ಕೈಗಾರಿಕೆಗಳ ಅಭಿವೃದ್ಧಿಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಭೂ ಬ್ಯಾಂಕ್ ತೆರೆಯಲು ಸರ್ಕಾರ ಚಿಂತನೆ

ರಾಜ್ಯ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಭೂ ಬ್ಯಾಂಕ್‌ಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು, ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಭೂಮಿಯನ್ನು ಹುಡುಕುತ್ತಿದೆ.
ಮುರುಗೇಶ್ ನಿರಾಣಿ
ಮುರುಗೇಶ್ ನಿರಾಣಿ

ಬೆಂಗಳೂರು: ರಾಜ್ಯ ಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಭೂ ಬ್ಯಾಂಕ್‌ಗಳನ್ನು ಸ್ಥಾಪಿಸಲು ನಿರ್ಧರಿಸಿದ್ದು, ಕೈಗಾರಿಕಾ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲು ಭೂಮಿಯನ್ನು ಹುಡುಕುತ್ತಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)  ಭೂಮಿಯನ್ನು ಗುರುತಿಸಲು ಪ್ರಾರಂಭಿಸಿದೆ. ಅಧಿಕಾರಿಗಳ ಪ್ರಕಾರ, ಹೆಚ್ಚಿನ ಭೂಮಿ ಇದ್ದರೆ,  ಹೆಚ್ಚಿನ ಹೂಡಿಕೆದಾರರು ಕರ್ನಾಟಕದಲ್ಲಿ ಹೆಚ್ಚಿನ ಹೂಡಿಕೆ ಮಾಡುತ್ತಾರೆ, ಇದರಿಂದ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಲವಾರು ಹೂಡಿಕೆದಾರರು ಮತ್ತು ಸಂಸ್ಥೆಗಳು 2022 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅವರು ಇಲ್ಲಿಗೆ ಬಂದಾಗ, ಪ್ರತಿ ಜಿಲ್ಲೆಯಲ್ಲೂ ಸುಲಭವಾಗಿ ಲಭ್ಯವಿರುವ ಭೂಮಿಯನ್ನು ಹೊಂದಿಸಿ ಕೊಡಬೇಕು.  ಅವರಿಗೆ ಅಗತ್ಯವಿರುವ ಭೂಮಿಯನ್ನು ಪ್ರತಿ ಜಿಲ್ಲೆಯಲ್ಲಿ ಒದಗಿಸುವ ಸ್ಥಿತಿಯಲ್ಲಿ ನಾವು ಇರಬೇಕು ಎಂದು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ರಾಜ್ಯ ಸರ್ಕಾರವೂ ಸದ್ಯ ಕೈಗಾರಿಕೆಗಳನ್ನು ಸ್ಥಾಪಿಸಲು 5 ಸಾವಿರ ಎಕರೆ ಭೂಮಿಯನ್ನು ಸ್ವಾದೀನ ಪಡಿಸಿಕೊಂಡಿದೆ, ಆದರೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕಾಗಿ ನಮಗೆ 30 ಸಾವಿರ ಎಕರೆ ಭೂಮಿ ಅಗತ್ಯವಿದೆ.

ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು, ಭೂಮಾಪಕರು ಮತ್ತು ಜಿಲ್ಲಾ ಉಪ ಆಯುಕ್ತರು ಸೂಕ್ತ ಭೂಮಿಯನ್ನು ಗುರುತಿಸುತ್ತಿದ್ದಾರೆ. ಕೆಐಎಡಿಬಿ ಈ ಭೂಮಿಯನ್ನು ಕೈಗಾರಿಕೆ ಬಳಕೆಗೆ ಪರಿವರ್ತಿಸಲಿದೆ ಎಂದು ವಿವರಿಸಿದರು.

ಪ್ರಸ್ತುತ, ರಾಜ್ಯದಾದ್ಯಂತ 72,000 ಎಕರೆಗಳಲ್ಲಿ 188 ಕೈಗಾರಿಕೆಗಳಿವೆ. ಇದಲ್ಲದೆ, ಹೊಸ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಡಾಬಸ್ ಪೇಟೆ, ವೆಮಗಲ್, ಗೌರಿಬಿದನೂರು ಮತ್ತು ಮಾಗಡಿಯಲ್ಲಿ ತಲಾ 800 ಎಕರೆ, ಹಾರೋಹಳ್ಳಿಯಲ್ಲಿ 1,600 ಎಕರೆ, ದೇವನಹಳ್ಳಿಯಲ್ಲಿ 1,700 ಎಕರೆ ಮತ್ತು ಕೋಲಾರದಲ್ಲಿ 600 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು.

ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕೈಗಾರಿಕಾ ಕಾರಿಡಾರ್ ಸ್ಥಾಪಿಸಲು ಧಾರವಾಡದಲ್ಲಿ 6,000 ಎಕರೆ ಮತ್ತು ಯಾದಗಿರಿ ಜಿಲ್ಲೆಯಲ್ಲಿ 3,300 ಎಕರೆ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ವಿವಿಧ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಜಿಲ್ಲೆಯಲ್ಲಿ ಒಂದು ಕೈಗಾರಿಕಾ ಪಾರ್ಕ್ ಸ್ಥಾಪಿಸಲು ಯೋಜಿಸುತ್ತಿದೆ.

ಈ ಯೋಜನೆಯಡಿ  ಯಾದಗಿರಿಯಲ್ಲಿ ಫಾರ್ಮಾ ಪಾರ್ಕ್, ಕಲಬುರಗಿಯಲ್ಲಿ ಜವಳಿ ಮತ್ತು ಆಭರಣ ಪಾರ್ಕ್, ಹುಬ್ಬಳ್ಳಿ-ಧಾರವಾಡದಲ್ಲಿ ಐಟಿ ಪಾರ್ಕ್, ತುಮಕೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್  ಕಲ್ಪಿಸಲಾಗಿದೆ.  ಬೆಂಗಳೂರು-ಮುಂಬೈ ಮತ್ತು ಬೆಂಗಳೂರು-ಚೆನ್ನೈ ಕಾರಿಡಾರ್‌ಗಳಲ್ಲಿ ತಲಾ 500 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್‌ಶಿಪ್‌ಗಳಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com