
ಬೆಳಗಾವಿ: ರಾಜ್ಯದಲ್ಲಿ ಶೀಘ್ರದಲ್ಲೇ ಅತ್ಯಂತ ರಚನಾತ್ಮಕವಾದ ಉದ್ಯೋಗ ನೀತಿಯನ್ನು ಜಾರಿಗೆ ತರಲಾಗುವುದು, ಈ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಳಗಾವಿಯ ಗೋಗಟೆ ಎಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿಂದು ನಡೆದ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ, ಇದುವರೆಗೂ ಉದ್ಯೋಗದಾತರಿಗೆ ಒಂದು ಸಾಮಾನ್ಯ ಸೂತ್ರದಡಿ ಪ್ರೋತ್ಸಾಹ ಮತ್ತು ಉತ್ತೇಜಕ ಭತ್ಯೆಗಳನ್ನು ಕೊಡಲಾಗುತಿತ್ತು. ಆದರೆ, ಇನ್ನು ಮುಂದೆ ಯಾವ ಸಂಸ್ಥೆ ಎಷ್ಟು ಉದ್ಯೋಗಗಳನ್ನು ಸೃಷ್ಟಿಸಿದೆ ಎನ್ನುವುದನ್ನು ಆಧರಿಸಿ ಪ್ರೋತ್ಸಾಹ ಕೊಡಲಾಗುತ್ತದೆ ಎಂದರು.
ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣ, ಕೌಶಲ್ಯ ಪೂರೈಕೆ ಮತ್ತು ಉದ್ಯೋಗ ಸೃಷ್ಟಿ ಈ ಮೂರು ಅಂಶಗಳು ಒಂದರ ಜೊತೆಯಲ್ಲಿ ಇನ್ನೊಂದಿರುವಂತೆ ವ್ಯವಸ್ಥೆ ರೂಪಿಸಲಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ, ಶಿಕ್ಷಣ ಕ್ರಮವನ್ನು ಉದ್ಯೋಗದಾತ ಸಂಸ್ಥೆಗಳೊಂದಿಗೆ ಸಕ್ರಿಯವಾಗಿ ಬೆಸೆಯಲಾಗಿದೆ. ಇನ್ನೊಂದೆಡೆಯಲ್ಲಿ ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಜಾಗತಿಕ ಮಟ್ಟದ ಶೈಕ್ಷಣಿಕ ವಾತಾವರಣದೊಂದಿಗೆ ಬೆಸೆಯಲಾಗುತ್ತಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗಳು ಹತ್ತಾರು ಒಡಂಬಡಿಕೆಗಳನ್ನು ಮಾಡಿಕೊಂಡಿವೆ ಎಂದು ವಿವರಿಸಿದರು.
ಐಟಿ, ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ,ಪ್ರತಿಯೊಬ್ಬ ವಿದ್ಯಾವಂತರಿಗೂ ಅವರಿಗೆ ಆಸಕ್ತಿ ಇರುವಂತಹ ಉದ್ಯೋಗ ದೊರಕುವಂತಾಗಬೇಕು ಎನ್ನುವುದು ಸರ್ಕಾರದ ಸಂಕಲ್ಪವಾಗಿದೆ. ಈ ಮಹತ್ವಾಕಾಂಕ್ಷೆಯಿಂದಲೇ ಸಕಲರಿಗೂ ಉದ್ಯೋಗ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಎಚ್. ಪಿ. ಓಲಾ, ಎಚ್. ಸಿ.ಎಲ್. ಸೇರಿದಂತೆ ಸುಮಾರು 67 ಕಂಪನಿಗಳು ನೇರವಾಗಿ ಮತ್ತು 14 ಕಂಪನಿಗಳು ವರ್ಚುಯಲ್ ಆಗಿ ಪಾಲ್ಗೊಂಡಿದ್ದವು. ಬೆಳಗಾವಿ, ಧಾರವಾಡ, ಗದಗ ವಿಜಯಪುರ, ಬಾಗಲಕೋಟೆ ಸೇರಿದಂತೆ ಸುಮಾರು 5 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಉತ್ಸಾಹದಿಂದ ಮೇಳದಲ್ಲಿ ಭಾಗವಹಿಸಿದರು.
Advertisement