ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಐವರ ಬಂಧನ, ಓರ್ವ ಬಾಲ ಆರೋಪಿ: ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದಲ್ಲಿ ಕಳೆದ ಆ.24ರಂದು ಸಾಯಂಕಾಲ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರವೀಣ್ ಸೂದ್
ಪ್ರವೀಣ್ ಸೂದ್

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದಲ್ಲಿ ಕಳೆದ ಆ.24ರಂದು ಸಾಯಂಕಾಲ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜ್ಯಾದ್ಯಂತ ನಾಗರಿಕರ, ಮಹಿಳಾ ಸಂಘಟನೆಗಳು, ವಿರೋಧ ಪಕ್ಷ ನಾಯಕರ ತೀವ್ರ ಆಕ್ರೋಶ, ಆರೋಪಗಳು ಸರ್ಕಾರದ ವಿರುದ್ಧ ಮತ್ತು ಪೊಲೀಸ್ ಇಲಾಖೆ ವಿರುದ್ಧ ವ್ಯಕ್ತವಾಗಿದ್ದವು. ಪೊಲೀಸರು 85 ಗಂಟೆಗಳಿಗೂ ಹೆಚ್ಚು ಕಾಲ ಸತತ ಕಾರ್ಯಾಚರಣೆ ನಡೆಸಿ  ಶನಿವಾರ ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಅವರು, ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ತಮಿಳು ನಾಡಿನ ತಿರುಪುರ್ ಮೂಲದವರಾಗಿದ್ದು ಕೂಲಿ ಕಾರ್ಮಿಕರಾಗಿದ್ದು ಅವಿದ್ಯಾವಂತರು ಕೂಡ. ಚಾಲಕ, ಕಾರ್ಪೆಂಟರ್ ನಂತಹ ಕೂಲಿ ಕೆಲಸ ಮಾಡುತ್ತಿದ್ದರು. ಮೈಸೂರಿಗೆ ತರಕಾರಿ ತೆಗೆದುಕೊಂಡು ಮಂಡಿಗೆ ಬಂದು ಹೋಗುತ್ತಿದ್ದರು. ಹೀಗೆ ಮೊನ್ನೆ ಬಂದಿದ್ದವರು ಈ ಕುಕೃತ್ಯ ನಡೆಸಿದ್ದು ಅವರಲ್ಲಿ 17 ವರ್ಷದ ಒಬ್ಬ ಬಾಲ ಆರೋಪಿ ಕೂಡ ಇದ್ದಾನೆ ಎಂದು ಮಾಹಿತಿ ನೀಡಿದರು.

ತನಿಖೆ ಪ್ರಾಥಮಿಕ ಹಂತದಲ್ಲಿದ್ದು ಹೆಚ್ಚಿನ ವಿವರ ನೀಡಲು ಈ ಸಂದರ್ಭದಲ್ಲಿ ಸಾಧ್ಯವಿಲ್ಲ. ಮೈಸೂರಿನ ಎಪಿಎಂಸಿ ಮಾರುಕಟ್ಟೆಗೆ ಆಗಾಗ ಬಂದು ಹೋಗುತ್ತಿದ್ದ ಆರೋಪಿಗಳು ಹೀಗೆ ಬಂದು ಹೋಗುವಾಗ ಪಾರ್ಟಿ ಮಾಡುತ್ತಿದ್ದರು. ಮೊನ್ನೆ ಘಟನೆ ನಡೆದ ದಿನ ಕೂಡ ಸಾಯಂಕಾಲ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪಾರ್ಟಿ ನಡೆಸಿದ್ದಾರೆ. 

ಆರು ಮಂದಿ ಆರೋಪಿಗಳು: ಸಾಮೂಹಿಕ ಅತ್ಯಾಚಾರದಲ್ಲಿ 6 ಮಂದಿ ಭಾಗಿಯಾಗಿದ್ದು ಓರ್ವ ತಲೆಮರೆಸಿಕೊಂಡಿದ್ದಾನೆ, ಆತನ ಶೀಘ್ರ ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಯುವತಿ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸಹ ತಿಳಿಸಿದರು.

ವಿಶೇಷ ತಂಡ ಕಾರ್ಯಾಚರಣೆ: ಪ್ರಕರಣವನ್ನು ಭೇದಿಸಲು ಎಡಿಜಿಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು, ಅವರ ಜೊತೆ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಕಳೆದ ರಾತ್ರಿಯಿಡೀ ಶೋಧ ನಡೆಸಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದರು.

ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಆರೋಪಿಗಳು:ಬೆಟ್ಟದ ತಪ್ಪಲಿನಲ್ಲಿ ಕುಳಿತಿದ್ದ ಯುವಕ ಮತ್ತು ಯುವತಿ ಬಳಿ ಬಂದ ಕಾಮಾಂಧರು ಆರಂಭದಲ್ಲಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಯುವಕನ ಬಳಿ ಹಣ ಕಳುಹಿಸುವಂತೆ ಮನೆಗೆ ತಂದೆಗೆ ಫೋನ್ ನಲ್ಲಿ ಕರೆ ಮಾಡಿ ಹೇಳೆಂದು ಒತ್ತಾಯಿಸಿದ್ದಾರೆ. ಯುವಕ ಹೆದರಿ ಕರೆ ಮಾಡಿದಾಗ ಮನೆಯವರು ಹಣ ನೀಡಲು ಒಪ್ಪಲಿಲ್ಲ. ಆಗ ಯುವಕನ ಮೇಲೆ ಹಲ್ಲೆ ಮಾಡಿ ಯುವತಿಯನ್ನು ಎಳೆದೊಯ್ದು ಬಲವಂತವಾಗಿ ಅತ್ಯಾಚಾರ ನಡೆಸಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ ಎಂದರು. 

ಸಂಪೂರ್ಣವಾಗಿ ವೈಜ್ಞಾನಿಕ ಮತ್ತು ತಾಂತ್ರಿಕ ಸಾಕ್ಷಿಗಳ ಆಧಾರದ ಮೇಲೆ ಆರೋಪಿಗಳು ಸೆರೆಸಿಕ್ಕಿದ್ದು ಎಫ್ ಎಸ್ ಎಲ್ ತಂಡ ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದು ವೈಜ್ಞಾನಿಕ ಸಾಕ್ಷಿಗಳ ಆಧಾರದ ಮೇಲೆ ನಾವು ಆದಷ್ಟು ಶೀಘ್ರ ಆರೋಪಪಟ್ಟಿ ಸಲ್ಲಿಸುತ್ತೇವೆ ಎಂದು ಪ್ರವೀಣ್ ಸೂದ್ ತಿಳಿಸಿದರು.

ಬಾಲ ಆರೋಪಿಯ ನಿಖರವಾದ ವಯಸ್ಸು ತಿಳಿದುಬಂದಿಲ್ಲ. ಬಂಧಿತರು ತಮಿಳು ನಾಡಿನಲ್ಲಿ ಕೆಲವು ಅಪರಾಧ ಹಿನ್ನೆಲೆ ಹೊಂದಿದವರಾಗಿದ್ದಾರೆ ಎಂದು ಹೇಳಲಾಗುತ್ತಿದ್ದು ತನಿಖೆಯ ನಂತರ ದೃಢವಾಗಬೇಕಿದೆ ಎಂದರು.

ಕೇಸಿನ ತ್ವರಿತ ವಿಚಾರಣೆಗೆ ನಾವು ಹೈಕೋರ್ಟ್ ಗೆ ಮನವಿ ಮಾಡುತ್ತೇವೆ. ಅಗತ್ಯಬಿದ್ದರೆ ವಿಶೇಷ ಪ್ರಾಸಿಕ್ಯೂಟರ್ ನೇಮಕ ಮಾಡಿ ಸದ್ಯದಲ್ಲಿಯೇ ಆರೋಪಿಗಳನ್ನು ಜೈಲಿಗಟ್ಟುವ ಕೆಲಸ ಮಾಡುತ್ತೇವೆ. ಸಂತ್ರಸ್ತೆ ಮುಂದಿನ ದಿನಗಳಲ್ಲಿ ವಿಚಾರಣೆ ವೇಳೆ ಸಹಕಾರ ನೀಡಬಹುದು ಎಂದು ನಿರೀಕ್ಷಿಸುತ್ತೇವೆ ಎಂದು ಕೂಡ ಡಿಜಿ, ಐಜಿಪಿ ಪ್ರವೀಣ್ ಸೂದ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com