ಚಳಿಗಾಲದ ಅಧಿವೇಶನ: ಸಭಾಪತಿ ಆದೇಶ ಉಲ್ಲಂಘಿಸಿದ ವಿಧಾನ ಪರಿಷತ್ ನ 14 ಕಾಂಗ್ರೆಸ್ ಸದಸ್ಯರ ಅಮಾನತು

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸಭಾಪತಿ ಅದೇಶ ಉಲ್ಲಂಘನೆ ಆರೋಪದಡಿಯಲ್ಲಿ ವಿಧಾನ ಪರಿಷತ್ತಿನ 14 ಮಂದಿ ಸದಸ್ಯರನ್ನು ಅಮಾನತು ಮಾಡಲಾಗಿದೆ.
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಸಭಾಪತಿ ಅದೇಶ ಉಲ್ಲಂಘನೆ ಆರೋಪದಡಿಯಲ್ಲಿ ವಿಧಾನ ಪರಿಷತ್ತಿನ 14 ಮಂದಿ ಸದಸ್ಯರನ್ನು ಅಮಾನತು ಮಾಡಲಾಗಿದೆ. 

ಸದನದ ಬಾವಿಗಿಳಿದು ಧರಣಿ ಮಾಡಿದ್ದ ಸದಸ್ಯರನ್ನು ಸಭಾಪತಿ ಬಸವರಾಜ ಹೊರಟ್ಟಿ ಅವರು ಒಂದು ದಿನದ ಮಟ್ಟಿಗೆ ಅಮಾನತು ಮಾಡಿದ್ದಾರೆ. 

ಸಿಎಂ ಇಬ್ರಾಹಿಂ, ಪಿಆರ್ ರಮೇಶ್, ಪ್ರತಾಪ್ ಚಂದ್ರ ಶೆಟ್ಟಿ, ಎಸ್ ಆರ್ ಪಾಟೀಲ್, ಪಿಆರ್ ರಮೇಶ್, ನಾರಾಯಣ ಸ್ವಾಮಿ, ಬಿಕೆ ಹರಿಪ್ರಸಾದ್, ಯಬಿ ವೆಂಕಟೇಶ್, ವೀಣಾ ಅಚ್ಚಯ್ಯ ಸೇರಿ 14 ಮಂದಿಯನ್ನು ಅಮಾನತು ಮಾಡಲಾಗಿದೆ.

ವಿವರ: ಅತಿವೃಷ್ಟಿ, ಪ್ರವಾಹದಿಂದಾಗಿ ರಾಜ್ಯದಲ್ಲಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೃಷಿಕನ ನೆರವಿಗೆ ಧಾವಿಸುವ ಸಂಬಂಧ ಸಾಲಮನ್ನಾ ಮಾಡಲು ಮುಂದಾಗಬೇಕೆಂದು ವಿಧಾನಸಭೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಆಗ್ರಹಿಸಿದರು.

ಬೆಳೆ ಹಾನಿ ಪರಿಹಾರ ಕುರಿತ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್ ನ ಬೀದರ್ ಶಾಸಕ ಬಂಡೆಪ್ಪ ಕಾಶೆಂಪೂರ್, ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ 24 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಸಾಲ ಮನ್ನಾ ಮಾಡಲಾಗಿತ್ತು. ಈಗ ರಾಜ್ಯದಲ್ಲಿ ಹಿಂದೆ ಕಂಡರಿಯದ ರೀತಿಯಲ್ಲಿ ಮಳೆಯಿಂದ ಬೆಳೆಹಾನಿಯಾಗಿದೆ. ಕುಮಾರಸ್ವಾಮಿ ಅವರು 24 ಸಾವಿರ ಕೋಟಿ ರೂಪಾಯಿ ಮನ್ನಾ ಮಾಡಿದ್ದರು. ಈಗಿನ ಸರ್ಕಾರ 24 ಸಾವಿರ ಕೋಟಿ ಜೊತೆಗೆ 20 ಸಾವಿರ ಕೋಟಿ ಹಾಕಿ ಒಟ್ಟು 44 ಸಾವಿರ ಕೋಟಿ ರೂಪಾಯಿ ಮನ್ನಾ ಮಾಡುವಂತೆ ಆಗ್ರಹಿಸಿದರು.

