ಶೀಘ್ರದಲ್ಲೇ ಎರಡು ಸಾವಿರ ಭೂ ಮಾಪಕರ ನೇಮಕ: ಕಂದಾಯ ಸಚಿವ ಆರ್ ಅಶೋಕ್
ಕಂದಾಯ ಇಲಾಖೆಯಲ್ಲಿ ಪಹಣಿಯಲ್ಲಿನ ಹಕ್ಕು ದಾಖಲೆ ತಿದ್ದುಪಡಿಗೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ಮತ್ತಷ್ಟು ಸರಳಿಕರಣ ಮಾಡಲಾಗುವುದು. ಹೆಚ್ಚೆಚ್ಚು ಕಂದಾಯ ಅದಾಲತ್‍ಗಳನ್ನು ನಡೆಸುವುದರ ಮೂಲಕ ಹಕ್ಕು ದಾಖಲೆ ತಿದ್ದುಪಡಿ...
Published: 15th December 2021 07:55 PM | Last Updated: 15th December 2021 07:55 PM | A+A A-

ಕಂದಾಯ ಸಚಿವ ಆರ್.ಅಶೋಕ್
ಬೆಳಗಾವಿ: ಕಂದಾಯ ಇಲಾಖೆಯಲ್ಲಿ ಪಹಣಿಯಲ್ಲಿನ ಹಕ್ಕು ದಾಖಲೆ ತಿದ್ದುಪಡಿಗೆ ಸಂಬಂಧಿಸಿದಂತೆ ಇರುವ ನಿಯಮಗಳನ್ನು ಮತ್ತಷ್ಟು ಸರಳಿಕರಣ ಮಾಡಲಾಗುವುದು. ಹೆಚ್ಚೆಚ್ಚು ಕಂದಾಯ ಅದಾಲತ್‍ಗಳನ್ನು ನಡೆಸುವುದರ ಮೂಲಕ ಹಕ್ಕು ದಾಖಲೆ ತಿದ್ದುಪಡಿ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಬುಧವಾರ ವಿಧಾನಪರಿಷತ್ ಗೆ ತಿಳಿಸಿದರು.
ಸದಸ್ಯ ಮರಿತಿಬ್ಬೇಗೌಡ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳನ್ನು ಹೊರತುಪಡಿಸಿ ಕಂದಾಯ ಅದಾಲತ್ ಕಾರ್ಯಕ್ರಮದ ಮೂಲಕ ಪಹಣಿ ತಿದ್ದುಪಡಿ ಅಧಿಕಾರವನ್ನು ತಹಸೀಲ್ದಾರರಿಗೆ ಪ್ರತ್ಯಾಯೋಜಿಸಲಾಗಿದೆ ಎಂದರು.
ಇದನ್ನು ಓದಿ: ಮತಾಂತರ ನಿಷೇಧ ಕಾಯ್ದೆ ಬಗ್ಗೆ ಬಿಜೆಪಿ ಶಾಸಕಾಂಗ ಪಕ್ಷದಲ್ಲಿ ವಿಸ್ತೃತ ಚರ್ಚೆ: ಗೃಹ ಸಚಿವ
2019ರ ಜನೆವರಿ 1ರಿಂದ 2021ರ ನವೆಂಬರ್ 30ರವರೆಗೆ ಕಂದಾಯ ಅದಾಲತ್‍ನಲ್ಲಿ ಆರ್‍ಟಿಸಿ ತಿದ್ದುಪಡಿಯ ಬಗ್ಗೆ 193687 ಅರ್ಜಿಗಳು ಸ್ವೀಕೃತವಾಗಿದ್ದು, ಮೋಜಿಣಿ ವ್ಯವಸ್ಥೆ ಅಡಿ 373234 ಆರ್‍ಟಿಸಿ ತಿದ್ದುಪಡಿಯ ಬಗ್ಗೆ ಸ್ವೀಕೃತವಾಗಿರುತ್ತದೆ. ಈ ಪೈಕಿ ಕಂದಾಯ ಅದಾಲತ್‍ನಲ್ಲಿ 193687 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿದರು.
