ಪುಂಡರ ವಿರುದ್ಧ ದೇಶದ್ರೋಹದ ಪ್ರಕರಣ: ಎಂಇಎಸ್ ಸಂಘಟನೆ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರ!
ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಭಗ್ನ ಹಾಗೂ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ನಡೆಸಿದ್ದ ಎಂಇಎಸ್ ಸಂಘಟನೆಯ ವಿರುದ್ಧ ಅಧಿವೇಶನದಲ್ಲಿ ಸರ್ವಾನುಮತದಿಂದ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ.
Published: 20th December 2021 06:37 PM | Last Updated: 20th December 2021 06:37 PM | A+A A-

ಸಿಎಂ ಬೊಮ್ಮಾಯಿ
ಬೆಳಗಾವಿ: ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಭಗ್ನ ಹಾಗೂ ಸರ್ಕಾರಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಪುಂಡಾಟ ನಡೆಸಿದ್ದ ಎಂಇಎಸ್ ಸಂಘಟನೆಯ ವಿರುದ್ಧ ಅಧಿವೇಶನದಲ್ಲಿ ಸರ್ವಾನುಮತದಿಂದ ಖಂಡನಾ ನಿರ್ಣಯ ಅಂಗೀಕರಿಸಲಾಗಿದೆ.
ಅಧಿವೇಶನದಲ್ಲಿ ಸಿಎಂ ಬೊಮ್ಮಾಯಿ ಅವರು ಖಂಡನಾ ನಿರ್ಣಯವನ್ನು ಮಂಡಿಸಿದ್ದು ಎಲ್ಲರೂ ಒಕ್ಕೊರಳಿನಿಂದ ಅಂಗೀಕರಿಸಿದ್ದಾರೆ. ನಂತರ ಮಾತನಾಡಿದ ಅವರು ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಶಿವಾಜಿ ಪ್ರತಿಮೆಗೆ ಅವಮಾನವನ್ನು ಸದನವು ಗಂಭೀರವಾಗಿ ಖಂಡಿಸುತ್ತದೆ. ಇಂಥ ಕೃತ್ಯಗಳನ್ನು ದೇಶದ್ರೋಹ ಎಂದು ಪರಿಗಣಿಸಿ ಗಂಭೀರ ಕ್ರಮ ತೆಗೆದುಕೊಳ್ಳಲಾಗುವುದು. ವಿವರಗಳನ್ನು ಕೇಂದ್ರ ಗೃಹ ಇಲಾಖೆಗೆ ಕಳಿಸಿಕೊಡಲಾಗುವುದು.
ಎರಡೂ ರಾಜ್ಯಗಳ ನಡುವೆ ಸಾಮರಸ್ಯ ಇರಬೇಕೆಂದು ಕರ್ನಾಟಕ ಸರ್ಕಾರ ಬಯಸುತ್ತಿದೆ. ಆದರೆ ಗಡಿಯಾಚೆಗೂ ಪುಂಡಾಟಿಕೆಗೆ ಪ್ರೋತ್ಸಾಹ ಸಿಗುತ್ತಿದೆ. ಅದನ್ನು ನಿಲ್ಲಿಸಬೇಕೆಂದು ಸದನ ನಿರ್ಣಯ ಮಾಡುತ್ತದೆ. ಇನ್ನು ಮುಂದೆ ಇಂಥ ಪ್ರಕರಣಗಳನ್ನು ದೇಶದ್ರೋಹ ಎಂದು ಪರಿಗಣಿಸಿ, ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ. ಸದನದ ಎಲ್ಲ ಪಕ್ಷಗಳೂ ಈ ವಿಚಾರದಲ್ಲಿ ಸರ್ಕಾರದ ಜೊತೆಗೆ ಇವೆ ಎಂದು ನಿರ್ಣಯ ಮಂಡಿಸಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಿಷೇಧದ ಬಗ್ಗೆ ಹಲವರು ಸಲಹೆ ಮಾಡಿದ್ದಾರೆ. ಈ ಬಗ್ಗೆ ಕಾನೂನಾತ್ಮಕವಾಗಿ ಚಿಂತನೆ ನಡೆಸುತ್ತೇವೆ. ನಿಷೇಧಿಸಲು ಆಗದಿದ್ದರೂ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತೇವೆ. ಗಡಿಭಾಗವನ್ನು ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತದೆ ಎಂದು ತಿಳಿಸಿದರು.
ಅಲ್ಲದೆ ಬೆಳಗಾವಿಯ ಸುವರ್ಣಸೌಧ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮನವರ ಪ್ರತಿಮೆ ಸ್ಥಾಪಿಸುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದರು.