ಮಕ್ಕಳಿಗೆ ಇವತ್ತು ಕೋವಿಡ್ ನಿಂದ ಸ್ವತಂತ್ರ ಸಿಕ್ಕಿದೆ, ಶಾಲೆ ಆರಂಭ ಎಲ್ಲರಿಗೂ ಖುಷಿ ತಂದಿದೆ: ಸಿಎಂ ಬಸವರಾಜ ಬೊಮ್ಮಾಯಿ 

ರಾಜ್ಯದಲ್ಲಿ 9ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ಆರಂಭವಾಗಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಕಾಲೇಜಿಗೆ ಆಗಮಿಸಿದರು.
ಸಿಎಂ ಬೊಮ್ಮಾಯಿಯವರು ಇಂದು ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು
ಸಿಎಂ ಬೊಮ್ಮಾಯಿಯವರು ಇಂದು ಬೆಂಗಳೂರಿನ ಮಲ್ಲೇಶ್ವರಂ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು

ಬೆಂಗಳೂರು: ಐದು ತಿಂಗಳ ನಂತರ ಪ್ರಸಕ್ತ ಶೈಕ್ಷಣಿಕ ವರ್ಷ ರಾಜ್ಯದಲ್ಲಿ 9ನೇ ತರಗತಿಯಿಂದ ದ್ವಿತೀಯ ಪಿಯುಸಿಯವರೆಗೆ ಆರಂಭವಾಗಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ ನಾರಾಯಣ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಕಾಲೇಜಿಗೆ ಆಗಮಿಸಿದರು.

ಎಲ್ಲರಂತೆಯೇ ತಾಪಮಾನ ಪರೀಕ್ಷೆಗೊಳಗಾಗಿ ಶಾಲೆಯ ಆವರಣದೊಳಗೆ ಪ್ರವೇಶಿಸಿದ ಮುಖ್ಯಮಂತ್ರಿ ಮತ್ತು ಸಚಿವರು ಶಾಲೆಯ ಆವರಣದಲ್ಲಿ ಸಂಪಿಗೆ ಗಿಡವನ್ನು ನೆಟ್ಟರು. ನಂತರ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು.ತರಗತಿಗೆ ಆಗಮಿಸಿ ಕೋವಿಡ್ ಮಾರ್ಗಸೂಚಿಯನ್ನು ಪರಿಶೀಲಿಸಿ ವಿದ್ಯಾರ್ಥಿಗಳ ಜೊತೆಗೆ ಮಾತನಾಡಿದರು.

ಮಕ್ಕಳು ಪ್ರತಿನಿತ್ಯ ಬರುವಾಗ ಮತ್ತು ಶಾಲೆಯಲ್ಲಿ ಮಾಸ್ಕ್ ಧರಿಸಬೇಕು, ದೈಹಿಕ ಅಂತರ ಕಾಯ್ದುಕೊಳ್ಳಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ನಂತರ ಮಾಧ್ಯಮಗಳ ಜೊತೆ ಮಾತನಾಡಿ ಸಿಎಂ ಬೊಮ್ಮಾಯಿ, ಕೋವಿಡ್ ನಿಂದ ಇಂದು ಸ್ವತಂತ್ರಗೊಂಡು ಮಕ್ಕಳು ಶಾಲೆ, ಕಾಲೇಜಿಗೆ ಬರುತ್ತಿರುವುದು ನೋಡಿದರೆ ನಿಜಕ್ಕೂ ಸಂತಸವಾಗುತ್ತದೆ. ನನಗೆ ಮಾತ್ರವಲ್ಲದೆ ನಮ್ಮ ಸಂಪುಟ ಸಹೋದ್ಯೋಗಿಗಳಿಗೆ, ಶಾಸಕರಿಗೆ ಕೂಡ ಇಂದು ಸಂತೋಷದ ದಿನ, ಈ ಸಂತೋಷವನ್ನು ಕೋವಿಡ್ ನಿಯಮ ಸರಿಯಾಗಿ ಪಾಲಿಸಿಕೊಂಡು ಹೋಗಿ ಕಾಪಾಡೋಣ ಎಂದರು.

