ಮತಾಂತರ ಆಗುವಂಥ ಸ್ಥಿತಿ ತಪ್ಪಿಸಬೇಕು: ವಿಪಕ್ಷ ನಾಯಕ ಸಿದ್ದರಾಮಯ್ಯ
ಹಿಂದೂ ಧರ್ಮದಲ್ಲಿರುವ ಜಾತಿ ತಾರತಮ್ಯ, ಅಸಮಾನತೆ ಇತ್ಯಾದಿ ಕಾರಣಗಳಿಂದ ಮತಾಂತರಗಳಾಗಿವೆ. ಆದ್ದರಿಂದ ಮತಾಂತರ ಆಗುವಂಥ ಸ್ಥಿತಿಯನ್ನು ತಪ್ಪಿಸಬೇಕೇ ವಿನಃ ಮತಾಂತರ ನಿಷೇಧ ಮಸೂದೆ ತರುವುದಲ್ಲ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
Published: 23rd December 2021 03:41 PM | Last Updated: 23rd December 2021 05:08 PM | A+A A-

ಸಿದ್ದರಾಮಯ್ಯ
ಬೆಳಗಾವಿ (ಸುವರ್ಣ ವಿಧಾನಸೌಧ): ಹಿಂದೂ ಧರ್ಮದಲ್ಲಿರುವ ಜಾತಿ ತಾರತಮ್ಯ, ಅಸಮಾನತೆ ಇತ್ಯಾದಿ ಕಾರಣಗಳಿಂದ ಮತಾಂತರಗಳಾಗಿವೆ. ಆದ್ದರಿಂದ ಮತಾಂತರ ಆಗುವಂಥ ಸ್ಥಿತಿಯನ್ನು ತಪ್ಪಿಸಬೇಕೇ ವಿನಃ ಮತಾಂತರ ನಿಷೇಧ ಮಸೂದೆ ತರುವುದಲ್ಲ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.
ಅವರಿಂದು ವಿಧಾನಸಭೆಯಲ್ಲಿ ಮತಾಂತರ ನಿಷೇಧ ಮಸೂದೆ ಮೇಲಿನ ಚರ್ಚೆಯಲ್ಲಿ ಪಾಳ್ಗೊಂಡು ಮಾತನಾಡಿದರು. ಮತಾಂತರಗಳಿಂದ ಹಿಂದೂ ಜನಸಂಖ್ಯೆ ಕಡಿಮೆ ಆಗಿದೆ ಎನ್ನುವುದು ಬಿಜೆಪಿ ಆರ್ ಎಸ್ ಎಸ್ ಹೇಳುತ್ತಿರುವ ಸುಳ್ಳು ಎಂದ ಅವರು ರಾಜ್ಯದಲ್ಲಿ ನಡೆದ ಜನಗಣತಿ ವಿವರಗಳನ್ನು ಸದನದಲ್ಲಿ ಹಂಚಿಕೊಂಡರು.
2001ರ ಜನಗಣತಿ ಪ್ರಕಾರ, ಹಿಂದೂಗಳು 83.86 ಇದ್ದರು 2011ರಲ್ಲಿ 84 ರಷ್ಟಾಗಿದ್ದಾರೆ. ಅದೇ ರೀತಿ ಇಸ್ಲಾಂ ಧರ್ಮದವರು 2001ರಲ್ಲಿ 12.23 ಇತ್ತು 2011ರಲ್ಲಿ 12.92 ಹೆಚ್ಚಳ ಕಂಡಿದೆ. ಕ್ರಿಶ್ಚಿಯನ್ 2001ರಲ್ಲಿ 1.91 2011ರಲ್ಲಿ 1.87 ಆಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಗೂಳಿಹಟ್ಟಿ ಶೇಖರ್ ಅವರು ತಮ್ಮ ತಾಯಿಯನ್ನು ಕ್ರಿಶ್ಚಿಯನ್ ಗೆ ಮತಾಂತರ ಮಾಡಿದ್ದರು ಎಂದು ಹೇಳಿದ್ದಾರೆ. ಈ ಬಗ್ಗೆ ಶಾಸಕರು ಠಾಣೆಯಲ್ಲಿ ದೂರು ಕೊಟ್ಟಿದ್ದಾರಾ? ಮತಾಂತರ ಮಾಡಿಸಿದವರನ್ನು ಅರೆಸ್ಟ್ ಮಾಡಿದ್ದಾರಾ? ಎಂದು ಪ್ರಶ್ನೆ ಮಾಡಿದರು.
ಈ ವೇಳೆ ಪಾಯಿಂಟ್ ಆಫ್ ಆರ್ಡರ್ ಎತ್ತಿದ ಶಾಸಕ ರಾಜೀವ್, ಪ್ರತಿ ಪಕ್ಷ ನಾಯಕರು ಮಾತನಾಡುವಾಗ, 2001ರಲ್ಲಿ 83.86ರ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆ ಇತ್ತು. 2011ಕ್ಕೆ 84 ಶೇಕಡಾ ಆಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನನ್ನ ಬಳಿಯಿರುವ ಅಧಿಕೃತ ಸರ್ಕಾರಿ ದಾಖಲೆಗಳ ಪ್ರಕಾರ, 2011ರಲ್ಲಿ ಹಿಂದೂಗಳ ಜನ ಸಂಖ್ಯೆ 79.80 ಆಗಿತ್ತು ಎಂದರು. ಜನಗಣತಿ ಬಗ್ಗೆ ಮಾಹಿತಿ ಬಗ್ಗೆ ರಾಜೀವ್ ಅಂಕಿಅಂಶ ಹೇಳಿದ ನಂತರ ಮತ್ತೆ ಮಾತನಾಡಿದ ಸಿದ್ದರಾಮಯ್ಯ ಅವರು ತಾನು ಇಂಟರ್ ನೆಟ್ ಹಾಗೂ ಗೂಗಲ್ ನಿಂದ ಮಾಹಿತಿ ಪಡೆದುಕೊಂಡಿರುವುದಾಗಿ, ತಾವು ಉಲ್ಲೇಖಿಸಿರುವುದು ಕರ್ನಾಟಕದ ಜನಸಂಖ್ಯೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಅರವಿಂದಲ್ ಲಿಂಬಾವಳಿ, ಬಸವಗೌಡ ಪಾಟೀಲ್ ಯತ್ನಾಳ್ ವಿವಿರೋಧ ಪಕ್ಷದ ನಾಯಕರು ಸದನಕ್ಕೆ ತಪ್ಪು ಮಾಹಿತಿ ಕೊಡಬಾರದು ಎಂದು ಕುಟುಕಿದರು.
ಇದನ್ನೂ ಓದಿ: 2016ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮತಾಂತರ ನಿಷೇಧ ಮಸೂದೆ ಸಿದ್ಧಪಡಿಸಲಾಗಿತ್ತು: ಕಾನೂನು ಸಚಿವ ಮಾಧುಸ್ವಾಮಿ
ಬಳಿಕ ಸಿದ್ದರಾಮಯ್ಯ ಕರ್ನಾಟಕದ ಜನಸಂಖ್ಯೆ ಬಗ್ಗೆ ಮಾತನಾಡಿದರು, 2001 ಹಿಂದೂ 4 ಕೋಟಿ 43 ಲಕ್ಷ 21 ಸಾವಿರ 279, 2011ರಲ್ಲಿ 5 ಕೋಟಿ 13 ಲಕ್ಷ 17 ಸಾವಿರ 472, 2001 ಇಸ್ಲಾಂ 64 ಲಕ್ಷ 63 ಸಾವಿರ 177, 2011ರಲ್ಲಿ 78 ಲಕ್ಷ 93 ಸಾವಿರ 65, 2001 ಕ್ರಿಶ್ಚಿಯನ್ 10 ಲಕ್ಷ 9 ಸಾವಿರ 164, 2011ರಲ್ಲಿ 11 ಲಕ್ಷ 42 ಸಾವಿರ 647 ಇದೆ ಎಂದು ಅಂಕಿಅಂಶ ವಿವರಿಸಿದರು.
