ಗದಗ: ಮೃತ ಗರ್ಭಿಣಿ ಗರ್ಭದಿಂದ ಜೀವಂತ ಮಗು ಹೊರತೆಗೆದ ಸರ್ಕಾರಿ ವೈದ್ಯರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ಗದಗಿನ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ(ದಂಡಪ್ಪ ಮಾನ್ವಿ ಸರ್ಕಾರಿ ಆಸ್ಪತ್ರೆ)ಯ ವೈದ್ಯರು ಮೃತಪಟ್ಟಿದ್ದ ಗರ್ಭಿಣಿಗೆ ವಿಶೇಷ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಜೀವಂತವಾಗಿ ಮಗುವನ್ನು ಹೊರತೆಗೆದಿದ್ದು,...
ಮಗುವಿನ ಜೀವ ಉಳಿಸಿದ ವೈದ್ಯರು
ಮಗುವಿನ ಜೀವ ಉಳಿಸಿದ ವೈದ್ಯರು

ಗದಗ: ಗದಗಿನ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ(ದಂಡಪ್ಪ ಮಾನ್ವಿ ಸರ್ಕಾರಿ ಆಸ್ಪತ್ರೆ)ಯ ವೈದ್ಯರು ಮೃತಪಟ್ಟಿದ್ದ ಗರ್ಭಿಣಿಗೆ ವಿಶೇಷ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಜೀವಂತವಾಗಿ ಮಗುವನ್ನು ಹೊರತೆಗೆದಿದ್ದು, ಸರ್ಕಾರಿ ವೈದ್ಯರ  ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ನವೆಂಬರ್ ಮೊದಲ ವಾರದಲ್ಲಿ ಗಜೇಂದ್ರಗಡ ತಾಲೂಕಿನ ಮುಶಿಗೆರೆ ಗ್ರಾಮದ ಗರ್ಭಿಣಿ ಅನ್ನಪೂರ್ಣ ಅಬ್ಬಿಗೇರಿ ಅವರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆತಂದಾಗ ಅವರು ಮೃತಪಟ್ಟಿದ್ದರು. ಒಂಬತ್ತು ತಿಂಗಳು ಪೂರ್ಣಗೊಂಡಿದ್ದರೂ ಅವರಿಗೆ ಯಾವುದೇ ಹೆರಿಗೆ ನೋವು ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಕುಟುಂಬ ಅವರನ್ನು ಆಸ್ಪತ್ರೆಗೆ ಸೇರಿಸಲು ನಿರ್ಧರಿಸಿತು. ಆದರೆ ಅದೇ ದಿನ ಕಡಿಮೆ ಬಿಪಿ ಮತ್ತು ಇತರ ಸಮಸ್ಯೆಗಳಿಂದ ಮಹಿಳೆ ಸಾವನ್ನಪ್ಪಿದ್ದರು. 

ಸರ್ಕಾರಿ ಆಸ್ಪತ್ರೆಯ ವೈದ್ಯರು ಗರ್ಭಿಣಿಯ ಆರೋಗ್ಯವನ್ನು ಪರಿಶೀಲನೆ ಮಾಡಿದಾಗ ಉಸಿರಾಟ ನಿಂತುಹೋಗಿತ್ತು. ಆದರೆ ಸ್ಕ್ಯಾನಿಂಗ್ ಮಾಡಿ ನೋಡಿದಾಗ ಮಗುವಿನ ಹೃದಯಬಡಿತ ಇನ್ನೂ ಬಡಿದುಕೊಳ್ಳುತ್ತಿತ್ತಂತೆ. ಹೀಗಾಗಿ ತಕ್ಷಣ ಎಚ್ಚೆತ್ತುಕೊಂಡ ವೈದ್ಯರು ಮಗುವನ್ನಾದರೂ ಬದುಕಿಸಬಹುದು ಎಂದು 10 ನಿಮಿಷದೊಳಗೆ ಕುಟುಂಬಸ್ಥರೊಂದಿಗೆ ಚರ್ಚಿಸಿ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದಾರೆ. ಕೆಲವೇ ನಿಮಿಷದಲ್ಲಿ ವೈದ್ಯರು ಮೃತ ಗರ್ಭಿಣಿಯ ಗರ್ಭದಲ್ಲಿದ್ದ ಮಗುವನ್ನು ಜೀವಂತವಾಗಿ ಹೊರತೆಗೆದಿದ್ದಾರೆ.

ಆಸ್ಪತ್ರೆಗೆ ಕರೆತಂದಾಗ ಆಕೆ ಪ್ರಜ್ಞಾಹೀನಳಾಗಿದ್ದಳು. ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಆದರೆ ಮಗು ಇನ್ನೂ ಉಸಿರಾಡುತ್ತಿರುವುದನ್ನು ವೈದ್ಯರ ತಂಡ ಪತ್ತೆ ಮಾಡಿದೆ. ಸಮಯ ವ್ಯರ್ಥ ಮಾಡದೆ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ರಕ್ಷಿಸಲಾಯಿತು.

ಗದಗ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸನಗೌಡ ಕರಿಗೌಡರ ಮಾತನಾಡಿ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಂಡ ವೈದ್ಯರ ತಂಡದ ಮನಃಸ್ಥಿತಿ ಇದು. ಮಗುವಿನ ಜನನದ ನಂತರ ಸ್ಥಿತಿ ಗಂಭೀರವಾಗಿದೆ, ಆದರೆ ವೈದ್ಯರು ವೆಂಟಿಲೇಟರ್ ಮತ್ತು ಇತರ ಚಿಕಿತ್ಸೆಯನ್ನು ಒದಗಿಸಿದರು. ಪ್ರಸ್ತುತ ಹೆಣ್ಣು ಮಗು ಚೆನ್ನಾಗಿಯೇ ಇದೆ ಎಂದು ಅವರು ಹೇಳಿದ್ದಾರೆ.

ಹಿರಿಯ ವೈದ್ಯರಾದ ಡಾ.ವಿನೋದ್, ಡಾ.ಜಯರಾಜ್, ಡಾ.ಶ್ರುತಿ ಮತ್ತು ಡಾ.ಕೀರ್ತನ್ ಅವರು ಹೆರಿಗೆ ಮಾಡಿಸಿದ ವೈದ್ಯರ ತಂಡದ ನೇತೃತ್ವ ವಹಿಸಿದ್ದರು.

ಗದಗ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ ನುಚ್ಚಿನ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎಲ್ಲ ವೈದ್ಯರಿಂದ ಉತ್ತಮ ಕೆಲಸವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕಾಳಜಿ ವಹಿಸುವುದಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಈ ಘಟನೆ ಅದು ಸುಳ್ಳು ಎಂದು ಸಾಬೀತುಪಡಿಸುತ್ತಿದೆ ಎಂದಿದ್ದಾರೆ.

ಮಗುವಿನ ತಂದೆ ವೀರೇಶ ಅಬ್ಬಿಗೇರಿ ಮಾತನಾಡಿ, ಒಂದು ವರ್ಷದ ಹಿಂದೆ ನಮಗೆ ಮದುವೆಯಾಗಿದ್ದು, ಮಗುವಿಗಾಗಿ ಕಾಯುತ್ತಿದ್ದೆವು. ಆದರೆ ನಾನು ನನ್ನ ಹೆಂಡತಿಯನ್ನು ಕಳೆದುಕೊಂಡೆ. ನನ್ನ ಮಗುವನ್ನು ಉಳಿಸಿದ್ದಕ್ಕಾಗಿ ವೈದ್ಯರಿಗೆ ಧನ್ಯವಾದಗಳು. ಸತ್ತ ಹೆಂಡತಿ ಮತ್ತೆ ಹೆಣ್ಣು ಮಗುವಿನ ರೂಪದಲ್ಲಿ ಬಂದಿದ್ದಾಳೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com