ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ 450 ಕೋಟಿ ರೂ. ಮೊತ್ತದ ಬಾಕಿ!

ಕಳೆದ ಕಬ್ಬು ಅರೆಯುವ ಅವಧಿಯಲ್ಲಿ (ಜುಲೈ 2020 ರಿಂದ ಜೂನ್ 2021) ರಾಜ್ಯಾದ್ಯಂತ ಲಕ್ಷಾಂತರ ಕಬ್ಬು ಬೆಳೆಗಾರರು ತಾವು ಯಥೇಚ್ಚವಾಗಿ ಬೆಳೆದ ಕಬ್ಬನ್ನು ರಾಜ್ಯದಲ್ಲಿನ ಎಲ್ಲಾ 64 ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದ್ದರೂ, ರೂ.450 ಕೋಟಿ ಮೊತ್ತದ ಬಾಕಿಯನ್ನು ಕಾರ್ಖಾನೆಗಳು ಇನ್ನೂ ಪಾವತಿಸಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಕಳೆದ ಕಬ್ಬು ಅರೆಯುವ ಅವಧಿಯಲ್ಲಿ (ಜುಲೈ 2020 ರಿಂದ ಜೂನ್ 2021) ರಾಜ್ಯಾದ್ಯಂತ ಲಕ್ಷಾಂತರ ಕಬ್ಬು ಬೆಳೆಗಾರರು ತಾವು ಯಥೇಚ್ಚವಾಗಿ ಬೆಳೆದ ಕಬ್ಬನ್ನು ರಾಜ್ಯದಲ್ಲಿನ ಎಲ್ಲಾ 64 ಸಕ್ಕರೆ ಕಾರ್ಖಾನೆಗಳಿಗೆ ಪೂರೈಸಿದ್ದರೂ, ರೂ.450 ಕೋಟಿ ಮೊತ್ತದ ಬಾಕಿಯನ್ನು ಕಾರ್ಖಾನೆಗಳು ಇನ್ನೂ ಪಾವತಿಸಿಲ್ಲ. ಕಳೆದ ಒಂದು ವರ್ಷದಿಂದ ಸಾಂಕ್ರಾಮಿಕದ ಬಿಕ್ಕಟ್ಟು ಇದೆ ಎಂಬುದು ಗೊತ್ತಿದ್ದರೂ ಕಾರ್ಖಾನೆಗಳು ಮಾತ್ರ ಬಾಕಿ ಪಾವತಿಸುತ್ತಿಲ್ಲ.

ವಿಳಂಬವಾಗಿರುವ ಎಲ್ಲಾ ಬಾಕಿಯನ್ನು ಬಿಡುಗಡೆಗೆ ಸರ್ಕಾರ ನೆರವಾಗುವಂತೆ ಅನೇಕ ಕಬ್ಬು ಬೆಳೆಗಾರ ಮುಖಂಡರು ಒತ್ತಾಯಿಸಿದ್ದು, ಬಾಕಿ ಪಾವತಿಸದ ಕಾರ್ಖಾನೆಗಳು ಉತ್ಪಾದಿಸುವ ಎಲ್ಲಾ ಸಕ್ಕರೆಯನ್ನು ಸರ್ಕಾರ ವಶಪಡಿಸಿಕೊಂಡು ಕೂಡಲೇ ಅದನ್ನು ಹರಾಜು ಹಾಕಬೇಕೆಂದು ಅವರು ಹೇಳಿದ್ದಾರೆ. 

ಕಬ್ಬಿನ ನಿಯಂತ್ರಣ ಕಾಯ್ದೆ 1966ರ ಪ್ರಕಾರ, ಕಾರ್ಖಾನೆಗಳಲ್ಲಿ ಕಬ್ಬನ್ನು ಸ್ವೀಕರಿಸಿದ 14 ದಿನಗಳೊಳಗೆ ಬಾಕಿಯನ್ನುಕಾರ್ಖಾನೆಗಳು ಪಾವತಿಸಬೇಕು, ಒಂದು ವೇಳೆ ಪಾವತಿಯಲ್ಲಿ ವಿಳಂಬವಾದ್ದಲ್ಲಿ, ಒಟ್ಟಾರೇ ಬಿಲ್ ನಲ್ಲಿ ಶೇ.15 ರಷ್ಟು ಬಡ್ಡಿ ಸಮೇತ ಬಾಕಿಯನ್ನು ಕಾರ್ಖಾನೆಗಳು ಪಾವತಿಸಬೇಕಾಗುತ್ತದೆ ಎಂದು ಕಬ್ಬು ಬೆಳೆಗಾರ ಶಶಿಕಾಂತ್  ಜೋಶಿ ಹೇಳಿದರು. 

