ಅಪ್ಪು ನಿಧನಕ್ಕೆ ದಿಗಂತದೆತ್ತರದಲ್ಲಿ ಶ್ರದ್ಧಾಂಜಲಿ ಸಲ್ಲಿಸುವಂತೆ ಮಾಡಿದ ಪುನೀತ್ ಎನ್ ಆರ್ ಐ ಅಭಿಮಾನಿ; ಆತ ಮಾಡಿದ್ದೇನು ಅಂದರೆ...

ಮೊನ್ನೆ ಅ.29 ರಂದು ಅಪ್ಪು ನಿಧನದ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿದಾಗ ಗೌತಮ್ ಅವರು ಸಚಿವ ಮುನಿರತ್ನ ಅವರೊಂದಿಗೆ ಹಾವೇರಿಯಲ್ಲಿ ಕಾರ್ಯಕ್ರಮವೊಂದರಲ್ಲಿದ್ದರು.
ಅಪ್ಪುವಿನ ಅಭಿಮಾನಿ ಗೌತಮ್
ಅಪ್ಪುವಿನ ಅಭಿಮಾನಿ ಗೌತಮ್
Updated on

ಬೆಂಗಳೂರು: ಆತ ಅಪ್ಪುವಿನ ಕಟ್ಟಾ ಅಭಿಮಾನಿ ಗೌತಮ್. ಕ್ಯಾಲಿಫೋರ್ನಿಯಾದಲ್ಲಿ ಮಲ್ಟಿನ್ಯಾಷನಲ್ ಬ್ಯಾಂಕ್ ನ ತಾಂತ್ರಿಕ ಸಲಹೆಗಾರ. ಅಷ್ಟೇ ಅಲ್ಲದೇ ರಾಜ್ಯ ತೋಟಗಾರಿಕೆ ಇಲಾಖೆ ಮಂತ್ರಿ ಮುನಿರತ್ನ ಅವರಿಗೂ ಸಲಹೆಗಾರನಾಗಿರುವುದರಿಂದ ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಿರುತ್ತಾರೆ. 

ಮೊನ್ನೆ ಅ.29 ರಂದು ಅಪ್ಪು ನಿಧನದ ಸುದ್ದಿ ಬರಸಿಡಿಲಿನಂತೆ ಬಂದು ಅಪ್ಪಳಿಸಿದಾಗ ಗೌತಮ್ ಅವರು ಸಚಿವ ಮುನಿರತ್ನ ಅವರೊಂದಿಗೆ ಹಾವೇರಿಯಲ್ಲಿ ಕಾರ್ಯಕ್ರಮವೊಂದರಲ್ಲಿದ್ದರು. ಆದಷ್ಟು ಬೇಗ ಬೆಂಗಳೂರಿಗೆ ಬರಲು ನಿರ್ಧರಿಸಿದ ಸಚಿವರಿಗೆ ಅ.29 ರಂದು ರಾತ್ರಿ ಹುಬ್ಬಳ್ಳಿ-ಬೆಂಗಳೂರು ನಡುವೆ ಸಂಚರಿಸುವ ಇಂಡಿಗೋ ವಿಮಾನದಲ್ಲಿ ಅದೃಷ್ಟವಶಾತ್ ಎರಡು ಸೀಟ್ ಗಳು ಲಭ್ಯವಿದ್ದವು. ವಿಮಾನವೇರಿದ್ದ  ಅಭಿಮಾನಿ ಗೌತಮ್ ಗೆ ಮನಸ್ಸೆಲ್ಲವೂ ಅಪ್ಪುವಿನಲ್ಲೇ ಕೇಂದ್ರೀಕೃತ. ಭಾರವಾದ ಮನಸ್ಸಿನಲ್ಲೇ ಚಿಂತಿಸುತ್ತಿದ್ದ ಅವರಿಗೆ ದಿಗಂತದೆತ್ತರದಲ್ಲಿ ಆಕಾಶದ ನಡುವೆ ಅಪ್ಪುವಿಗೆ ಶ್ರದ್ಧಾಂಜಲಿ ಸಲ್ಲಿಸುವ ಮನಸ್ಸಾಯಿತು. ಇದಕ್ಕಾಗಿ ಅವರಿಗೆ ಕಂಡದ್ದು ವಿಮಾನದ ಸಿಬ್ಬಂದಿಗಳ ಮೂಲಕ ಅಪ್ಪುವಿನ ನಿಧನ ವಾರ್ತೆಯನ್ನು ಘೋಷಿಸಿ ಶ್ರದ್ಧಾಂಜಲಿ ಸಲ್ಲಿಸುವ ಮಾರ್ಗ.

