ಮೆಟ್ರೋಗೆ ಸಂಪರ್ಕ ಕಲ್ಪಿಸಲು ವಿದ್ಯುತ್ ಚಾಲಿತ ಬಸ್;  ಬಿಎಂಟಿಸಿಗೆ 6 ತಿಂಗಳಲ್ಲಿ 643 ಹೊಸ ಬಸ್ ಗಳು

ನಮ್ಮ ಮೆಟ್ರೋಗೆ ಸಂಪರ್ಕ ಕಲ್ಪಿಸಲು ಬಿಎಂಟಿಸಿ ವಿದ್ಯುತ್ ಚಾಲಿತ ಬಸ್ ಗಳ ಬಳಕೆಗೆ ಮುಂದಾಗಿದ್ದು, ಇನ್ನು 6 ತಿಂಗಳಲ್ಲಿ 643 ಹೊಸ ಬಸ್ ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿವೆ.
ಬಿಎಂಟಿಸಿ
ಬಿಎಂಟಿಸಿ

ಬೆಂಗಳೂರು: ನಮ್ಮ ಮೆಟ್ರೋಗೆ ಸಂಪರ್ಕ ಕಲ್ಪಿಸಲು ಬಿಎಂಟಿಸಿ ವಿದ್ಯುತ್ ಚಾಲಿತ ಬಸ್ ಗಳ ಬಳಕೆಗೆ ಮುಂದಾಗಿದ್ದು, ಇನ್ನು 6 ತಿಂಗಳಲ್ಲಿ 643 ಹೊಸ ಬಸ್ ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿವೆ.

ಭಾರತ್ ಸ್ಟೇಜ್-6 ಡೀಸೆಲ್ ವಾಹನಗಳ ಮಾದರಿಯನ್ನು ಪರಿಶೀಲಿಸಿ ಮಾತನಾಡಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್ ಬಸ್ ಗಳು ತಾಂತ್ರಿಕ ಅಗತ್ಯತೆಗಳನ್ನು ಪೂರೈಸಿವೆ. 565 ಬಿಎಸ್-6 ಬಸ್ ಗಳನ್ನು ಬಿಎಂಟಿಸಿ ಪಡೆಯಲಿದೆ. ಮೊದಲ ಮಾದರಿಯನ್ನು ತಪಾಸಣೆ ಮಾಡಲಾಗಿದ್ದು, ಅಂತಿಮ ಹಂತದ ತಾಂತ್ರಿಕ ಅನುಮೋದನೆಯ ಬಳಿಕ, ಮೂರು ತಿಂಗಳಲ್ಲಿ ಹೊಸ ಬಸ್ ಗಳು ಬಿಎಂಟಿಸಿ ಸೇರ್ಪಡೆಯಾಗಲಿವೆ ಎಂದು ಹೇಳಿದ್ದಾರೆ.

ಜೆಬಿಎಂ ನಿಂದ 90 ವಿದ್ಯುತ್ ಚಾಲಿತ ಬಸ್ ಗಳು ಹಾಗೂ ಅಶೋಕ್ ಲೇಲ್ಯಾಂಡ್ ನಿಂದ 300 ವಿದ್ಯುತ್ ಚಾಲಿತ ಬಸ್ ಗಳು ಇನ್ನು 6 ತಿಂಗಳಲ್ಲಿ ಬಿಎಂಟಿಸಿಗೆ ಸಿಗಲಿದ್ದು, ಈ ಪೈಕಿ ಬಹುತೇಕ ಬಸ್ ಗಳನ್ನು ನಮ್ಮ ಮೆಟ್ರೋ ಸಂಪರ್ಕಕ್ಕೆ ಬಳಕೆ ಮಾಡಲಾಗುತ್ತದೆ ಎಂದು ಹೇಳಿದೆ. ಹೊಸ ಮಾದರಿಯ ಬಸ್ ಗಳು ಎಲ್ಲೆಡೆ ವೈರಲ್ ಆಗತೊಡಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹೊಸ ಬಸ್ ಫೋಟೋ ಹಾಕಿ ಸಂಭ್ರಮಿಸುತ್ತಿದ್ದಾರೆ. ಬಿಎಸ್-6 ಬಸ್ ಗಳ ಬದಲು ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಸ್ ಗಳನ್ನು ಖರೀದಿಸಬೇಕಿತ್ತು ಎಂಬ ಅಭಿಪ್ರಾಯವೂ ನೆಟ್ಟಿಗರಲ್ಲಿ ವ್ಯಕ್ತವಾಗಿದೆ.

ಬಿಎಂಟಿಸಿ ಹಂತ ಹಂತವಾಗಿ ಹಳೆಯ ಬಸ್ ಗಳನ್ನು ತೆಗೆದುಹಾಕಲು ಯೋಜನೆ ರೂಪಿಸಿದ್ದು, ಬಸ್ ಗಳ ಕೊರತೆ ಎದುರಾಗದಂತೆ ಎಚ್ಚರ ವಹಿಸಲು ಮುಂದಾಗಿದೆ. ಮೊದಲ ಹಂತದಲ್ಲಿ 100 ಬಸ್ ಗಳನ್ನು ತೆಗೆದುಹಾಕಲಾಗುತ್ತದೆ. ಈ ರೀತಿ ಮಾಡಲಾದ ಬಸ್ ಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿ ಅವುಗಳ ಬಿಡಿ ಭಾಗಗಳನ್ನು ಸಾಧ್ಯವಾದಷ್ಟೂ ಹೊಸ ಬಸ್ ಗಳ ನಿರ್ಮಾಣಕ್ಕೆ ಬಳಕೆ ಮಾಡಲು ಯತ್ನಿಸಲಾಗುತ್ತದೆ. ಬಿಎಂಟಿಸಿ ಬಳಿ ಈಗ 6,484 ಬಸ್ ಗಳಿದ್ದು 5,141 ಬಸ್ ಗಳು ದಿನಂಪ್ರತಿ ಕಾರ್ಯನಿರ್ವಹಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com