ಮೋಜಿಣಿ ವ್ಯವಸ್ಥೆ ಅಡಿ 207589 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. 165645 ಅರ್ಜಿಗಳು ತಿದ್ದುಪಡಿಗೆ ಬಾಕಿ ಇವೆ ಎಂದು ಅವರು ತಿಳಿಸಿದರು.
ಹಕ್ಕು ದಾಖಲೆ ತಿದ್ದುಪಡಿ(ಆರ್‍ಆರ್‍ಟಿ)ಯನ್ನು ಆನ್‍ಲೈನ್ ಅಥವಾ ಸಕಾಲ ವ್ಯಾಪ್ತಿಗೆ ತರಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಅಶೋಕ್ ಅವರು, ಹಕ್ಕು ದಾಖಲೆ ತಿದ್ದುಪಡಿ ಅನಗತ್ಯ ವಿಳಂಬ ಹಾಗೂ ಭ್ರಷ್ಟಾಚಾರ ತಾಂಡವಾಡುತ್ತಿರುವುದರ ಕುರಿತ ದೂರುಗಳು ಬಂದಲ್ಲಿ ಡಿಸಿ/ಎಸಿಗಳಿಂದ ತನಿಖಾ ವರದಿ ಪಡೆದು ನಿಯಮಾನುಸಾರ ಪರಿಶೀಲಿಸಿ ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.
ವಿಶೇಷ ಸಭೆ ಕರೆದು ಸಮಸ್ಯೆಗೆ ಪರಿಹಾರ, ಪಹಣಿ, ಭೂ ಮಂಜೂರಾತಿ, ಹಕ್ಕು ತಿದ್ದುಪಡಿಯಂತ ಸಮಸ್ಯೆಗಳು ಕಳೆದ 40 ವರ್ಷಗಳಿಂದಿವೆ. ಮಂಜೂರಾತಿ(ಗ್ರ್ಯಾಂಟ್)ಪತ್ರ ಒಬ್ಬರಿಗಿದ್ದರೇ ಭೂಮಿಯಲ್ಲಿ ಮತ್ತೊಬ್ಬರು ವ್ಯವಸಾಯ ಮಾಡುತ್ತಿದ್ದಾರೆ; ಯಾರಿಗೆ ಅದರ ಒಡೆತನ ನೀಡಬೇಕೆಂಬುದೇ ನಮ್ಮ ಮುಂದಿರುವ ದೊಡ್ಡ ಸವಾಲು ಎಂದು ಸದನದಲ್ಲಿ ತಿಳಿಸಿದ ಸಚಿವ ಅಶೋಕ್, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವಿಶೇಷ ಸಭೆ ಕರೆಯಲು ತಿಳಿಸಿದ್ದು, ಅವರ ಅಭಿಪ್ರಾಯಗಳನ್ನು ಸಹ ಆಲಿಸಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಮತ್ತೆ 2 ಸಾವಿರ ಪರವಾನಿಗೆ ಭೂಮಾಪಕರ ನೇಮಕ
ಈಗಾಗಲೇ 841 ಪರವಾನಿಗೆ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಮತ್ತೆ 2 ಸಾವಿರ ಪರವಾನಿಗೆ ಭೂಮಾಪಕರನ್ನು ನೇಮಕ ಮಾಡಿಕೊಳ್ಳಲು ಶೀಘ್ರ ಕ್ರಮವಹಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಅವರು ಇದೇ ಸಂದರ್ಭದಲ್ಲಿ ಸದನಕ್ಕೆ ತಿಳಿಸಿದರು.
ಇಲಾಖೆಯಲ್ಲಿ ಈಗಾಗಲೇ 3500 ಭೂಮಾಪಕರಿದ್ದಾರೆ. ಹೊಸದಾಗಿ ನೇಮಿಸಿಕೊಳ್ಳುವ ಪರವಾನಿಗೆ ಭೂಮಾಪಕರನ್ನು ಸೇರಿದಂತೆ ಎಲ್ಲರನ್ನು ಬಳಸಿಕೊಂಡು ನಾಲ್ಕೈದು ತಿಂಗಳಲ್ಲಿ ಬಾಕಿ ಇರುವ ಭೂಸರ್ವೆ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು ಎಂದರು.