ಸರ್ಕಾರದ ದಾಖಲೆಗಳ ಪ್ರಕಾರ, ಈ ವರ್ಷದ ಮೇ ವರೆಗೂ ಕಬ್ಬು ಬೆಳೆಗಾರರಿಗೆ 450 ಕೋಟಿ ಬಾಕಿಯನ್ನು ಕಾರ್ಖಾನೆಗಳು ಪಾವತಿಸಬೇಕಾಗಿದೆ. ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಅಥಣಿ ಸಕ್ಕರೆ ಕಾರ್ಖಾನೆ ( ರೂ. 40 ಕೋಟಿ) ಸತೀಶ್ ಶುಗರ್ಸ್ (31ಕೋಟಿ) ಬೆಳಗಾವಿ ಶುಗರ್ಸ್ (19 ಕೋಟಿ) ಮಲ್ಲಪ್ರಭಾ ಸಕ್ಕರೆ ಕಾರ್ಖಾನೆ (ರೂ.24 ಕೋಟಿ) ಬೀಳಗಿ ಸಕ್ಕರೆ ಮಿಲ್ ( ರೂ.24 ಕೋಟಿ) ಗೋದಾವರಿ ಶುಗರ್ಸ್ ಲಿಮಿಟೆಡ್ (19 ಕೋಟಿ) ನಿರಾಣಿ ಶುಗರ್ಸ್ ಲಿಮಿಟೆಡ್ (28 ಕೋಟಿ) ಪ್ರಭುಲಿಂಗೇಶ್ವರ ಶುಗರ್ಸ್ (ರೂ.22 ಕೋಟಿ) ಶ್ರೀ ಸಾಯಿ ಪ್ರಿಯಾ ಶುಗರ್ಸ್ ಲಿಮಿಟೆಡ್ ( ರೂ.48 ಕೋಟಿ) ಭಲ್ಕೇಶ್ವರ ಶುಗರ್ಸ್ ಲಿಮಿಟೆಡ್ (ರೂ.17 ಕೋಟಿ) ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ ಲಿಮಿಟೆಡ್ (18 ಕೋಟಿ) ಶ್ರೀ ಬಸವೇಶ್ವರ ಶುಗರ್ಸ್ ಲಿಮಿಟೆಡ್ (43 ಕೋಟಿ) ಶ್ರೀ ಭೀಮಾಶಂಕರ್ ಸಹಕಾರಿ ಸಕ್ಕರೆ ಕಾರ್ಖಾನೆ ನಿಯಮಿತ (ರೂ.20 ಕೋಟಿ) ಕೊರ್ ಗ್ರೀನ್ ಶುಗರ್ ಅಂಡ್ ಪ್ಯೂಯಲ್ಸ್ ( ರೂ.33 ಕೋಟಿ) ಬಾಕಿ ಪಾವತಿಸಬೇಕಾಗಿದೆ.

ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಉತ್ಪಾದಿಸುವ ಬೆಳಗಾವಿ ಜಿಲ್ಲೆಯಲ್ಲಿ 25 ಸಕ್ಕರೆ ಕಾರ್ಖಾನೆಗಳಿದ್ದು, ಅವುಗಳಿಂದ ಒಟ್ಟಾರೇ, 149 ಕೋಟಿ ರೂ. ಬಾಕಿ ಪಾವತಿಸಬೇಕಾಗಿದೆ. ಮೂಲಗಳ ಪ್ರಕಾರ, ಕಳೆದ ಋತುವಿನಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿ  ಒಟ್ಟು 4 ಕೋಟಿ ಟನ್‌ ಕಬ್ಬನ್ನು ಅರೆಯಲಾಗಿದೆ. ಈ ಪೈಕಿ ಬೆಳಗಾವಿಯ  25 ಸಕ್ಕರೆ ಕಾರ್ಖಾನೆಗಳಿಂದ 1.80 ಕೋಟಿ ಮೆಟ್ರಿಕ್ ಟನ್ ಕಬ್ಬನ್ನು ಅರೆಯಲಾಗಿದೆ.

ಇತ್ತೀಚಿಗೆ ಸಕ್ಕರೆ ಆಯುಕ್ತರ ಕಚೇರಿಯನ್ನು ಬೆಳಗಾವಿಯಿಂದ ಬೆಂಗಳೂರಿಗೆ ಸ್ಥಳಾಂತರ ಮಾಡಿರುವುದರ ಬಗ್ಗೆ ಶಿವನಗೌಡ ಪಾಟೀಲ್ ಸೇರಿದಂತೆ ಹಲವು ಬೆಳೆಗಾರರು ಆಕ್ಷೇಪಿಸಿದ್ದಾರೆ. ಉತ್ತರ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಉತ್ಪಾದಿಸುತ್ತಿದ್ದು, ಉತ್ತರ ಕರ್ನಾಟಕದಿಂದಲೇ ಕಚೇರಿ ಕಾರ್ಯನಿರ್ವಹಿಸಬೇಕು, ಬೆಂಗಳೂರಿನಿಂದ ಕಾರ್ಯನಿರ್ವಹಿಸಬಾರದು ಎಂದು ಅವರು ಹೇಳಿದ್ದಾರೆ.  

ಈ ಕುರಿತಂತೆ ಮಾತನಾಡಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಾಕಿ ಪಾವತಿಸುವಂತೆ ಎಲ್ಲಾ ಕಾರ್ಖಾನೆಗಳಿಗೆ ನಿರ್ದೇಶನ ನೀಡಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com