ನೈತಿಕ ಪೊಲೀಸ್ ಗಿರಿ: ಬೆಳಗಾವಿ ಪೊಲೀಸ್ ಇನ್ಸ್ ಪೆಕ್ಟರ್ ಗೆ ಹೈಕೋರ್ಟ್ ದಂಡ! 

22 ವರ್ಷದ ತಾಯಿ ಹಾಗೂ ಮೂರು ವರ್ಷದ ಹೆಣ್ಣು ಮಗುವನ್ನು ಐದು ತಿಂಗಳ ಕಾಲ ವೇಶ್ಯಾವಾಟಿಕೆಗಾಗಿ ಮಾನವ ಕಳ್ಳ ಸಾಗಣೆ ಸಂತ್ರಸ್ತರ ಪುನರ್ವಸತಿ ಕೇಂದ್ರದಲ್ಲಿ ಅಕ್ರಮವಾಗಿ  ಇಟ್ಟು ನೈತಿಕ ಪೊಲೀಸ್ ಗಿರಿ ಪ್ರಯತ್ನಕ್ಕಾಗಿ ಮಾಳ್ ಮಾರುತಿ ಪೊಲೀಸ್ ಇನ್ಸ್ ಪೆಕ್ಟರ್  ಸುನೀಲ್ ಬಾಳಸಾಹೇಬ್ ಪಾಟೀಲ್ ಗೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ. 
ಹೈಕೋರ್ಟ್
ಹೈಕೋರ್ಟ್

ಬೆಳಗಾವಿ: 22 ವರ್ಷದ ತಾಯಿ ಹಾಗೂ ಮೂರು ವರ್ಷದ ಹೆಣ್ಣು ಮಗುವನ್ನು ಐದು ತಿಂಗಳ ಕಾಲ ವೇಶ್ಯಾವಾಟಿಕೆಗಾಗಿ ಮಾನವ ಕಳ್ಳ ಸಾಗಣೆ ಸಂತ್ರಸ್ತರ ಪುನರ್ವಸತಿ ಕೇಂದ್ರದಲ್ಲಿ ಅಕ್ರಮವಾಗಿ  ಇಟ್ಟು ನೈತಿಕ ಪೊಲೀಸ್ ಗಿರಿ ಪ್ರಯತ್ನಕ್ಕಾಗಿ ಮಾಳ್ ಮಾರುತಿ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್ ಬಾಳಸಾಹೇಬ್ ಪಾಟೀಲ್ ಗೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ. 

ಬಿಡುಗಡೆ ಮಾಡುವಂತೆ ಪದೇ ಪದೇ ಮನವಿ ಮಾಡಿದರೂ ಅಕ್ರಮವಾಗಿ ತಾಯಿ ಮತ್ತು ಮಗುವನ್ನು ಹಿಡಿದಿಟ್ಟುಕೊಂಡಿರುವ ಕ್ರಮವು ತಾಯಿ ಮತ್ತು ಮಗಳ ಮನಸ್ಸು ಮತ್ತು ದೇಹ ಎರಡನ್ನೂ ಬಂಧಿಸುವ ಸ್ಪಷ್ಟ ಪ್ರಕರಣವಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಮೂರ್ತಿ ಎನ್.ಎಸ್. ಎನ್‌ಎಸ್ ಸಂಜಯ್ ಗೌಡ, ಸಂತ್ರಸ್ತರ ಪುನರ್ವಸತಿ ಕೇಂದ್ರ ಕೂಡಾ 1 ಲಕ್ಷ ರೂ. ದಂಡ ಪಾವತಿಸುವಂತೆ ಸೂಚಿಸಿದ್ದಾರೆ. 

ದೂರುದಾರರ ಮಗಳ ಹೆಸರಿನಲ್ಲಿ ರೂ. 2 ಲಕ್ಷ ರೂಪಾಯಿಯನ್ನು ಸ್ಥಿರ ಠೇವಣಿಯಾಗಿ ಇಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿರುವ ನ್ಯಾಯಾಲಯ, ಮಗಳು ಪ್ರೌಢವಸ್ಥೆಗೆ ಬರುವವರೆಗೂ ತಾಯಿ ಮೊತ್ತದ ಮೇಲಿನ ಬಡ್ಡಿಯನ್ನು ಪಡೆಯಬಹುದು ಎಂದು ಹೇಳಿದೆ. 

ಅನ್ಯ ಉದ್ದೇಶಕ್ಕೆಂದೇ ಇರುವ ಪುನರ್ವಸತಿ ಕೇಂದ್ರದಲ್ಲಿ ಮಹಿಳೆ ಮತ್ತು ಮಗುವನ್ನು ಇರಿಸಿರುವ ಇನ್ಸ್ ಪೆಕ್ಟರ್ ಕ್ರಮ ಬಲವಂತದ ಬಂಧನವಲ್ಲದೇ ಬೇರೋನೂ ಇಲ್ಲ. ಅರ್ಜಿದಾರಳ ವಿರುದ್ಧ ಬಂಧಿಸುವಂತಹ ಯಾವುದೇ ಆರೋಪಗಳಿಲ್ಲದಿದ್ದರೂ ಆಕೆಗೆ ಜೈಲು ಶಿಕ್ಷೆ ವಿಧಿಸಿದಂತಾಗಿದೆ ಎಂದು ಆಘಾತ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ಸಂಜಯ್ ಗೌಡ, ಇನ್ಸ್‌ಪೆಕ್ಟರ್‌ನ ಈ ಕೃತ್ಯವು ನ್ಯಾಯಾಲಯವು ನೀಡಿದ ಜೈಲು ಶಿಕ್ಷೆಗಿಂತ ಕೆಟ್ಟದಾಗಿದೆ, ಏಕೆಂದರೆ ಇದು ಅರ್ಜಿದಾರರ ವಿರುದ್ಧ ಯಾವುದೇ ಆರೋಪವನ್ನು ಹೊರಿಸದೆ ಜೈಲು ಶಿಕ್ಷೆಯಾಗಿದೆ. ಇದು ಸಂಪೂರ್ಣ ಪುನವರ್ಸತಿ ವ್ಯವಸ್ಥೆಯ ದುರುಪಯೋಗವಾಗಿದೆ ಎಂದು ಕಿಡಿಕಾರಿದ್ದಾರೆ. 

