ವಿಜಯಪುರ: ಇಡೀ ಕರ್ನಾಟಕಕ್ಕೆ ಕೋವಿಡ್-19 ಲಸಿಕೆ ಹಾಕಿಸುವ ಅಭಿಯಾನದಲ್ಲಿ ವಿಜಯಪುರ ನಗರ ನಂಬರ್ 1 ಇದೆ. ಕೊರೋನಾ ಮೂರನೇ ಅಲೆ ನಮ್ಮ ಜಿಲ್ಲೆಗೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಪಾಸಿಟಿವ್ ರೋಗಿಗಳ ಸಂಖ್ಯೆ ಶೇಕಡಾವಾರು ತೀರಾ ಕಡಿಮೆಯಾಗಿದೆ. ಹೀಗಿರುವಾಗ ಏಕೆ ಶನಿವಾರ, ಭಾನುವಾರ ಬಂದರೆ ವೀಕೆಂಡ್ ಕರ್ಫ್ಯೂ ಅಂತ ಹೇರುತ್ತಾರೆ, ಏನು ಕೊರೋನಾ ವೀಕೆಂಡ್ ಮಾತ್ರ ಬರುತ್ತದೆಯೇ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಳಿದ್ದಾರೆ.
ವಿಜಯಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇರೆಲ್ಲಾ ಕಾರ್ಯಕ್ರಮಗಳನ್ನು ಮಾಡುವವರು ಮಾಡಿಕೊಳ್ಳುತ್ತಿದ್ದಾರೆ, ಜನರೂ ಅಪಾರ ಸಂಖ್ಯೆಯಲ್ಲಿ ಸೇರುತ್ತಾರೆ, ಮಾಸ್ಕ್ ಹಾಕಿಕೊಳ್ಳುವುದಿಲ್ಲ, ಸಾಮಾಜಿಕ ಅಂತರವನ್ನೂ ಕಾಪಾಡಿಕೊಳ್ಳುವುದಿಲ್ಲ, ಅದೇ ಗಣಪತಿ ಹಬ್ಬ ಬಂದಾಗ ನಿರ್ಬಂಧ ವಿಧಿಸುತ್ತಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಗೌರಿ ಗಣೇಶ ಹಬ್ಬ ಬಂದಾಗ ಹೀಗೆಯೇ ಆಚರಿಸಿ ಎಂದು ನಿರ್ಬಂಧ ವಿಧಿಸಲಾಗುತ್ತದೆ. ನಾನು ಇಂದು ಮುಖ್ಯಮಂತ್ರಿಗಳ ಜೊತೆಯೂ ಮಾತನಾಡಿದ್ದೇನೆ, ಹಿಂದೂಗಳ ಪ್ರಮುಖ ಹಬ್ಬ ಗಣಪತಿ ಹಬ್ಬಕ್ಕೆ ನಿರ್ಬಂಧ ಹೇರಲು ಬಂದರೆ ನಾವು ಸುಮ್ಮನಿರುವುದಿಲ್ಲ. ಗಣೇಶ ಹಬ್ಬಕ್ಕೆ ಕಾನೂನು ಮಾಡಿದರೆ ನಾವೇನೂ ಕೇಳಲ್ಲ. ಬಾಳ ಅಂದರೆ ಅವರು ನನಗೆ ಗುಂಡು ಹಾರಿಸಹುದು. ನಾ ಸತ್ತರೂ ಹೆಸರು ತಗೊಂಡ ಸಾಯಬೇಕು ಎಂದರು.
ಗಣೇಶೋತ್ಸವಕ್ಕೆ ತೊಂದರೆ ಮಾಡದಂತೆ ಸಿಎಂಗೂ ಹೇಳಿರುವೆ. ಹತ್ತತ್ತು ಸಾವಿರ ಜನರನ್ನು ಸೇರಿಸಿ ನೀವು ಸಭೆ ಮಾಡುತ್ತಿದ್ದೀರಾ. ಗಣಪತಿ ಬಂದಾಗ ಮಾತ್ರ ನಿಮಗೆ ಕೊರೊನಾ ನೆನಪಾಗುತ್ತಾ. ಗಣೇಶೋತ್ಸವ ಆಚರಣೆಗೆ ಮಾತ್ರ 50 ಕಂಡಿಷನ್ ಹಾಕುತ್ತೀರಿ ಎಂದು ಸಿಎಂ ಅವರನ್ನು ಕೇಳಿದ್ದೇನೆ, ಅವರು ಸುಮ್ಮನಾಗಿದ್ದಾರೆ ಎಂದರು.
Advertisement