ಪದೇ ಪದೇ ಕೆಆರ್ ಎಸ್ ಬಿರುಕು ಬಿಟ್ಟಿದೆ ಎನ್ನುವುದು ಸರಿಯಲ್ಲ, ಜನರು ಭಯಭೀತರಾಗುತ್ತಾರೆ: ಆರ್.ಅಶೋಕ್ 

ಕೆಆರ್ ಎಸ್ ಡ್ಯಾಂ ಸುರಕ್ಷಿತವಾಗಿದೆ ಎಂದು ಸರ್ಕಾರ ಹೇಳಿದ ಮೇಲೂ ಪದೇ ಪದೇ ಬಿರುಕು ಬಿಟ್ಟಿದೆ ಎಂದು ಹೇಳುವುದು ಸರಿಯಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್
ಮೈಸೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್

ಮೈಸೂರು: ಕೆಆರ್ ಎಸ್ ಡ್ಯಾಂ ಸುರಕ್ಷಿತವಾಗಿದೆ ಎಂದು ಸರ್ಕಾರ ಹೇಳಿದ ಮೇಲೂ ಪದೇ ಪದೇ ಬಿರುಕು ಬಿಟ್ಟಿದೆ ಎಂದು ಹೇಳುವುದು ಸರಿಯಲ್ಲ ಎಂದು ಸಂಸದೆ ಸುಮಲತಾ ಅಂಬರೀಷ್ ಬಗ್ಗೆ ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟನೆ ನೀಡಿದ್ದಾರೆ.

ಅವರು ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಸರ್ಕಾರದ ಅಧಿಕಾರಿಗಳು, ಗಣಿ ಸಚಿವ ನಿರಾಣಿಯವರು, ನಾನು ಮತ್ತು ಜಿಲ್ಲಾಧಿಕಾರಿಗಳು ಕೂಡ ಕೆಆರ್ ಎಸ್ ಗೆ ಏನೂ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೀರಾವರಿ ಇಲಾಖೆಯ ಎಂಜಿನಿಯರ್ ಗಳು ಸಹ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದಾರೆ. ಇಷ್ಟೆಲ್ಲ ಹೇಳಿದ ಮೇಲೂ ಕೆಆರ್ ಎಸ್ ಡ್ಯಾಂನ ಬಿರುಕಿನ ಬಗ್ಗೆ ಮಾತನಾಡಿದರೆ ಅಣೆಕಟ್ಟು ತೀರದ ಕೆಳಭಾಗಗಳಲ್ಲಿ ವಾಸಿಸುವ ಜನರಿಗೆ ಆತಂಕವಾಗುತ್ತದೆ, ಎಲ್ಲಿ ತಮ್ಮ ಮನೆಗಳಿಗೆ, ಜಮೀನುಗಳಿಗೆ ತೊಂದರೆಯಾಗುತ್ತದೋ ಎಂಬ ಭಯವಿರುತ್ತದೆ ಎಂದರು.

ಸರ್ಕಾರ ಈ ವಿಷಯದಲ್ಲಿ ಈಗಾಗಲೇ ಸ್ಪಷ್ಟನೆ ನೀಡಿದ್ದು ಮೌನವಾಗಿ ಕುಳಿತಿಲ್ಲ, ಹಿಂದೆ ಅದರ ರಿಪೇರಿ ಕೆಲಸಗಳು ನಡೆದಿವೆ. ನೀರಾವರಿ ಇಲಾಖೆಯ ತಜ್ಞರು ವರದಿ ಕೊಟ್ಟಿದ್ದಾರೆ. ಯಾವುದೇ ಬಿರುಕು ಇಲ್ಲ, ಇದನ್ನು ರಾಜಕೀಯ ಗಾಳವನ್ನಾಗಿ ಬಳಸಿಕೊಂಡು ಜನರ ಮನಸ್ಸಿಗೆ ನೋವುಂಟುಮಾಡಬೇಡಿ ಎಂದು ಸುಮಲತಾ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಡ್ಯಾಂ ಬಗ್ಗೆ ಈಗಾಗಲೇ ತಜ್ಞರು ವರದಿ ಕೊಟ್ಟಿದ್ದಾರೆ. ಹಾಗಾಗಿ ಈ ವಿಷಯ ಇಲ್ಲಿಗೇ ಬಿಟ್ಟುಬಿಡಿ, ಇದು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾತನಾಡುತ್ತಿರುವಂತೆ ಕಾಣುತ್ತಿದೆ, ರಾಜಕೀಯಕ್ಕೆ ಬೇರೆ ಏನು ವಿಷಯ ಬೇಕಾದರೂ ಮಾತನಾಡಿಕೊಳ್ಳಲಿ, ಇದನ್ನು ಇಲ್ಲಿಗೇ ಬಿಟ್ಟುಬಿಡಲಿ.ಕೆಆರ್ ಎಸ್ ಡ್ಯಾಂ ಬಗ್ಗೆ ವರದಿ ನೀಡಬೇಕಾಗಿರುವುದು ಸರ್ಕಾರ, ಅದನ್ನು ನಮ್ಮ ಸರ್ಕಾರ, ಅಧಿಕಾರಿಗಳು ಮಾಡಿದ್ದಾರೆ. ಹಾಗಾಗಿ ಸುಮಲತಾ ಮತ್ತು ಕುಮಾರಸ್ವಾಮಿಯವರು ಡ್ಯಾಂ ಬಗ್ಗೆ ಮಾತನಾಡುವುದು ಬಿಟ್ಟು ಬೇರೆ ವಿಷಯಕ್ಕೆ ಹೊರಳಿ ಎಂದರು.

ತಾಂತ್ರಿಕ ಸಮಿತಿ: ಸರ್ಕಾರ ವರದಿ ನೀಡಿದರೂ ಇನ್ನೊಮ್ಮೆ ಪರಿಶೀಲನೆ ನಡೆಸಲು ತಾಂತ್ರಿಕ ತಜ್ಞರ ಸಮಿತಿ ರಚಿಸಲು ಮಾತುಕತೆ ನಡೆಸಲು ಇಂದು ಮಂಡ್ಯಕ್ಕೆ ಹೋಗುತ್ತೇನೆ, ನಾನು ಕೂಡ ಪರಿಶೀಲನೆ ನಡೆಸುತ್ತೇನೆ ಎಂದು ಸಹ ಸಚಿವ ಆರ್ ಅಶೋಕ್ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com