ಬೆಂಗಳೂರು: ಪ್ರೀತಿ ಹೆಸರಲ್ಲಿ ಯುವತಿ ವಂಚಿಸಿದವನ ಬಂಧನ; 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಸಾಮಾಜಿಕ ಜಾಲತಾಣದಲ್ಲಿ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡು ಪ್ರೀತಿಯ ಹೆಸರಲ್ಲಿ ಆಭರಣಗಳನ್ನು ಲಪಟಾಯಿಸಿದ ಆರೋಪದಡಿ ಗಂಗಮ್ಮನಗುಡಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
Published: 26th August 2021 08:33 PM | Last Updated: 27th August 2021 12:48 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡು ಪ್ರೀತಿಯ ಹೆಸರಲ್ಲಿ ಆಭರಣಗಳನ್ನು ಲಪಟಾಯಿಸಿದ ಆರೋಪದಡಿ ಗಂಗಮ್ಮನಗುಡಿ ಪೊಲೀಸರು ವ್ಯಕ್ತಿಯೋರ್ವನನ್ನು ಬಂಧಿಸಿದ್ದಾರೆ.
ಆರೋಪಿ ಇನ್ಸ್ಟಾಗ್ರಾಮ್ನಲ್ಲಿ ಯುವತಿಯೋರ್ವಳನ್ನು ಪರಿಚಯ ಮಾಡಿಕೊಂಡು. ಆಕೆಯೊಂದಿಗೆ ಸುತ್ತಾಡುತ್ತಿದ್ದ. ಪ್ರೀತಿ ಮಾಡುವುದಾಗಿ ನಂಬಿಸಿ ಕಷ್ಟ ಎಂದು ಹೇಳಿ ಯುವತಿ ಬಳಿಯಿಂದ ಚಿನ್ನದ ಸರ ಪಡೆದುಕೊಂಡಿದ್ದ. ಗಿರವಿ ಇಟ್ಟು ಬಂದ ಹಣವನ್ನು ಪಡೆದು ಮೋಜು ಮಾಡಿದ್ದ. ಬಳಿಕವೂ ಯುವತಿ ಬಳಿ ಹಂತಹಂತವಾಗಿ ಚಿನ್ನಾಭರಣಗಳನ್ನು ಪಡೆದುಕೊಂಡಿದ್ದನು.
ಅಲ್ಲದೆ ಒಂದು ದಿನ ಮನೆಯಲ್ಲಿ ಯಾರು ಇಲ್ಲದ ವೇಳೆ ಬಂದು ಮನೆಯಲ್ಲಿದ್ದ ಒಡವೆಗಳನ್ನು ಸಹ ಮೋಸದಿಂದ ಪಡೆದುಕೊಂಡಿದ್ದನು. ಬಂಧಿತನಿಂದ 8 ಲಕ್ಷ ರೂ. ಮೌಲ್ಯದ 180 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಲ್ಲಿ ಚಿನ್ನಾಭರಣ ನಾಪತ್ತೆಯಾಗುತ್ತಿರುವುದರಿಂದ ಚಿಂತೆಗೀಡಾದ ಯುವತಿಯ ಪೋಷಕರು ಮನೆಗಳ್ಳತನ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಂಧಿತ ಆರೋಪಿ ತಾನು ಒಡವೆಗಳನ್ನು ತೆಗೆದುಕೊಂಡಿರುವುದನ್ನು ಪೋಷಕರಿಗೆ ತಿಳಿಸಿದರೆ ಇನ್ನಷ್ಟು ತೊಂದರೆ ನೀಡುವುದಾಗಿ ಯುವತಿಯನ್ನು ಬೆದರಿಸಿದ್ದ ಎಂದು ಸಹ ಪೊಲೀಸರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ಬಂಧಿಸಿರುವ ಗಂಗಮ್ಮನಗುಡಿ ಪೊಲೀಸರು ಬಂಧಿತನಿಂದ 8 ಲಕ್ಷ ಮೌಲ್ಯದ ಚಿನ್ನದ ಸರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಗಂಗಮ್ಮನಗುಡಿ ಪೊಲೀಸ್ ಇನ್ಸ್ ಪೆಕ್ಟರ್ ಸಿದ್ದೇಗೌಡ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.