ಮೈಸೂರಿನಲ್ಲಿ ಸಾ.ರಾ.ಮಹೇಶ್ ಒಡೆತನದ ಕಲ್ಯಾಣ ಮಂಟಪ ಸರ್ವೆ ಕಾರ್ಯ: ಸರ್ಕಾರಕ್ಕೆ ಇಂದು ತಂಡ ವರದಿ ಸಲ್ಲಿಕೆ

ರಾಜಕಾಲುವೆ ಮೇಲೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಕಲ್ಯಾಣ ಮಂಟಪ ನಿರ್ಮಾಣ ವಿವಾದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸರ್ವೆ ಕಾರ್ಯ ನಡೆಸಿದ್ದು ಸೋಮವಾರ ವರದಿ ಸಲ್ಲಿಸಲಿದೆ.
ಸಾ ರಾ ಮಹೇಶ್
ಸಾ ರಾ ಮಹೇಶ್

ಮೈಸೂರು: ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮತ್ತು ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಧ್ಯೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ನಿರ್ಮಾಣ ವಿವಾದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸರ್ವೆ ಕಾರ್ಯ ನಡೆಸಿದ್ದು ಸೋಮವಾರ ವರದಿ ಸಲ್ಲಿಸಲಿದೆ.

ಶಾಸಕ ಸಾ ರಾ ಮಹೇಶ್ ಒಡೆತನದ ಸಾರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಆರೋಪವನ್ನು ಸಾಬೀತುಪಡಿಸಿ ಎಂದು ಸಾ ರಾ ಮಹೇಶ್ ರೋಹಿಣಿ ಸಿಂಧೂರಿಗೆ ಸವಾಲು ಹಾಕಿದ್ದರು.

ಪ್ರಾದೇಶಿಕ ಆಯುಕ್ತರಿಗೆ ದೂರು ಸಹ ನೀಡಿದ್ದರು. ಆ ಬಳಿಕ ಪ್ರಾದೇಶಿಕ ಆಯುಕ್ತರು ತನಿಖಾ ತಂಡ ರಚಿಸಿ ಕಂದಾಯ ಇಲಾಖೆಯ ಸಹಾಯಕ ಆಯುಕ್ತ ವೆಂಕಟರಾಜು ಮತ್ತು ತಹಶಿಲ್ದಾರ್ ರಕ್ಷಿತ್ ನೇತೃತ್ವದ ತಂಡ ನಿನ್ನೆ ಸರ್ವೆ ಕಾರ್ಯ ನಡೆಸಿತು, ಕಲ್ಯಾಣ ಮಂಟಪದ ಸುತ್ತಮುತ್ತ ಅಳತೆ ಮಾಡಲಾಯಿತು. ಸರ್ವೆ ಕಾರ್ಯ ನಿನ್ನೆ ಪೂರ್ಣಗೊಂಡು ಇಂದು ತಂಡ ವರದಿ ಸಲ್ಲಿಸಲಿದೆ.

ಆದರೆ ಈ ತಂಡ ಸರ್ವೆ ಮಾಡಿ ವರದಿ ಸಲ್ಲಿಸುವ ಬಗ್ಗೆ ಬಿಜೆಪಿ ಹಿರಿಯ ಮುಖಂಡ ವಿಶ್ವನಾಥ್ ಈಗಾಗಲೇ ಸಂದೇಹ ವ್ಯಕ್ತಪಡಿಸಿದ್ದಾರೆ, ತಂಡ ಸರಿಯಾಗಿ ಅಳತೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಿಕ್ಕಿಲ್ಲ, ಅದು ಸಾ ರಾ ಮಹೇಶ್ ಅವರ ಪರವಾಗಿಯೇ ವರದಿ ಸಲ್ಲಿಸಬಹುದು ಎಂಬ ಸಂಶಯವಿದೆ, ರೋಹಿಣಿ ಸಿಂಧೂರಿಯವರು ಆರೋಪ ಮಾಡಿರುವುದು ಸತ್ಯವಾಗಿದೆ, ಅವರಿಂದಲೇ ಮೈಸೂರು ಸುತ್ತಮುತ್ತಲಿನ ಅಕ್ರಮ ಭೂಗಳ್ಳತನ ಬಗ್ಗೆ ತನಿಖೆ ಮಾಡಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com