ಮತಾಂತರ ಎಲ್ಲ ಕಡೆ ಆಗುತ್ತಿವೆ. ದೇಶದಲ್ಲಿ ಅಶಾಂತಿ ಉಂಟಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಈ ಮಸೂದೆಯನ್ನು ತಂದಿದ್ದವೆ ಎಂದು ರಾಜ್ಯ ಬಿಜೆಪಿ ಸರ್ಕಾರ ಹೇಳುತ್ತಿದೆ. ಬೆಂಗಳೂರಿನ ಆರ್ಚ್ ಬಿಷಪ್ ನವರು ಶಾಲಾ-ಕಾಲೇಜುಗಳನ್ನು ನಡೆಸುತ್ತಿದ್ದಾರೆ. ಅದರಲ್ಲಿ ಹಿಂದೂಗಳು ಓದುತ್ತಿದ್ದಾರೆ. ಅವರಿಗೆ ಬಲತ್ಕಾರವಾಗಿ ಮತಾಂತರ ಮಾಡಲು ಯತ್ನಿಸುತ್ತಿದ್ದಾರಾ? ಈ ವೇಳೆ ಕಂದಾಯ ಸಚಿವ ಅಶೋಕ್, ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲೆಗಳಿಗೆ ಹೋಗುವ ಮಕ್ಕಳನ್ನು ಮತಾಂತರ ಮಾಡಲಾಗಿದೆ. 8ರಿಂದ 12 ವರ್ಷದ ಮಕ್ಕಳನ್ನು ಮಿನಿ ಬಸ್ ನಲ್ಲಿ ಕರೆದುಕೊಂಡು ಹೋಗಿ ಮತಾಂತರ ಮಾಡಲಾಗಿದೆ. ಈ ಕುರಿತು ಅರೆಸ್ಟ್ ಆಗಿದೆ ಎಂದು ಹೇಳಿದರು.
ಈಗಾಗಲೇ ಐಪಿಸಿ ಸೆಕ್ಷನ್ 295 ಪ್ರಕಾರ ಕಾಯ್ದೆ ಇದೆ. ಅದರ ಪ್ರಕಾರ ಶಿಕ್ಷೆ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಸಿದ್ದರಾಮಯ್ಯ ತಿಳಿಸಿದರು. ಮಹಿಳೆಯರು, ಮಕ್ಕಳು, ಬುದ್ಧಿಹೀನರು, ಎಸ್ ಸಿ ಎಸ್ಟಿ ಅವರು ಮತಾಂತರ ಆದ್ರೆ ಅವರಿಗೆ ಶಿಕ್ಷೆ ಹೆಚ್ಚು ಅನ್ನೋದನ್ನು ಯಾವ ಕಾನೂನು ಹೇಳುತ್ತದೆ. ಮಹಿಳೆಯರು, ಮಕ್ಕಳು, ಬುದ್ಧಿಹೀನರು, ಎಸ್ ಸಿ ಎಸ್ಟಿ ಅವರನ್ನು ಮತಾಂತರ ಮಾಡಿಸಿದರೆ 10 ವರ್ಷ ಜೈಲು ಶಿಕ್ಷೆ ಎಂದು ಹೇಳಲಾಗಿದೆ. ಎಲ್ಲರೂ ಸಮಾನರು ಎಂದು ಸಂವಿಧಾನ ಹೇಳುತ್ತದೆ. ಹಾಗದ್ರೆ ನಿಮ್ಮ ಪ್ರಕಾರ ಎಸ್ ಸಿ ಎಸ್ ಟಿ, ಮಹಿಳೆಯರು, ಮಕ್ಕಳು ಬೇರೇ ಬೇರೇನಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡದವರಿಗೆ ಹೆಚ್ಚಿನ ರಕ್ಷಣೆ ಕೊಟ್ಟರೆ ತಪ್ಪಾ? ಮಹಿಳೆಯರು, ಮಕ್ಕಳು, ದಲಿತರ ಬಗ್ಗೆ ನಮಗೆ ಕಾಳಜಿ ಇದೆ. ಹಣಕಾಸು, ಶಿಕ್ಷಣದಿಂದ ಹಿಂದೆ ಉಳಿದಿದ್ದಾರೆ. ಇದರ ದುರ್ಲಾಭವನ್ನು ಪಡೆಯಲಾಗುತ್ತದೆ. ಈ ಕಾರಣಕ್ಕಾಗಿ ಅವರ ಮೇಲೆ ಹೆಚ್ಚಿನ ರಕ್ಷಣೆ ವಹಿಸುವುದು ನಮ್ಮ ಕರ್ತವ್ಯ. ಸಿದ್ದರಾಮಯ್ಯನವರು ಇಂಥವರಿಗೆ ಕಡಿಮೆ ಶಿಕ್ಷೆ ಮಾಡಿ ಅಂತಿರಿಲ್ಲಾ ಇದು ಹೇಗೆ? ನಿಮ್ಮ ನೀತಿ ಎಲ್ಲಿ ಹೋಯಿತು. ಅವರ ಪರಿಸ್ಥಿತಿಯನ್ನು ದುರ್ಲಾಭ ಮಾಡಿಕೊಂಡು ಮಾನಸಿಕ ಒತ್ತಡ ತಂದು ಮತಾಂತರ ಮಾಡಿದವರಿಗೆ ನಾವು ಹೆಚ್ಚಿನ ಶಿಕ್ಷೆ ಕೊಡುದು ತಪ್ಪಾ? ಸಿದ್ದರಾಮಯ್ಯನವರೇ ಇದಕ್ಕೆ ಸಂತೋಷ ಪಡಬೇಕಾಗಿತ್ತು ಎಂದರು.
