ಚಿಕ್ಕಮಗಳೂರು: ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಕುಟುಂಬಸ್ಥರಿಗೆ ವಾಯ್ಸ್ ಮೆಸೇಜ್ ಮಾಡಿ ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಬಳಿ ಗುರುವಾರ ನಡೆದಿದೆ.
ಘಟನೆಯಲ್ಲಿ ತಾಯಿ ನೀತು(35) ಹಾಗೂ ಮಗ ಧ್ಯಾನ್(13 ) ಇಬ್ಬರನ್ನು ರಕ್ಷಿಸಲಾಗಿದೆ. ನೀತು ಪತಿ ಮಂಜು, ಅತ್ತೆ ಸುನಂದಮ್ಮ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ.
ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ದಳ ಹಾಗೂ ತರೀಕೆರೆ ಪೊಲೀಸರು ನೀರಲ್ಲಿ ಮುಳುಗಿರುವ ಇಬ್ಬರ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದವರನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹಳೇಜೇಡಿಕಟ್ಟೆ ಗ್ರಾಮದವರು ಎಂದು ಗುರುತಿಸಲಾಗಿದೆ. ಮೂಲತಃ ಭದ್ರಾವತಿ ತಾಲೂಕಿನ ಹಳೇ ಜೇಡಿಕಟ್ಟೆ ಮೂಲದ ನೀತು ಎಂಬವರನ್ನು ಬೆಂಗಳೂರಿಗೆ ಮದುವೆ ಮಾಡಿಕೊಟ್ಟಿದ್ದರು. ದಂಪತಿಗೆ 13 ವರ್ಷ ಪ್ರಾಯದ ಧ್ಯಾನ್ ಎಂಬ ಮಗನಿದ್ದಾರೆ.
ಕಳೆದ ರಾತ್ರಿ 1 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದ ಮಂಜು, ನೀತು, ಧ್ಯಾನ್ ಹಾಗೂ ಮಂಜು ತಾಯಿ ಸುನಂದಮ್ಮ ನಾಲ್ವರು ಸ್ವಿಫ್ಟ್ ಕಾರಿನಲ್ಲಿ ಬಂದು ಭದ್ರಾ ನಾಲೆಗೆ ಕಾರಿನ ಸಮೇತ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಎಸ್ಪಿ ಅಕ್ಷಯ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Advertisement