ರಾಜಕಾಲುವೆ ಒತ್ತುವರಿ ಆರೋಪ ಸಾಬೀತಾಗದಿದ್ರೆ ರೋಹಿಣಿ ಸಿಂಧೂರಿ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು: ಸಾ.ರಾ. ಮಹೇಶ್

ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ಕಟ್ಟಿಸಿದ್ದೇನೆ ಎಂಬ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಪವನ್ನು ಸಾಬೀತುಪಡಿಸಲಿ, ತನಿಖಾಧಿಕಾರಿಯನ್ನಾಗಿ ಸರ್ಕಾರ ಅವರನ್ನೇ ಬೇಕಾದರೆ ನೇಮಿಸಲಿ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.
ಸಾ ರಾ ಮಹೇಶ್(ಸಂಗ್ರಹ ಚಿತ್ರ)
ಸಾ ರಾ ಮಹೇಶ್(ಸಂಗ್ರಹ ಚಿತ್ರ)

ಮೈಸೂರು: ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ಕಟ್ಟಿಸಿದ್ದೇನೆ ಎಂಬ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಪವನ್ನು ಸಾಬೀತುಪಡಿಸಲಿ, ತನಿಖಾಧಿಕಾರಿಯನ್ನಾಗಿ ಸರ್ಕಾರ ಅವರನ್ನೇ ಬೇಕಾದರೆ ನೇಮಿಸಲಿ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.

ಇಂದು ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಧರಣಿ ನಡೆಸುತ್ತಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾನು ರೋಹಿಣಿ ಸಿಂಧೂರಿಯವರನ್ನು ಎಂದೂ ವರ್ಗಾವಣೆ ಮಾಡಿ ಎಂದು ಹೇಳಿಲ್ಲ, ವರ್ಗಾವಣೆ ಮಾಡಿ ಎಂದು ಹೇಳಿದ್ದೇನೆ ಎಂದರು.

ನಿನ್ನೆ ರೋಹಿಣಿ ಸಿಂಧೂರಿಯವರು ನನ್ನ ವಿರುದ್ಧ ಅಕ್ರಮ ಭೂ ಒತ್ತುವರಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಕಳೆದ 15 ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ನನ್ನ ಮತ್ತು ರೋಹಿಣಿ ಸಿಂಧೂರಿಯವರ ಬಗ್ಗೆ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ರಾಜಕಾಲುವೆ ಒತ್ತುವರಿ ಮಾಡಿ ಕಲ್ಯಾಣ ಮಂಟಪ ಕಟ್ಟಿಸಿದ್ದೇನೆ ಎಂದು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ, ನನ್ನ ಒಡೆತನದಲ್ಲಿರುವ ಕಲ್ಯಾಣ ಮಂಟಪದ ಜಾಗ ಬಗ್ಗೆ  ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸಿ ಸಾಬೀತುಪಡಿಸಲಿ ಎಂದು ಸರ್ಕಾರವನ್ನು, ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ ಎಂದರು.

ಆರೋಪ ಸಾಬೀತಾಗದಿದ್ರೆ ರೋಹಿಣಿ ಸಿಂಧೂರಿ ರಾಜೀನಾಮೆ ನೀಡಬೇಕು: ನಿಯಮ ಉಲ್ಲಂಘಿಸಿ ನಾನು ಕಲ್ಯಾಣ ಮಂಟಪ ಕಟ್ಟಿಸಿರುವುದು ಸಾಬೀತಾದರೆ ತಕ್ಷಣವೇ ಅದನ್ನು ರಾಜ್ಯಪಾಲರ ಹೆಸರಿಗೆ ನೋಂದಾವಣಿ ಮಾಡಿಸಿ ನನ್ನ ಸಾರ್ವಜನಿಕ ಜೀವನಕ್ಕೆ ವಿದಾಯ ಹೇಳುತ್ತೇನೆ, ಒಂದು ವೇಳೆ ಕಲ್ಯಾಣ ಮಂಟಪ ಕಟ್ಟಿಸಿದ್ದು ಅಕ್ರಮವಲ್ಲ ಎಂದು ನನ್ನ ಪರ ವರದಿ ಬಂದರೆ ರೋಹಿಣಿ ಸಿಂಧೂರಿಯವರು ತಕ್ಷಣವೇ ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಅವರ ಊರಾದ ಆಂಧ್ರಕ್ಕೇ ಹೋಗಿ ಮನೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಂಡು ಇರಬೇಕು ಎಂದು ಸಾ ರಾ ಮಹೇಶ್ ಸವಾಲು ಹಾಕಿದ್ದಾರೆ. 

ಪ್ರಾದೇಶಿಕ ಆಯುಕ್ತರಿಂದ ಭರವಸೆ: ಶಾಸಕ ಸಾ ರಾ ಮಹೇಶ್ ಅವರ ದೂರು ಸ್ವೀಕರಿಸಿದ ಮೈಸೂರಿನ ಪ್ರಾದೇಶಿಕ ಆಯುಕ್ತ ಜಿ.ಸಿ.ಪ್ರಕಾಶ್ ಐವರು ಸದಸ್ಯರನ್ನೊಳಗೊಂಡ ಸಮಿತಿಯಿಂದ ರಾಜಕಾಲುವೆ ಒತ್ತುವರಿ ಬಗ್ಗೆ ತನಿಖೆ ನಡೆಸಿ ಸೋಮವಾರ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಸಾ ರಾ ಮಹೇಶ್ ತಾತ್ಕಾಲಿಕವಾಗಿ ಧರಣಿ ಹಿಂಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com