕ್ತಿಗಳ ಮಟ್ಟುಹಬ್ಬ ಆಚರಣೆಯನ್ನು ಹೊರತು ಪಡಿಸಿ ಯಾರ ಹುಟ್ಟುಹಬ್ಬ ಆಚರಿಸುವುದನ್ನು ನಿಷೇಧಿಸಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಈ ಆದೇಶ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಎಂದು ಆದೇಶ ಸ್ಪಷ್ಟಪಡಿಸಿದೆ.

ಈ ಆದೇಶವನ್ನು ವಕೀಲರಾದ ಅಂಜಲಿ ರಾಮಣ್ಣ ಸ್ವಾಗತಿಸಿದ್ದಾರೆ. “ತಿಥಿಯಿಂದ ಮೊದಲುಗೊಂಡು ಹುಟ್ಟುಹಬ್ಬದವರೆಗೂ , ಮಕ್ಕಳ ಪಾಲನಾ ಸಂಸ್ಥೆಗಳಿಗೆ ಹೋಗಿ ಧಾಂಧೂಮ್ ಅಂತ ಕೇಕ್ ಕತ್ತರಿಸಿ , ಅವರುಗಳ ಬಾಯಿಗೂ ಮೆತ್ತಿ... ಬೇಕಾದ್ದು ಬೇಡವಾದ್ದನ್ನು ಅವರುಗಳಿಗೆ ಉಡುಗೊರೆ ಅಂತ ನೀಡಿ... " ಸಮಾಜ ಸೇವೆ " ಎನ್ನುವ ಅಹಂ ತಣಿಸಿ ಕೊಳ್ಳುತ್ತಿದ್ದೇವಲ್ಲಾ. ಅದನ್ನು ಸರ್ಕಾರ ನಿಷೇಧಿಸಿದೆ. ಇಂಥ ಆದೇಶದ ಅವಶ್ಯಕತೆ ಇತ್ತು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com