ನೈತಿಕ ಪೊಲೀಸ್ ಗಿರಿ ಪ್ರಯತ್ನ: ಅರ್ಜಿದಾರ ಮಹಿಳೆ ನೆರೆ ಮನೆಯ ವ್ಯಕ್ತಿಯನ್ನು ಪ್ರೀತಿಸುತಿದ್ದು, ಇದೇ ಕಾರಣಕ್ಕೆ ಗಂಡನ ಮನೆ ತೊರೆಯಲು ನಿರ್ಧರಿಸಿದ್ದಾಳೆ ಎಂಬ ವಿಚಾರ ಕೌನ್ಸೆಲಿಂಗ್ ನಡೆಸುವ ವೇಳೆ ಇನ್ಸ್ ಪೆಕ್ಟರ್ ಗೆ ತಿಳಿದಿದೆ. ಈ ಕಾರಣದಿಂದ ಆಕೆಯನ್ನು ನೆರೆಮನೆಯ ವ್ಯಕ್ತಿಯಿಂದ ದೂರವಿರಿಸುವ ಉದ್ದೇಶದಿಂದ  ಒತ್ತಾಯಪೂರ್ವಕವಾಗಿ ಪುನವರ್ಸತಿ ಕೇಂದ್ರದಲ್ಲಿರಿಸಿದ್ದಾರೆ ಎಂದೆನಿಸುತ್ತದೆ. ಆದರೆ, ವೈವಾಹಿಕ ಸಂಬಂಧದಲ್ಲಿ ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸುವ ನೆಪದಲ್ಲಿ ನೈತಿಕ ಪೊಲೀಸ್ ಗಿರಿ ನಡೆಸುವ ಅಧಿಕಾರ ಪೊಲೀಸರಿಗಿಲ್ಲ ಎಂದು ಕೋರ್ಟ್ ಹೇಳಿದೆ.

ಸಂತ್ರಸ್ತ ಮಹಿಳೆಗೆ 2017ರಲ್ಲಿ ಮದುವೆಯಾಗಿತ್ತು.ದಂಪತಿಗೆ ಮೂರು ವರ್ಷದ ಹೆಣ್ಣು ಮಗು ಇದೆ. ಈ ಮಧ್ಯೆ ಗಂಡ- ಹೆಂಡತಿ ನಡುವೆ ಮನಸ್ತಾಪ ಮೂಡಿತ್ತು. ಇದರಿಂದ, ಮಹಿಳೆ ತನ್ನ ಮಗಳೊಂದಿಗೆ   2021ರ ಮೇ ತಿಂಗಳಿನಲ್ಲಿ ಗಂಡನ ಮನೆ ತೊರೆದು ಬಂದಿದ್ದಳು.  ನಂತರ ಆಕೆಯ ಪತಿ ಬೆಳಗಾವಿಯ ಮಾಳ ಮಾರುತಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಠಾಣೆಯ ಇನ್ಸ್ ಪೆಕ್ಟರ್ ಸುನೀಲ್ ಬಾಳಸಾಹೇಬ್ ಪಾಟೀಲ್, ದೂರುದಾರನ ಪತ್ನಿಯನ್ನು ಕರೆಸಿ ವಿಚಾರಣೆ ನಡೆಸಿದ್ದರು. ಆದರೆ, ಪತಿಯೊಂದಿಗೆ ತೆರಳಲು ಮಹಿಳೆ ನಿರಾಕರಿಸಿದ್ದಳು.

ಗಂಡನ ಮನೆಗೆ ಹೋಗಲು ಒಪ್ಪದ ಪತ್ನಿ ಮತ್ತು ಆಕೆಯ ಮೂರು ವರ್ಷದ ಹೆಣ್ಣು ಮಗುವನ್ನು ವೇಶ್ಯಾವಾಟಿಕೆಗಾಗಿ ಮಾನವ ಕಳ್ಳ ಸಾಗಣೆ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ಇನ್ಸ್ ಪೆಕ್ಟರ್ ಕಳುಹಿಸಿದ್ದರು. ನನ್ನ ಇಚ್ಚೆಗೆ ವಿರುದ್ಧವಾಗಿ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಆರೋಪಿಸಿ ಈ ಮಹಿಳೆ ಇನ್ಸ್ ಪೆಕ್ಟರ್ ಹಾಗೂ ಪುನವರ್ಸತಿ ಕೇಂದ್ರದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com