ಕಾರಂಜಾ ನೀರಾವರಿ ಯೋಜನೆ ವ್ಯಾಪ್ತಿಯ 20 ಹಳ್ಳಿಗಳ ರೈತರ ಜಮೀನುಗಳಿಗೆ ಹೆಚ್ಚುವರಿ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಆ ಭಾಗದ ರೈತರಿಗೆ ಪರಿಹಾರ ಸಿಕ್ಕಿಲ್ಲ. ಕೃಷಿ ಆಪ್‌ ಅನ್ನು ರೈತರು ಸರಿಯಾಗಿ ಬಳಸಲು ಆಗುತ್ತಿಲ್ಲ. ಟೋಲ್ ಫ್ರೀ ನಂಬರ್ ಕರೆ ಮಾಡಿದ್ರೆ ಪ್ರತಿಕ್ರಿಯೆ ನೀಡುತ್ತಿಲ್ಲ. ರೈತ ಸಂಪರ್ಕ ಕೇಂದ್ರಕ್ಕೆ ಹೋದ್ರೆ ಒಬ್ಬ ಅಧಿಕಾರಿಯೂ ಕೈಗೆ ಸಿಗೋದಿಲ್ಲ. ಸದ್ಯ ರೈತರು ಸಮಸ್ಯೆಯಲ್ಲಿ ಇದ್ದಾನೆ. ಮೋದಿ ಹಾಗೂ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಎಷ್ಟು ಕೊಟ್ಟಿದ್ದಾರೆ ಅನ್ನೋದನ್ನು ಲೆಕ್ಕ ಹಾಕುವುದನ್ನು ಬಿಟ್ಟು ಈಗ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದು ಬಂಡೆಪ್ಪ ಕಾಶೆಂಪೂರ್ ಆಗ್ರಹಿಸಿದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕಾರ್ಮಿಕರಿಗೆ ಸರಿಯಾದ ಸಮಯದಲ್ಲಿ ಕೂಲಿ ಸಿಗುತ್ತಿಲ್ಲ ಎಂದು ಆರೋಪಿಸಿದರು. ಈ ವಿಚಾರಕ್ಕೆ ಪ್ರತ್ಯುತ್ತರ ನೀಡಿದ ಕೆ.ಎಸ್.ಈಶ್ವರಪ್ಪ, ಕಳೆದ 6-8 ತಿಂಗಳಿನಿಂದ ಕೂಲಿ ನೀಡಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಾಗ 1 ಸಾವಿರ ಕೋಟಿ ರೂಪಾಯಿಯನ್ನು ನೀಡಿತು. ಹಳೆಯ ಬಾಕಿಯನ್ನು ರಾಜ್ಯ ಸರ್ಕಾರ ಪಾವತಿ ಮಾಡಿದೆ. ಆದರೆ ಇತ್ತೀಚಿನ 2 ತಿಂಗಳುಗಳ ಕೂಲಿ ಬಾಕಿ ಉಳಿದುಕೊಂಡಿದೆ ಎಂದು ಸ್ಪಷ್ಟನೆ ನೀಡಿದರು.

ಈಶ್ವರಪ್ಪ ಉತ್ತರವನ್ನು ತಳ್ಳಿ ಹಾಕಿದ ಆರ್.ವಿ.ದೇಶಪಾಂಡೆ, ಕಾರ್ಮಿಕರಿಗೆ ಕೂಲಿ ಕೊಡಲು ಸಾಧ್ಯವಾಗದಿದ್ದರೆ ಅದು ಸರ್ಕಾರಕ್ಕೆ ಗೌರವ ತರಲ್ಲ. ನಿರಂತರವಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಸರ್ಕಾರ ಕೃಷಿಕರ ಸಾಲಗಳನ್ನು ಮನ್ನಾ ಮಾಡಿ. ರಾಷ್ಟ್ರೀಯಕೃತ ಬ್ಯಾಂಕುಗಳೊಂದಿಗೆ ಚರ್ಚಿಸಿ ನಿರ್ಧಾರಕ್ಕೆ ಬನ್ನಿ ಎಂದು ಸರ್ಕಾರಕ್ಕೆ ಸಲಹೆ ಮಾಡಿದರು.

ಇದೇ ವೇಳೆ ಜೆಡಿಎಸ್ ನ ಎಚ್.ಡಿ.ರೇವಣ್ಣ ಮಾತನಾಡಿ, ಹಾಸನ ಭಾಗದಲ್ಲಿ ಭತ್ತದ ಬೆಳೆ ನಾಶವಾಗಿದೆ. ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರದಿಂದ ಹಣ ತರುವ ಕೆಲಸವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.

ಇನ್ನು ಜೆಡಿಎಸ್ ಶಾಸಕ ಶಿವಲಿಂಗೇಗೌಡ, ರೈತ ಬೆಳೆ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾನೆ. ಉಳುವವನ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕಾಗಿರುವುದು ಆದ್ಯ ಕರ್ತವ್ಯವಾಗಬೇಕು. 1 ಹೆಕ್ಟೇರ್ ಜಮೀನಿಗೆ 6,500 ರೂಪಾಯಿ ನೀಡಿದ್ರೆ ರೈತ ಏನು ಮಾಡಲು ಸಾಧ್ಯ? 1 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಬೇಕಾದ್ರೆ ಕನಿಷ್ಠ 30 ರಿಂದ 35 ಸಾವಿರ ಖರ್ಚಾಗುತ್ತದೆ. ಹೀಗಾದ್ರೆ, ರೈತರು ಭೂಮಿಗೆ ಹಾಕಿದ ಬಂಡವಾಳ ಮರಳಿ ಅವರಿಗೆ ಸಿಗದಿದ್ದರೆ ಸರ್ಕಾರ ಏಕೆ ಬೇಕು ಎಂದು ಪ್ರಶ್ನೆ ಮಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದರು. ಆದರೆ ರೈತರಿಗೆ ಕಡ್ಡಾಯ ಮಾಡಲಿಲ್ಲ. ಅನ್ನದಾತರ ಜಮೀನನ್ನು ಗುರುತಿಸಿ ಫಸಲ್ ಭಿಮಾ ಯೋಜನೆಯ ವಿಮಾ ಕಂತನ್ನು ರಾಜ್ಯ ಸರ್ಕಾರವೇ ತುಂಬಬೇಕು. ಇದರಿಂದ ರೈತನಿಗೆ 35 ರಿಂದ 38 ಸಾವಿರ ರೂಪಾಯಿ ಬರುತ್ತದೆ. ಇದರಿಂದ ರೈತ ನೆಮ್ಮದಿಯಾಗಿರಬಹುದು ಅಂತಾ ತಿಳಿಸಿದರು.

ರಾಜ್ಯದಿಂದ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುವ ಹಣದಲ್ಲಿ ಇಂತಿಷ್ಟು ಪಾಲು ಬೇಕೆಂದು ರಾಜ್ಯ ಸರ್ಕಾರ ನಿಗದಿ ಮಾಡಬೇಕು. ಎಸ್ ಡಿ ಆರ್ ಎಫ್ ನಿಯಮಾವಳಿಗಳು ಪರಿಷ್ಕರಣೆಯಾಗಬೇಕು. ಯಡಿಯೂರಪ್ಪ ಅವರು ನೀಡಿದ ಸಲಹೆಯನ್ನು ರಾಜ್ಯ ಸರ್ಕಾರ ತಾತ್ಸಾ ಮಾಡಬಾರದು ಎಂದು ಸಲಹೆ ನೀಡಿದರು.

ಈ ಮಧ್ಯೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,  ಆರ್.ವಿ.ದೇಶಪಾಂಡೆ ಹಾಗೂ ಯಡಿಯೂರಪ್ಪ ಅವರ ಸಲಹೆಗಳನ್ನು ತಾವು ಒಪ್ಪುತ್ತೇವೆ. ಎಲ್ಲ ಯೋಜನೆಗಳನ್ನು ಬದಿಗೊತ್ತಿ ಸರ್ಕಾರ ರೈತರ ಬೆನ್ನಿಗೆ ನಿಲ್ಲಬೇಕಿದೆ ಎಂದು ಹೇಳಿದರು. ಇನ್ಸೂರೆನ್ಸ್ ಕಂಪನಿಗಳ ಬಗ್ಗೆ ಮಾತನಾಡಿದ ಅವರು, ಇನ್ಸೂರೆನ್ಸ್ ಅನ್ನೋದು ಬ್ಲಾಕ್ ಮಾರ್ಕೆಟ್.  ರಾಜ್ಯದ ಮುಖ್ಯಮಂತ್ರಿಗಳಾಗಲಿ, ಮುಖ್ಯ ಕಾರ್ಯದರ್ಶಿಗಳಾಗಲಿ ಇನ್ಸೂರೆನ್ಸ್ ಕಂಪನಿಯನ್ನು ಕರೆಯಿಸಿ ಚರ್ಚೆ ಮಾಡಬೇಕು ಹಾಗೂ ಅವರ ಮೇಲೆ ಕ್ರಮಕೈಗೊಳ್ಳಬೇಕು. ಈವರೆಗೆ ಒಬ್ಬ ರೈತನಿಗೆ ವಿಮೆ ಬಂದಿರುವುದನ್ನು ನಾನು ಕೇಳಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com