ಜೆಲಟಿನ್ ಕಡ್ಡಿಗಳಿದ್ದ ಕಾರು ಸ್ಫೋಟ: ಕಾರು ಮತ್ತು ಚಾಲಕ ಛಿದ್ರ ಛಿದ್ರ
ಸ್ಫೋಟದಿಂದಾಗಿ ಕಾರು ನುಚ್ಚು ನೂರಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಫೋಟ ನಡೆದ ಸಂದರ್ಭ ಕಾರು ಚಾಲಕನ ದೇಹವು ಛಿದ್ರ ಛಿದ್ರಗೊಂಡಿದ್ದು, ಅವಘಡ ಸಂಭವಿಸಿದ ಜಾಗದಿಂದ ಹಲವು ಮೀಟರುಗಳಷ್ಟು ದೂರದಲ್ಲಿ ಪತ್ತೆಯಾಗಿದೆ.
Published: 17th August 2021 01:06 PM | Last Updated: 17th August 2021 01:56 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಜೆಲೆಟಿನ್ ಕಡ್ಡಿಗಳನ್ನು ಸಾಗಿಸುತ್ತಿದ್ದ ಕಾರು ಸ್ಫೋಟಗೊಂಡಿರುವ ಘಟನೆ ಬೆಂಗಳೂರಿನ ಕನಕಪುರದಲ್ಲಿ ನಡೆದಿದೆ. ಮರಲೆ ಗವಿ ಮಠ್ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ದುರ್ಘಟನೆಯಲ್ಲಿ ಕಾರು ಚಾಲಕ ಬೆಂಕಿಗೆ ಆಹುತಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆಗೆ ಇಡೀ ಗ್ರಾಮವೇ ಬೆಚ್ಚಿಬಿದ್ದಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಸ್ಫೋಟದಿಂದಾಗಿ ಕಾರು ನುಚ್ಚು ನೂರಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಫೋಟ ನಡೆದ ಸಂದರ್ಭ ಕಾರು ಚಾಲಕನ ದೇಹವು ಛಿದ್ರ ಛಿದ್ರಗೊಂಡಿದ್ದು, ಅವಘಡ ಸಂಭವಿಸಿದ ಜಾಗದಿಂದ ಹಲವು ಮೀಟರುಗಳಷ್ಟು ದೂರದಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿ ಮಹೇಶ್, ಕನಕಪುರದ ನಿವಾಸಿ ಎಂದು ತಿಳಿದುಬಂದಿದೆ. ಆತ ಗಣಿಗಾರಿಕೆಗೆ ಬಳಸುವ ಉಪಕರಣಗಳ ಡೀಲರ್ ವೃತ್ತಿ ನಿರ್ವಹಿಸುತ್ತಿದ್ದ. ಸ್ಫೋಟ ಸಂಭವಿಸಿದ ಬಳಿಕ ಚೂರಾಗಿದ್ದ ವಾಹನದ ಗುರುತನ್ನು ಪತ್ತೆ ಹಚ್ಚಲು ಪೊಲೀಸರಿಗೆ ಕಷ್ಟವಾಯಿತು.
ಹತ್ತಿರದ ಶಕ್ತಿ ಮೈನಿಂಗ್ ಸಂಸ್ಥೆಗೆ ಜೆಲಟಿನ್ ಕಡ್ಡಿಗಳನ್ನು ಮಹೇಶ್ ಸಾಗಿಸುತ್ತಿದ್ದರು. ಕ್ವಾರಿಯಿಂದ ಸ್ವಲ್ಪ ದೂರದಲ್ಲೇ ಸ್ಫೋಟ ಸಂಭವಿಸಿದ್ದರಿಂದ ಭಾರಿ ದುರಂತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಹೇಶ್ ಜೆಲಟಿನ್ ತುಂಬಿದ್ದ ಕಾರನ್ನು ಪಾರ್ಕ್ ಮಾಡಿ ವ್ಯಕ್ತಿಯೊಬ್ಬರಿಗಾಗಿ ಕಾಯುತ್ತಿರುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ.