ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ: ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು: ವಿಕೃತ ಕಾಮಿ, ಸರಣಿ ಹಂತಕ ಉಮೇಶ್ ರೆಡ್ಡಿಗೆ ಕರ್ನಾಟಕ ಹೈಕೋರ್ಟ್ ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿದೆ.
ಉಮೇಶ್ ರೆಡ್ಡಿಗೆ ವಿಧಿಸಲಾಗಿರುವ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಬೇಕು ಎಂದು ಉಮೇಶ್ ರೆಡ್ಡಿ ಪರ ವಕೀಲ ಬಿಎನ್ ಜಗದೀಶ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಉಮೇಶ್ ರೆಡ್ಡಿಯ ಕ್ಷಮಾದಾನ ಅರ್ಜಿ ಇತ್ಯರ್ಥ ವಿಳಂಬಿಸಲಾಗಿದೆ. ಇನ್ನು 10 ವರ್ಷಗಳಿಂದ ಆತನನ್ನು ಒಂಟಿಸೆರೆಯಲ್ಲಿಡಲಾಗಿದೆ. ಇದರಿಂದ ಮಾನಸಿಕ ಯಾತನೆ ಅನುಭವಿಸಿದ್ದಾಗಿ ರೆಡ್ಡಿ ಪರ ವಕೀಲರು ವಾದ ಮಂಡಿಸಿದ್ದರು.
ಇದಕ್ಕೆ ನ್ಯಾಯಮೂರ್ತಿ ಅರವಿಂದ್ ಕುಮಾರ್, ನ್ಯಾ, ಪ್ರದೀಪ್ ಸಿಂಗ್ ಯೆರೂರ್ ಅವರನ್ನೊಳಗೊಂಡ ವಿಭಾಗೀಯ ಪೀಠ ವಕೀಲರ ವಾದವನ್ನು ತಳ್ಳಿಹಾಕಿದರು. ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ವಿಳಂಬ ಮಾಡಿಲ್ಲ ಎಂದು ಹೇಳಿದ್ದು ಗಲ್ಲುಶಿಕ್ಷೆಯನ್ನು ಖಾಯಂಗೊಳಿಸಿದೆ.
ಇನ್ನು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಉಮೇಶ್ ರೆಡ್ಡಿ ಕೇಳಿದ್ದ 6 ವಾರಗಳ ಕಾಲಾವಕಾಶವನ್ನು ನೀಡಲು ಹೈಕೋರ್ಟ್ ಒಪ್ಪಿದೆ. ಹೀಗಾಗಿ ಇನ್ನು 6 ವಾರಗಳ ಕಾಲ ಉಮೇಶ್ ರೆಡ್ಡಿಯನ್ನು ಗಲ್ಲಿಗೇರಿಸುವಂತಿಲ್ಲ.
1998ರ ಫೆಬ್ರವರಿ 28ರಂದು ಜಯಶ್ರೀ ಎಂಬ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ 2007ರಲ್ಲಿ ಬೆಂಗಳೂರಿನ ಸೆಷನ್ಸ್ ಕೋರ್ಟ್ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ನಂತರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದಿದ್ದವು.
ಹೀಗಾಗಿ ಉಮೇಶ್ ರೆಡ್ಡಿ ತಾಯಿ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ್ದು ಅದು 2013ರಲ್ಲಿ ತಿರಸ್ಕರಿಸಲ್ಪಟ್ಟಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