ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಇನ್ನು ಕೇವಲ 5 ದಿನ, ಆದರೆ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಇನ್ನೂ ಚರ್ಚೆಗೆ ಬಂದಿಲ್ಲ

ಹತ್ತು ದಿನಗಳ ಕಾಲದ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಇನ್ನೂ ಕೂಡ ಚರ್ಚೆಗೆ ಬಂದಿಲ್ಲ. ಮೊದಲ ವಾರದ ಅಧಿವೇಶನ ಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪವೇ ಆಗಿಲ್ಲ.
ಬೆಳಗಾವಿಯ ಸುವರ್ಣಸೌಧ
ಬೆಳಗಾವಿಯ ಸುವರ್ಣಸೌಧ

ಬೆಳಗಾವಿ: ಹತ್ತು ದಿನಗಳ ಕಾಲದ ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಇನ್ನೂ ಕೂಡ ಚರ್ಚೆಗೆ ಬಂದಿಲ್ಲ. ಮೊದಲ ವಾರದ ಅಧಿವೇಶನ ಕಲಾಪದಲ್ಲಿ ಈ ಬಗ್ಗೆ ಪ್ರಸ್ತಾಪವೇ ಆಗಿಲ್ಲ.

ಕಳೆದ ಒಂದು ವಾರದ ಕಲಾಪದಲ್ಲಿ ಅಧಿವೇಶನಕ್ಕೆ ಹಾಜರಾಗಿದ್ದು ಕೇವಲ ಶೇಕಡಾ 50ರಷ್ಟು ಶಾಸಕರು ಮಾತ್ರ. ಇನ್ನು ಕೇವಲ 5 ದಿನಗಳ ಕಾಲ ಕಲಾಪ ಬಾಕಿಯಿರುವುದು, ಅದರಲ್ಲಿ ಎಷ್ಟರ ಮಟ್ಟಿಗೆ ಉತ್ತರ ಕರ್ನಾಟಕ ಭಾಗದ ಬಗ್ಗೆ ಚರ್ಚೆಯಾಗಬಹುದು ಎಂಬ ಪ್ರಶ್ನೆ ಈ ಭಾಗದ ಜನರದ್ದು.

ಬಿಜೆಪಿಯ ಶಾಸಕರು, ಸಚಿವರ ವಿರುದ್ಧ ಅಕ್ರಮ ಭೂಕಬಳಿಕೆ ಆರೋಪ, ಕಾಂಗ್ರೆಸ್ ನಾಯಕ ಕೆ ಆರ್ ರಮೇಶ್ ಕುಮಾರ್ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವ ಕುರಿತಾಗಿ ನೀಡಿದ್ದ ಹೇಳಿಕೆ ಇದರ ಬಗ್ಗೆ ವಾಗ್ಯುದ್ಧ, ಚರ್ಚೆಗಳಲ್ಲಿಯೇ ಮೊದಲ ವಾರದ ಕಲಾಪ ಮುಳುಗಿ ಹೋದವು. ಪ್ರತಿಪಕ್ಷ ನಾಯಕರು ಬೆಳೆ ನಷ್ಟ, ಮಳೆಯಿಂದಾಗಿ ಆಸ್ತಿಪಾಸ್ತಿ ಹಾನಿ, ಪ್ರವಾಹ ಮತ್ತು ಸರ್ಕಾರದ ಪರಿಹಾರ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆ ಸರ್ಕಾರದ ಕಡೆಯಿಂದ ಇದಕ್ಕೆ ಸರಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ.

ಇಂದಿನಿಂದ ಇನ್ನುಳಿದ 5 ದಿನಗಳಲ್ಲಿ ಸರ್ಕಾರ ಮತಾಂತರ ನಿಷೇಧ ಕರಡು ಕಾಯ್ದೆ, ಲವ್ ಜಿಹಾದ್ ಮಸೂದೆಯನ್ನು ತರುವ ಉತ್ಸುಕತೆಯಲ್ಲಿದೆ. ಆದರೆ ವಿರೋಧ ಪಕ್ಷಗಳು ಎರಡೂ ಸದನಗಳಲ್ಲಿ ಇದಕ್ಕೆ ತಡೆಯೊಡ್ಡಲು ನೋಡುತ್ತಿದ್ದು ಇದರಿಂದ ಕಲಾಪ ಸರಿಯಾಗಿ ನಡೆಯದೆ ಮುಂದೂಡಿದರೂ ಅಚ್ಚರಿಯಿಲ್ಲ.