ಹಾಗಂತ ವಿಮಾನದ ಸಿಬ್ಬಂದಿಗಳು ಗೌತಮ್ ಅವರ ಮನವಿಗೆ ತಕ್ಷಣವೇ ಒಪ್ಪಿಕೊಳ್ಳಲಿಲ್ಲ. 6E 1761 ನಂಬರ್ ನ ವಿಮಾನ ಹುಬ್ಬಳ್ಳಿಯಿಂದ ಟೇಕ್ ಆಫ್ ಆದಾಗ ಸಮಯ ರಾತ್ರಿ 8.35, ಕ್ಯಾಪ್ಟನ್ ದೀಪ್ತಿ ಪುನೀತ್ ರಾಜ್ ಕುಮಾರ್ ನಿಧನದ ವಾರ್ತೆಯನ್ನು ಘೋಷಿಸಿ ಸಂತಾಪ, ಶ್ರದ್ಧಾಂಜಲಿಗಳನ್ನು ಸಲ್ಲಿಸಿದಾಗ ಸಮಯ ರಾತ್ರಿ 9.00

ಭೂಮಿಯಿಂದ 17,000 ಅಡಿ ಎತ್ತರದಲ್ಲಿ ಅಪ್ಪುವಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಾಧ್ಯವಾಗಿದ್ದು ಹೇಗೆ, ಅಪ್ಪು ಅವರೊಂದಿಗೆ ತಮ್ಮ ನೆನಪುಗಳು, ಒಡನಾಟ ಹೇಗಿತ್ತು ಎಂಬುದನ್ನು ಗೌತಮ್ ವಿವರಿಸಿದ್ದಾರೆ. 

"ನನ್ನ ಮನವಿಯನ್ನು ಏರ್ ಹೋಸ್ಟೆಸ್ ಮೂಲಕ ಸಿಬ್ಬಂದಿಗಳಿಗೆ ತಲುಪಿಸಿದೆ. ಬಹುತೇಕ ಉತ್ತರ ಭಾರತೀಯರೇ ಇದ್ದ ವಿಮಾನದಲ್ಲಿ ಪುನೀತ್ ಅವರ ಬಗ್ಗೆ ಸ್ವಲ್ಪ ವಿವರಣೆ ನೀಡಬೇಕಾಯಿತು. ಹಾಲಿವುಡ್ ನಲ್ಲಿ ಟಾಮ್ ಕ್ರೂಸ್, ಬಾಲಿವುಡ್ ನಲ್ಲಿ ಹೃತಿಕ್ ರೋಷನ್ ಅಥವಾ ಶಾರೂಖ್ ಖಾನ್ ನಂತೆ ಸ್ಯಾಂಡಲ್ ವುಡ್ ನಲ್ಲಿ ನಮ್ಮ ಅಪ್ಪು ಎಂದು ಅವರಿಗೆಲ್ಲಾ ಹೇಳಿದೆ.

ಪ್ರಾರಂಭದಲ್ಲಿ ಸಿಬ್ಬಂದಿಗಳು ಮನವಿಯನ್ನು ಜಾರಿಗೊಳಿಸುವುದಕ್ಕೆ ಹಿಂದೇಟು ಹಾಕಿದರಾದರೂ ಆ ನಂತರ ಶ್ರದ್ಧಾಂಜಲಿಯನ್ನು ಸಲ್ಲಿಸಿ ಘೋಷಣೆ ಮಾಡಿದರು. ಇಂಡಿಗೋ ವಿಮಾನದ ಈ ನಡೆ ಪ್ರಯಾಣಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಬೇರೆ ಯಾವುದೇ ವಿಮಾನವೂ ಈ ರೀತಿ ಮಾಡಿಲ್ಲ. ನನ್ನ ಅತ್ಯಾಪ್ತ ಸ್ನೇಹಿತ ಪುನೀತ್ ರಾಜ್ ಕುಮಾರ್ ಗೆ ನನ್ನ ಗೌರವದ ಕಾಣಿಕೆ ಇದು ಎಂದು ಗೌತಮ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದಾರೆ. 

ಇದೇ ವೇಳೆ ಅಕ್ಕ ವಿಶ್ವ ಸಮ್ಮೇಳನ 2014 ರಲ್ಲಿ ಅಮೆರಿಕದಲ್ಲಿ ನಡೆದಾಗ ಅಪ್ಪು ಸ್ಯಾನ್ ಜೋಸ್ ನಲ್ಲಿರುವ ತಮ್ಮ ನಿವಾಸದಲ್ಲಿ ಆತಿಥ್ಯ ಸ್ವೀಕರಿಸಿದ್ದ ನೆನಪು. ಆಗ ಅಪ್ಪು ಅವರೊಂದಿಗೆ ಬೆಸೆದಿದ್ದ ಸ್ನೇಹ ಎಲ್ಲವನ್ನೂ ಗೌತಮ್ ಸ್ಮರಿಸಿದ್ದಾರೆ. 

"ಅಪ್ಪು ಅಮೆರಿಕದಲ್ಲಿರುವ ಕನ್ನಡಿಗರ ಜನಪ್ರಿಯ ನಟ, ನಮ್ಮ ದ್ವೈವಾರ್ಷಿಕ ಸಭೆಗಳಿಗೆ ಪುನೀತ್ ರಾಜ್ ಕುಮಾರ್ ಗೆ ಆಹ್ವಾನ ನೀಡುತ್ತಿದ್ದೆವು, ಅವರು ಸಂತೋಷದಿಂದ ಸ್ಪಂದಿಸುತ್ತಿದ್ದರು, ನಾನು ಅವರ ದೊಡ್ಡ ಅಭಿಮಾನಿ, ಅವರು ನಮ್ಮ ಮನೆಯಲ್ಲಿ ಒಮ್ಮೆ ಆತಿಥ್ಯ ಸ್ವೀಕರಿಸಿದ್ದರಿಂದ ವೈಯಕ್ತಿವಾಗಿ ಅವರನ್ನು ಬಲ್ಲೆ". ಎನ್ನುತ್ತಾರೆ ಗೌತಮ್ 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com