ಬೆಳಗಾವಿ ಅಧಿವೇಶನ: ಕಾಶಿ ರೀತಿಯಲ್ಲಿ ಕೆಳದಿ ಅರಮನೆ, ಇತರ ಸ್ಮಾರಕಗಳನ್ನು ಸಂರಕ್ಷಿಸುವಂತೆ ತೇಜಸ್ವಿನಿ ಆಗ್ರಹ
ಪ್ರಧಾನಿ ನರೇಂದ್ರ ಮೋದಿ ಅವರು ದಿವ್ಯ ಕಾಶಿ ಭವ್ಯ ಕಾಶಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿ ಸೋಮವಾರ ಉದ್ಘಾಟಿಸಿದ್ದಾರೆ. ಅದೇ ರೀತಿ ರಾಜ್ಯದ ಕೆಳದಿಯ ಅರಸರ ಅರಮನೆ ಹಾಗೂ ಇತರ ಸ್ಮಾರಕಗಳನ್ನು ಸಂರಕ್ಷಿಸಿ...
Published: 13th December 2021 03:58 PM | Last Updated: 13th December 2021 04:57 PM | A+A A-

ಸಾಂದರ್ಭಿಕ ಚಿತ್ರ
ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರು ದಿವ್ಯ ಕಾಶಿ ಭವ್ಯ ಕಾಶಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿ ಸೋಮವಾರ ಉದ್ಘಾಟಿಸಿದ್ದಾರೆ. ಅದೇ ರೀತಿ ರಾಜ್ಯದ ಕೆಳದಿಯ ಅರಸರ ಅರಮನೆ ಹಾಗೂ ಇತರ ಸ್ಮಾರಕಗಳನ್ನು ಸಂರಕ್ಷಿಸಿ ಪುನರುಜ್ಜಿವನಗೊಳಿಸಬೇಕು ಎಂದು ವಿಧಾನ ಪರಿಷತ್‌ನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯೆ ತೇಜಸ್ವಿನಿ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಪ್ರವಾಸೋದ್ಯಮ ಅಭಿವೃದ್ಧಿ ಸಚಿವರ ಪರವಾಗಿ ಉತ್ತರ ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ಸದಸ್ಯರು ಪ್ರಸ್ತಾಪಿಸಿದ ಎಲ್ಲಾ ವಿಚಾರಗಳನ್ನು ಸರ್ಕಾರ ಪರಿಶೀಲಿಸಲಿದೆ, ಕಾಮಗಾರಿ ಕೈಗೊಳ್ಳಲು ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದರು.
ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಮಧ್ಯ ಪ್ರವೇಶ ಮಾಡಿ, ೨೬೫ ಸ್ಮಾರಕಗಳಿವೆ. ಅವು ಅಳಿದರೆ ಮತ್ತೆ ಸಿಗಲ್ಲ. ಸರ್ಕಾರ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದರು.
ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ಸಂರಕ್ಷಿತ ಪ್ರದೇಶದಿಂದ ೧೦೦ ಮೀಟರ್ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಲು ಪುರಾತತ್ವ ಇಲಾಖೆ ಅನುಮತಿ ಪಡೆಯಬೇಕಿದೆ. ತಾಂತ್ರಿಕ ಸಮಸ್ಯೆ ಇದೆ. ಮುಂದಿನ ತಿಂಗಳಲ್ಲಿ ಸಭೆ ನಡೆಸಿ, ಸೀಮಿತ ಅನುಮತಿ ಪಡೆದು ಕಾಮಗಾರಿ ಕೈಗೊಳ್ಳಲು ಅನುಮತಿ ಸಿಕ್ಕರೆ, ಸರ್ಕಾರ ಹಣಕಾಸಿನ ಸೌಲಭ್ಯ ನೀಡಲಿದೆ. ರಾಜ್ಯದಲ್ಲಿರುವ ಎಲ್ಲಾ ಐತಿಹಾಸಿಕ ಪುರಾತತ್ವ ಇಲಾಖೆ ಸ್ಮಾರಕ ಹಾಗೂ ಕಟ್ಟಡಗಳನ್ನು ಸಂರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ, ಅಪ್ಪುಗೆ ಪದ್ಮಶ್ರೀಗೆ ಶಿಫಾರಸು
ಸರಸ್ವತಿ ಸನ್ಮಾನ್ ಪ್ರಶಸ್ತಿ ಪುರಸ್ಕೃತ ಎಸ್.ಎಲ್.ಭೈರಪ್ಪ ಅವರ ಪರ್ವ ಕಾದಂಬರಿ ಆಧರಿಸಿ ನಾಟಕ ರೂಪಕಗಳ ಪ್ರದರ್ಶನಕ್ಕೆ ರಾಜ್ಯ ಸರ್ಕಾರ ಒಂದು ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಸನಾತನ ಧರ್ಮದಲ್ಲಿ ಮಾಂಸಾಹಾರ ಜಾರಿಯಲ್ಲಿತ್ತು ಎಂದು ಕಾದಂಬರಿಯಲ್ಲಿ ಲೇಖಕ ಬೈರಪ್ಪ ಅವರು ಉಲ್ಲೇಖಿಸಿದ್ದಾರೆ. ಕಾದಂಬರಿಯಲ್ಲಿರುವ ಸಂಭಾಷಣೆಗಳನ್ನು ಯಥಾವತ್ತಾಗಿ ನಾಟಕದಲ್ಲಿ ಅಳವಡಿಸಬೇಕು ಎಂದು ಸದಸ್ಯ ಪಿ.ಆರ್.ರಮೇಶ್ ಅವರು ಆಗ್ರಹಿಸಿದರು.
ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರು ಉತ್ತರ ನೀಡಿ, ನಾಟಕ ನಿರ್ದೇಶನ ಮಾಡುತ್ತಿರುವುದು ಪ್ರಕಾಶ ಬೆಳವಾಡಿ, ರಂಗಾಯಣದ ಮೂಲಕ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಸರ್ಕಾರ ೫೦ ಲಕ್ಷ ಬಿಡುಗಡೆ ಮಾಡಿದೆ. ನವೆಂಬರ್ ಒಳಗೆ ೭೦ ಲಕ್ಷ ಖರ್ಚು ಮಾಡಲಾಗಿದೆ. ಬಾಕಿ ಅನುದಾನವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದು. ನಾಟಕದ ನಿರ್ದೇಶನದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ ಎಂದು ಹೇಳಿದರು. ರಾಜ್ಯ ಸರ್ಕಾರ ಅನುದಾನ ನೀಡುತ್ತಿದೆ. ಸೂಕ್ತ ಸಲಹೆ ನೀಡಿ ಎಂದು ಸದಸ್ಯ ರಮೇಶ್ ಒತ್ತಾಯಿಸಿದರು.
ಪ್ರತಾಪ್ ಚಂದ್ರಶೆಟ್ಟಿ ಅವರು ಕೊಲ್ಲೂರಿನ ವಿದ್ಯುತ್ ಇಲಾಖೆಗೆ ಸ್ಥಾವರ ನಿರ್ಮಾಣದ ಬಗ್ಗೆ ಕೇಳಿದ ಪ್ರಶ್ನೆಗೆ ಇಂಧನ ಖಾತೆ ಸಚಿವರಾದ ಸುನೀಲ್ ಕುಮಾರ್ ಉತ್ತರ ನೀಡಿದರು.