ಈ ಮಧ್ಯೆ, ರೈತ ಸಂಘಟನೆಗಳು ಸರ್ಕಾರದ ರೈತ ಕಾನೂನನ್ನು ವಿರೋಧಿಸಲು ಮುಂದಾಗಿವೆ. ಹೀಗಾದರೆ ಸರ್ಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚಿಸುವುದು ಸಂಶಯವೇ. ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕ, ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ವಿಷಯ ಬಿಟ್ಟು ಬೇರೆಲ್ಲಾ ವಿಷಯಗಳನ್ನು ಕಳೆದ ಒಂದು ವಾರ ಚರ್ಚೆ ನಡೆಸಲಾಯಿತು. ಇಂದಾದರೂ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ಸದನದಲ್ಲಿ ಆಗುತ್ತದೆಯೇ ನೋಡೋಣ, ಇಲ್ಲದಿದ್ದರೆ ನಾವು ಸದನದಲ್ಲಿ ಪ್ರಸ್ತಾಪಿಸಿ ಒತ್ತಾಯಿಸುತ್ತೇವೆ ಎಂದರು.

ಉತ್ತರ ಕರ್ನಾಟಕ ಭಾಗದ ಕೆಲವು ಪ್ರಮುಖ ಬೇಡಿಕೆಗಳು: ಗದಗ, ಧಾರವಾಡ ಮತ್ತು ಬೆಳಗಾವಿಗೆ ಕುಡಿಯುವ ನೀರು ಒದಗಿಸುವ ನಿರೀಕ್ಷೆಯಿರುವ ಮತ್ತು ಕಳೆದ ಎರಡು ದಶಕಗಳಿಂದ ಬಾಕಿ ಉಳಿದಿರುವ ಮಹದಾಯಿ ಯೋಜನೆಯ ಅನುಷ್ಠಾನ, ಲಕ್ಷಗಟ್ಟಲೆ ಹೆಕ್ಟೇರ್‌ ಭೂಮಿಗೆ ನೀರುಣಿಸುವ ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಅನುಷ್ಠಾನ, ಉಪವಿಭಾಗೀಯ ಕಚೇರಿಗಳನ್ನು ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರಿಸುವುದು, ಉತ್ತರ ಕರ್ನಾಟಕದ ಜನರು ತಮ್ಮ ಕೆಲಸವನ್ನು ತ್ವರಿತವಾಗಿ ಮಾಡಲು ಸಹಾಯ ಮಾಡುವುದು, ಬೆಳಗಾವಿಯಲ್ಲಿ ಐಟಿ-ಬಿಟಿ ಪಾರ್ಕ್ ಸ್ಥಾಪನೆ, ಈ ಪ್ರದೇಶದ ಸಾವಿರಾರು ನುರಿತ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು, ಅತಿವೃಷ್ಟಿ ಮತ್ತು ಅಕಾಲಿಕ ಮಳೆಯಿಂದ ಅಪಾರ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ, ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗಳು ಮತ್ತು ರೈತರಿಗೆ ಬಾಕಿ ಪಾವತಿ, ದಶಕದಿಂದ ಬಾಕಿ ಉಳಿದಿರುವ ಚಿಕ್ಕೋಡಿಗೆ ಜಿಲ್ಲಾ ಸ್ಥಾನಮಾನ, ಅಥಣಿಯಲ್ಲಿ ಖಿಳೇಗಾಂವ್ ಯೋಜನೆ, ರಾಮದುರ್ಗದಲ್ಲಿ ವೀರಭದ್ರೇಶ್ವರ ಯೋಜನೆ, ಕೆರೆ ಮರುಪೂರಣ ಯೋಜನೆಗಳು ಸೇರಿದಂತೆ ವಿವಿಧ ಲಿಫ್ಟ್ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು, ಬೆಳಗಾವಿ-ಕಿತ್ತೂರು ರೈಲು ಮಾರ್ಗಕ್ಕೆ ಭೂಸ್ವಾಧೀನ, ಬಳ್ಳಾರಿ ನಾಲಾ ನಿರ್ಮಾಣ, ಬೆಳಗಾವಿ ನಗರದ ಮೂಲಕ ಹಾದುಹೋಗುವ ಪ್ರಮುಖ ಒಳಚರಂಡಿ ಮಾರ್ಗ ಮತ್ತು ಒಳಚರಂಡಿ ಸಂಸ್ಕರಣಾ ಘಟಕವನ್ನು ಸ್ಥಾಪಿಸುವುದು ಈ ಭಾಗದ ಜನರ ಪ್ರಮುಖ ಬೇಡಿಕೆಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com