ರಂಗೇನಹಳ್ಳಿ ಕುಡಿಯುವ ನೀರಿನ ಯೋಜನೆ, ಹಾಲಿನ ಘಟಕಗಳ ನಿರ್ಮಾಣ, ನೇರನೇಮಕಾತಿ ಗೊಂದಲ ನಿವಾರಣೆಗೆ ಸಂಪುಟ ಒಪ್ಪಿಗೆ

ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಹತ್ತಿರ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಕುಡಿಯುವ ನೀರಿಗಾಗಿ 11 ಕೆರೆಗಳನ್ನು ತುಂಬಿಸುವ ಕಾಮಗಾರಿಯ ರಂಗೇನಹಳ್ಳಿ ಕುಡಿಯುವ ನೀರಿನ ಯೋಜನೆ...
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮದ ಹತ್ತಿರ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಕುಡಿಯುವ ನೀರಿಗಾಗಿ 11 ಕೆರೆಗಳನ್ನು ತುಂಬಿಸುವ ಕಾಮಗಾರಿಯ ರಂಗೇನಹಳ್ಳಿ ಕುಡಿಯುವ ನೀರಿನ ಯೋಜನೆ ಹಂತ-2 ರೂ.22.50 ಕೋಟಿ ಮೊತ್ತದ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಸೋಮವಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಗ್ಗೆ ಕಾನೂನು ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಭಾಗಶಃ ಪ್ರದೇಶವು ಮಳೆಯಾಶ್ರಿತ ಪ್ರದೇಶವಾಗಿದ್ದು, ಯಾವುದೇ ನೀರಾವರಿ ಸೌಲಭ್ಯವಿಲ್ಲದೇ ಬರಡು ಪ್ರದೇಶವಾಗಿರುತ್ತದೆ. ಈ ಹೋಬಳಿಯ ಹಲವು ಗ್ರಾಮಗಳಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸಲು ಮಳೆಯ ನೀರಿಗೆ ಅವಲಂಬಿತರಾಗಿದ್ದಾರೆ. ಅಕ್ಕಿಹೆಬ್ಬಾಳು ಹೋಬಳಿಯ ಸುಮಾರು 11 ಕೆರೆಗಳು ಸಕಾಲದಲ್ಲಿ ಮಳೆಯಾದರೆ ಮಾತ್ರ ತುಂಬುತ್ತವೆ. ಈ ನಿಟ್ಟಿನಲ್ಲಿ ಸದರಿ ಕೆರೆಗಳು ತುಂಬಿ ಬಹಳ ವರ್ಷಗಳೇ ಕಳೆದಿವೆ. ಈ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟವು ಸುಮಾರು 600 ರಿಂದ 700 ಅಡಿಗಳವರೆಗೆ ಕುಸಿದಿರುತ್ತದೆ. ಈ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲ್ಲೂಕಿನ 11 ಕೆರೆಗಳಿಗೆ ನೀರು ತುಂಬಿಸುವುದರಿಂದ ಈ ಕೆರೆಗಳ ಸುತ್ತಮುತ್ತಲಿನ ಗ್ರಾಮದ ಜನರಿಗೆ ಹಾಗೂ ದನಕರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವುದು ಹಾಗೂ ಈ ಭಾಗದ ಅಂತರ್ಜಲ ಮಟ್ಟ ಏರಿಕೆಯಾಗುವುದರಿಂದ 22.50 ಕೋಟಿ ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ-ಆಲೂರು ಪಿಟ್ಲಳ್ಳಿ ಗ್ರಾಮಗಳ ಮಧ್ಯೆ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವ ಕಾಮಗಾರಿಯ ರೂ.15.66 ಕೋಟಿ ಮೊತ್ತದ ವಿವರವಾದ ಯೋಜನಾ ವರದಿಗೆ ರಾಜ್ಯ ಸಚಿವರ ಸಂಪುಟ ಇಂದು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಆಲೂರು-ಪಿಟ್ಲಳ್ಳಿ ಗ್ರಾಮಗಳ ಮಧ್ಯೆ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವ ರೂ.15.66 ಕೋಟಿ ಕಾಮಗಾರಿಯನ್ನು ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಆಲೂರು ಪಿಟ್ಲಳ್ಳಿ ಗ್ರಾಮಗಳ ಮಧ್ಯೆ ಬ್ರಿಡ್ಜ್ ಕಂ ಬ್ಯಾರೇಜ್ ನ ನಿರ್ಮಾಣದಿಂದಾಗಿ ಸದರಿ ಪ್ರದೇಶದ ಅಂತರ್ಜಲ ಮರು ಪೂರ್ಣಗೊಳಿಸಲು, ಬ್ಯಾರೇಜ್ನ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಮತ್ತು ಆಲೂರು, ಪಿಟ್ಲಳ್ಳಿ ನಂದಿಹಳ್ಳಿ ಆದಿವಾಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ಸಹಾಯಕವಾಗುತ್ತದೆ ಎಂಬ ಉದ್ದೇಶದಿಂದ ಈ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯಲ್ಲಿ ಹಾಲು ಒಕ್ಕೂಟ ಸೇರಿದಂತೆ ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಹಾಲಿನ ಘಟಕಗಳ ನಿರ್ಮಾಣಕ್ಕೆ ಇಂದಿನ ಸಚಿವ ಸಂಪುಟ ಒಪ್ಪಿಗೆ ನೀಡಿ, ನೇರ ನೇಮಕಾತಿ ಗೊಂದಲಕ್ಕೆ ತೆರೆ ಎಳೆದು, ಹುದ್ದೆಗಳ ಆಧಾರದ ಮೇಲೆ ನೇರ ನೇಮಕಾತಿ ಮಾಡಲು ಸಂಪುಟ ಅಸ್ತು ಎಂದಿದೆ.

50 ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಟೆಂಡರ್ ಕರೆಯಲು ಪಾರದರ್ಶಕ ವ್ಯವಸ್ಥೆ, ಯಾವುದೇ ಇಲಾಖೆ ಟೆಂಡರ್ ಪಡೆಯಲು ಏಕಗವಾಕ್ಷಿ ಪದ್ದತಿ. ಟೆಂಡರ್ ಬಗ್ಗೆ ಗಮನ ಹರಿಸಲು ಅದಕ್ಕೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ, ದಕ್ಷಿಣ ಕನ್ನಡದಲ್ಲಿ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಮಾಡಲು 500 ಕೋಟಿ ರೂ. ಆಡಳಿತಾತ್ಮಕ ಅನುಮೋದನೆಗೆ ಸಂಪುಟದಲ್ಲಿ ತೀರ್ಮಾನ, ಸಿರಗುಪ್ಪದಲ್ಲಿ ವೇದಾವತಿಗೆ ಸೇತುವೆ ನಿರ್ಮಾಣಕ್ಕೆ 30 ಕೋಟಿ ರೂಪಾಯಿಗಳ ಬಿಡುಗಡೆಗೆ ಸಂಪುಟದ ಒಪ್ಪಿಗೆ, ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ 825 ಕೋಟಿ ರೂ. ಹಣ ಬಿಡುಗಡೆ, ಅಗರ ಗ್ರಾಮದಲ್ಲಿ ಸ್ವಾನಂದಾಶ್ರಮಕ್ಕೆ ಭೂಮಿ ಮಂಜೂರು, ಬೆಂಗಳೂರಿನಲ್ಲಿ ಬಹುಮಹಡಿ ವಸತಿ ಯೋಜನೆಗೆ ರಾಜೀವ್ ವಸತಿ ನಿಗಮಕ್ಕೆ 69 ಎಕರೆ ಭೂಮಿ ಮಂಜೂರು ಮಾಡಲು ಒಪ್ಪಿಗೆ, ಈ ವರ್ಷ ಒಟ್ಟು 80 ಲಕ್ಷ ಮನೆ ಕಟ್ಟುವ ಗುರಿ ರೂಪಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಇದರೊಂದಿಗೆ ಸಿರಗುಪ್ಪದಲ್ಲಿ ವೇದಾವತಿಗೆ ಸೇತುವೆ ನಿರ್ಮಾಣಕ್ಕೆ 30 ಕೋಟಿ ರೂಪಾಯಿಗಳ ಬಿಡುಗಡೆಗೆ ಸಂಪುಟದ ಒಪ್ಪಿಗೆ,ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರಕ್ಕೆ 825 ಕೋಟಿ ರೂ. ಹಣ ಬಿಡುಗಡೆ, ಅಗರ ಗ್ರಾಮದಲ್ಲಿ ಸ್ವಾನಂದಾಶ್ರಮಕ್ಕೆ ಭೂಮಿ ಮಂಜೂರಾತಿಗೆ ಒಪ್ಪಿಗೆ ನೀಡಿದೆ.

ಪ್ರಮುಖವಾಗಿ ನೂತನ ಮರಳು ನೀತಿ ಜಾರಿಗೆ ಸಮ್ಮತಿ ನೀಡಿರುವ ಸಚಿವ ಸಂಪುಟ ಸಭೆ ನೂತನ ನೀತಿಯಡಿ ಗ್ರಾಮ ಪಂಚಾಯಿತಿಗೆ ಅಧಿಕಾರ ನೀಡಿದೆ.

ಒಂದು ಮೆಟ್ರಿಕ್ ಟನ್ ಮರಳಿಗೆ 300 ರೂ. ನಂತೆ ಮಾರಾಟ ಮಾಡಲು ಸಂಪುಟದ ಒಪ್ಪಿಗೆ. ನದಿ ಮರಳಿಗೆ 700 ರೂ ನಿಗದಿ ಮಾಡಿದ್ದು, ಮರಳು ಮಾರಾಟದ ಶೇಕಡಾ 25ರಷ್ಟು ಹಣವನ್ನು ಆಯಾ ಗ್ರಾ.ಪಂ.ಗಳಿಗೆ ಕೊಡಲು ತೀರ್ಮಾನಿಸಲಾಗಿದೆ ಎಂದು ಮಾಧುಸ್ವಾಮಿ ವಿವರಿಸಿದರು.

ಇನ್ನು ಬಿಟ್ ಕಾಯಿನ್ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಮಾಧುಸ್ವಾಮಿ, ಬಿಟ್ ಕಾಯಿನ್ ಕಳ್ಳತನ ಬಗ್ಗೆ ಇ.ಡಿ ತನಿಖೆಗೆ ವಹಿಸಿರುವ ಬಗ್ಗೆ ತಮಗೆ ಮಾಹಿತಿಯಿಲ್ಲ . ಕಾನೂನು ಸಚಿವರಾಗಿದ್ದ ಸಿಎಂ ಬೊಮ್ಮಾಯಿ ಅವರೇ ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾರೆ ಎಂದರು.

ಮೇಕೆದಾಟು ಯೋಜನೆ ಜಾರಿ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸುವುದಾಗಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮಾಧುಸ್ವಾಮಿ ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com