ವಿದ್ಯಾರ್ಥಿಗಳು ಅತ್ಯಂತ ಖುಷಿಯಿಂದ ಶಾಲೆಗೆ ಬಂದಿದ್ದು, ಶಾಲೆ ಆರಂಭಿಸಿದ್ದಕ್ಕೆ ಧನ್ಯವಾದ ಹೇಳಿದ್ದಾರೆ. ಕೋವಿಡ್ ಕಡಿಮೆಯಾದರೆ ಗಡಿ ಜಿಲ್ಲೆಗಳಲ್ಲಿ ಶಾಲೆ ಆರಂಭಿಸುತ್ತೇವೆ. 1ರಿಂದ 8ನೇ ತರಗತಿ ಆರಂಭಿಸುವ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಸುಮಾರು ಒಂದೂವರೆ ವರ್ಷದಿಂದ ಕೋವಿಡ್ ಸೋಂಕಿನಿಂದ ಶಾಲೆಗಳು ಆರಂಭವಾಗದೆ ಮನೆಯಲ್ಲಿಯೇ ಉಳಿದಿದ್ದ ಮಕ್ಕಳು ಇಂದು ಸ್ವತಂತ್ರರಾಗಿ ಶಾಲೆಗೆ ಬಂದಿದ್ದಾರೆ. ಈ ಮಧ್ಯೆ ಮಕ್ಕಳಿಗೆ ಶಿಕ್ಷಣ ನೀಡಲು ಹಲವಾರು ಪ್ರಯೋಗಗಳಾಗಿದ್ದು ಆನ್ ಲೈನ್ ಶಿಕ್ಷಣ, ಶಾಲೆಯ ಆವರಣದ ಹೊರಗೆ ಹೀಗೆ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿತು ಎಂದರು.

ಕೋವಿಡ್ ಸಂದರ್ಭದಲ್ಲಿ ಮಕ್ಕಳ ಶಿಕ್ಷಣ ನಿರ್ವಹಿಸುವುದು ಸವಾಲಿನ ಕೆಲಸವಾಗಿತ್ತು. ತಜ್ಞರ ಸಮಿತಿಯ ಸಲಹೆ ಪಡೆದು ತಯಾರಿ ನಡೆಸಿ ಇಂದು ಶಾಲಾ-ಕಾಲೇಜು ಆರಂಭ ಮಾಡಿದ್ದೇವೆ. ಇಂದು ಕಾಲೇಜಿಗೆ ಹೋಗಿ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಮಕ್ಕಳಲ್ಲಿ ಮಾತನಾಡಿದಾಗ ಸಂತಸ ವ್ಯಕ್ತಪಡಿಸಿದರು. ಏನೋ ಒಂದು ರೀತಿಯ ಹಬ್ಬದ ವಾತಾವರಣವಿದೆ.ಶಿಕ್ಷಕರು-ಮಕ್ಕಳ ಮಧ್ಯೆ ಮುಖತಃ ಸಂವಹನವಿಲ್ಲದೆ ಕಳೆಯುವುದು ಕಷ್ಟದ ಸಮಯ. ಮಕ್ಕಳ-ಗುರುಗಳ ನಡುವಿನ ಬಾಂಧವ್ಯ ಮತ್ತೆ ಸಿಕ್ಕಿರುವುದು ಎಲ್ಲರಿಗೂ ಖುಷಿಯಾಗಿದೆ ಎಂದರು.

ಆನ್ ಲೈನ್ ಶಿಕ್ಷಣವಿದ್ದರೂ ನಮಗೆ ಶಾಲೆಗೆ ಬಂದು ಶಿಕ್ಷಣ ಪಡೆದಂತೆ ಆಗುತ್ತಿರಲಿಲ್ಲ. ಕಲಿಕೆ ಅಂದರೆ ಜ್ಞಾನ ಸಂಪಾದನೆ, ಮುಕ್ತವಾದ ವಾತಾವರಣದಲ್ಲಿದ್ದರೆ ಮಾತ್ರ ಜ್ಞಾನ ಸಂಪಾದನೆಯಾಗುತ್ತದೆ, ಹೀಗಾಗಿ ಇಂದು ಮಕ್ಕಳನ್ನು ನೋಡಿದಾಗ ಬಹಳ ಸಂತೋಷವಾಯಿತು, ಶಾಲೆ ಆರಂಭವಾಗಿದ್ದು ಯಶಸ್ವಿಯಾಗಬೇಕು, ಹೀಗಾಗಿ ಸೂಕ್ಷ್ಮವಾಗಿ ನಿಗಾವಹಿಸುತ್ತೇವೆ, ಗಡಿ ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಕಡಿಮೆಯಾದ ಮೇಲೆ ಹಂತಹಂತವಾಗಿ ಆರಂಭ ಮಾಡುತ್ತೇವೆ ಎಂದರು. 

ನಂತರ ಮುಖ್ಯಮಂತ್ರಿಗಳು ನಿರ್ಮಲಾ ರಾಣಿ ಪ್ರೌಢ ಅನುದಾನಿತ ಶಾಲೆಗೆ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com