ನೀವು ಭಿಕ್ಷೆ ಬೇಡಿ, ಸಾಲ ಕೇಳಿ ಅಥವಾ ಕದಿಯಿರಿ, ಆದ್ರೆ ಕೃಷ್ಣಾ ಮೇಲ್ದಂಡೆ ಕಾಮಗಾರಿ ಮಾತ್ರ ಪೂರ್ಣ ಮಾಡಿ: ಸರ್ಕಾರಕ್ಕೆ ಎಸ್ ಆರ್ ಪಾಟೀಲ್ ಆಗ್ರಹ

ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು 60 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬಜೆಟ್ ನ ಅಗತ್ಯವಿದ್ದು ರಾಜ್ಯಸರ್ಕಾರ ಜಿಡಿಪಿಯ ಶೇಕಡಾ 10ರಷ್ಟನ್ನು ಎರಡು ವರ್ಷಗಳ ಕಾಲ ಮೀಸಲಿಡಬೇಕೆಂದು ನಿನ್ನೆ ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಎಸ್ ಆರ್ ಪಾಟೀಲ್
ವಿಧಾನ ಪರಿಷತ್ತಿನಲ್ಲಿ ಮಾತನಾಡಿದ ಎಸ್ ಆರ್ ಪಾಟೀಲ್

ಬೆಳಗಾವಿ: ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು 60 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಬಜೆಟ್ ನ ಅಗತ್ಯವಿದ್ದು ರಾಜ್ಯಸರ್ಕಾರ ಜಿಡಿಪಿಯ ಶೇಕಡಾ 10ರಷ್ಟನ್ನು ಎರಡು ವರ್ಷಗಳ ಕಾಲ ಮೀಸಲಿಡಬೇಕೆಂದು ನಿನ್ನೆ ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕ ಎಸ್ ಆರ್ ಪಾಟೀಲ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ಸುಮಾರು 1.33 ಲಕ್ಷ ಎಕರೆ ಜಮೀನಿನ ಅವಶ್ಯಕತೆಯಿದ್ದು ಮುಳುಗಡೆಯಾಗಲಿರುವ 20 ಗ್ರಾಮಗಳ ಜನರನ್ನು ಬೇರೆ ಕಡೆಗೆ ವರ್ಗಾಯಿಸಿ ಅವರಿಗೆ ಜೀವನಕ್ಕೆ ವ್ಯವಸ್ಥೆ ಮಾಡಬೇಕು. ನೀವು ಭಿಕ್ಷೆಯಾದರೂ ಬೇಡಿ, ಸಾಲವಾದರೂ ತೆಗೆದುಕೊಳ್ಳಿ ಒಟ್ಟಿನಲ್ಲಿ ಯೋಜನೆ ಪೂರ್ಣವಾಗಬೇಕು ಅಷ್ಟೆ ಎಂದರು.

ಆಗ ಸದನದ ಸದಸ್ಯರು ಸರ್ಕಾರ ನದಿ, ರಸ್ತೆ, ಮೂಲಭೂತ ಸೌಕರ್ಯ, ಕೈಗಾರಿಕಾ ಯೋಜನೆಗಳನ್ನು ಆದ್ಯತೆಯಾಗಿ ಕೈಗೆತ್ತಿಕೊಂಡು ಉತ್ತರ ಕರ್ನಾಟಕದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿಕೊಡಬೇಕು. ಉತ್ತರ ಕರ್ನಾಟಕ ಭಾಗದ ಪ್ರದೇಶಗಳ ಅಭಿವೃದ್ಧಿಗೆ ಸಂಬಂಧಪಟ್ಟಂತೆ ನಿನ್ನೆ ಸದನದಲ್ಲಿ ಚರ್ಚೆ ನಡೆಸಲಾಗಿತ್ತು.

ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಂಡ ನಂತರ 130 ಟಿಎಂಸಿಯಷ್ಟು ನೀರನ್ನು ಆಲಮಟ್ಟಿ ಜಲಾಶಯದಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದು, ಇದರಿಂದ ಬಾಗಲಕೋಟೆ, ವಿಜಯಪುರ, ಗದಗ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳ 15 ಲಕ್ಷ ಎಕರೆ ಕೃಷಿ ಭೂಮಿಗೆ ನೀರುಣಿಸಲು ಸಹಾಯವಾಗುತ್ತದೆ. ಜಲಾಶಯದಲ್ಲಿ 173 ಟಿಎಂಸಿ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬಹುದು ಎಂದು ಎಸ್ ಆರ್ ಪಾಟೀಲ್ ವಿವರಿಸಿದರು.

ಭೂ ಸ್ವಾದೀನ ಪ್ರಕ್ರಿಯೆ ಮುಗಿದ ನಂತರ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನು 524.25 ಮೀಟರ್ ಗೆ ಹೆಚ್ಚಿಸಿದ ನಂತರ ಒಟ್ಟು ನೀರಿನ ಸಂಗ್ರಹ 304 ಟಿಎಂಸಿಗೆ ಹೆಚ್ಚಳವಾಗುತ್ತದೆ. ಇದರಿಂದ ಒಟ್ಟಾರೆಯಾಗಿ 30 ಲಕ್ಷ ಎಕರೆ ಕೃಷಿ ಭೂಮಿಗೆ ನೀರುಣಿಸಬಹುದು ಎಂದು ಹೇಳಿದರು.

ಮಹಾದಾಯಿ ಯೋಜನೆಯನ್ನು ಸರ್ಕಾರ ಶೀಘ್ರವೇ ಕೈಗೆತ್ತಿಕೊಳ್ಳಬೇಕೆಂದು ಸಹ ಎಸ್ ಆರ್ ಪಾಟೀಲ್ ಒತ್ತಾಯಿಸಿದರು. ಇದಕ್ಕೆ ಜೆಡಿಎಸ್ ನಾಯಕ ಕೆ ಟಿ ಶ್ರೀಕಾಂತೇ ಗೌಡ, 1978 ರಲ್ಲಿ ಎಸ್‌ಆರ್ ಬೊಮ್ಮಾಯಿ ಆಯೋಗವು ಯೋಜನೆಯನ್ನು ರೂಪಿಸಿತ್ತು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com