ಹೊಸಕೋಟೆ ಪಟ್ಟಣಕ್ಕೆ ಮೆಟ್ರೊ ರೈಲು ಸಂಚಾರ ವಿಸ್ತರಿಸಿ: ಸಚಿವ ಎಂಟಿಬಿ ನಾಗರಾಜ್
ಹೊಸಕೋಟೆ ಪಟ್ಟಣಕ್ಕೆ ಮೆಟ್ರೊ ರೈಲು ಸಂಚಾರ ವಿಸ್ತರಿಸುವಂತೆ ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಮನವಿ ಮಾಡಿದ್ದಾರೆ.
Published: 30th August 2021 08:56 AM | Last Updated: 30th August 2021 08:56 AM | A+A A-

ಎಂಟಿಬಿ ನಾಗರಾಜ್
ಬೆಂಗಳೂರು: ಹೊಸಕೋಟೆ ಪಟ್ಟಣಕ್ಕೆ ಮೆಟ್ರೊ ರೈಲು ಸಂಚಾರ ವಿಸ್ತರಿಸುವಂತೆ ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜ್ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮೈಸೂರು-ಕೆಂಗೇರಿ ವಿಸ್ತರಿತ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ ದೀಪ್ ಸಿಂಗ್ ಪುರಿ ಅವರಿಗೆ ಮುಖ್ಯಮಂತ್ರಿಗಳ ಮೂಲಕ ಸಚಿವ ಎಂಟಿಬಿ ನಾಗರಾಜ್ ಮನವಿ ಸಲ್ಲಿಸಿದರು.
ಹೊಸಕೋಟೆ ಪಟ್ಟಣವು ಮಾಲೂರು ಕೈಗಾರಿಕಾ ಪ್ರದೇಶ,ನಂದಗುಡಿ ಕೈಗಾರಿಕಾ ಪ್ರದೇಶ ಮತ್ತು ಕೋಲಾರ ಕೈಗಾರಿಕಾ ಪ್ರದೇಶಗಳ ಹೆಬ್ಬಾಗಿಲು.ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬದಲಿ ರಸ್ತೆಯು ಹೊಸಕೋಟೆ ತಾಲ್ಲೂಕಿನ ಮೂಲಕ ಹಾದು ಹೋಗುತ್ತದೆ.
ಹೊಸಕೋಟೆ ಪಟ್ಟಣದಲ್ಲಿನ ಜೀವನ ಮಟ್ಟ ಬೆಂಗಳೂರು ನಗರಕ್ಕಿಂತ ಕಡಿಮೆ ಇರುವುದರಿಂದ ಬೆಂಗಳೂರಿನ ಉದ್ಯೋಗಿಗಳು ಬೆಂಗಳೂರು ಹೊರವಲಯ ಹಾಗೂ ಹೊಸಕೋಟೆ ಪಟ್ಟಣದಲ್ಲಿ ಭಾರೀ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಅವರು ಬೆಂಗಳೂರಿಗೆ ತೆರಳಲು ಮೆಟ್ರೊ ರೈಲು ಸಂಚಾರ ಕಲ್ಪಿಸಿದರೆ ರಸ್ತೆ ಮಾರ್ಗದ ಮೇಲೆ ಇರುವ ಅತೀ ದೊಡ್ಡ ಒತ್ತಡವನ್ನು ತಪ್ಪಿಸಬಹುದು. ಹಾಗಾಗಿ, ಮೆಟ್ರೊ ರೈಲು ಮಾರ್ಗವನ್ನು ಹೊಸಕೋಟೆ ಪಟ್ಟಣದವರೆಗೆ ವಿಸ್ತರಿಸುವಂತೆ ಮನವಿ ಮಾಡುತ್ತೇನೆ ಎಂದು ಸಚಿವ ಎಂಟಿಬಿ ನಾಗರಾಜ್ ತಮ್ಮ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.