1924ರಲ್ಲಿ ಅಂಬೇಡ್ಕರ್ ಅವರು ಕಾರ್ಯಕ್ರಮವೊಂದರಲ್ಲಿ ಮನಸ್ಮೃತಿಯನ್ನು ಸುಟ್ಟು ಹಾಕಿದ್ರಲ್ಲ ಏಕೆ ಅನ್ನೋದನ್ನು ಸದನಕ್ಕೆ ತಿಳಿಸಿಬಿಡಿ ಎಂದು ರಮೇಶ್ ಕುಮಾರ್ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಮನಸ್ಮೃತಿ ಕಾಲದಿಂದ ಆಂಬೇಡ್ಕರ್ ಕಾಲಕ್ಕೆ ನಾವು ಬಂದಿದ್ದೇವೆ. ಎಲ್ಲರಿಗೂ ಸಮಾನ ಅವಕಾಶ ಸಿಗುವಂತದ್ದು, ಜಾತಿ ರಹಿತ ಸಮಾಜ ನಿರ್ಮಾಣ ಮಾಡಬೇಕೆಂಬುದು ಎಲ್ಲರ ಉದ್ದೇಶ. ಆದರೆ ಈಡೇರಿಲ್ಲ. ನೀವು ಮನಸ್ಮೃತಿಯ ಮನಸ್ಥಿತಿಯಲ್ಲಿ ನೀವು ಯಾಕೆ ಇದ್ದೀರಿ. ಅದನ್ನು ಬಿಟ್ಟು ಹೊರಗೆ ಬನ್ನಿ ಎಂದು ರಮೇಶ್ ಕುಮಾರ್ ಗೆ ತಿವಿದರು.
ಈಗ ಸದ್ಯಕ್ಕೆ ಎಲ್ಲರೂ ಸಮಾನರಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅವರು ಅಭಿವೃದ್ಧಿಯಾಗಿಲ್ಲ ಅಂತಾ ಕಾರ್ಯಕ್ರಮಗಳನ್ನು ಹಾಕಿಕೊಂಡು ಮೇಲಸ್ತರಕ್ಕೆ ತರಲು ಪ್ರಯತ್ನ ಮಾಡಲಾಗುತ್ತದೆ. ಕೆಳಸ್ತರದಲ್ಲಿ ಇರುವವರು ದುರುಪಯೋಗ ಆಗಬಾರದು ಎಂಬುದು ನಮ್ಮ ಉದ್ದೇಶ. ಯಾರಾದರೂ ಮತಾಂತರ ಪ್ರಯತ್ನ ಮಾಡಿದ್ರೂ ಕೂಡ ಅವರಿಗೆ ಇಂತಹವೊಂದು ದೊಡ್ಡ ಶಿಕ್ಷೆ ಇದೆ ಎಂಬುದನ್ನು ಅರಿವು ಮೂಡಿಸುವ ಸಂಬಂಧ 3 ರಿಂದ 10 ವರ್ಷಕ್ಕೆ ಶಿಕ್ಷೆ ಏರಿಕೆ ಮಾಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು.