ಐಎಎಸ್ ಅಧಿಕಾರಿ ಜತೆ ಒಡನಾಟ; ಏಕಮುಖ ಪ್ರೇಮ ವೈಫಲ್ಯದಿಂದ ಡಿ.ಕೆ ರವಿ ಆತ್ಮಹತ್ಯೆ: ಸಿದ್ದರಾಮಯ್ಯ

ಆರು ವರ್ಷಗಳ ಹಿಂದೆ ತೀವ್ರ ಸಂಚಲನ ಮೂಡಿಸಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಆತ್ಮಹತ್ಯೆ ಪ್ರಕರಣ ಪುಸ್ತಕ ರೂಪ ಪಡೆದುಕೊಂಡಿದೆ.
ನಗ್ನ ಸತ್ಯ ಪುಸ್ತಕ ಬಿಡುಗಡೆ
ನಗ್ನ ಸತ್ಯ ಪುಸ್ತಕ ಬಿಡುಗಡೆ

ಬೆಂಗಳೂರು: ಆರು ವರ್ಷಗಳ ಹಿಂದೆ ತೀವ್ರ ಸಂಚಲನ ಮೂಡಿಸಿದ್ದ ಐಎಎಸ್ ಅಧಿಕಾರಿ ಡಿಕೆ ರವಿ ಆತ್ಮಹತ್ಯೆ ಪ್ರಕರಣ ಪುಸ್ತಕ ರೂಪ ಪಡೆದುಕೊಂಡಿದೆ.

ರವಿ ಅವರ ವೃತ್ತಿ, ವಯಕ್ತಿಕ ಬದುಕು, ಮಹಿಳಾ ಅಧಿಕಾರಿಯೊಂದಿಗಿನ ಒಡನಾಟ ಸೇರಿ ಪುಸ್ತಕದಲ್ಲಿರುವ ಅನೇಕ ವಿಚಾರಗಳು ಮತ್ತೊಮ್ಮೆ ಚರ್ಚೆ ಹುಟ್ಟು ಹಾಕುವ ಸಾಧ್ಯತೆ ದಟ್ಟವಾಗಿದೆ.

ಪತ್ರಕರ್ತ ರಾಮಕೃಷ್ಣ ಉಪಾಧ್ಯ ಬರೆದಿರುವ ಡಿ.ಕೆ. ರವಿ ದುರಂತ ಕತೆ, "ನಗ್ನಸತ್ಯ" ಹಾಗೂ "ಲ್ಯಾಂಡ್, ಲಸ್ಟ್ ಆ್ಯಂಡ್ ಆಡಿಯೊಟೇಪ್ಸ್" ಪುಸ್ತಕಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ  ಬಿಡುಗಡೆ ಮಾಡಿ  ಮಾತನಾಡಿದರು.

ಆತ್ಮಹತ್ಯೆ ಮಾಡಿಕೊಂಡ ಐಎಎಸ್ ಅಧಿಕಾರಿ ಡಿ.ಕೆ. ರವಿ ದಕ್ಷ,‌ ಪ್ರಾಮಾಣಿಕ ಅಧಿಕಾರಿ ಆಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅವರು ಪ್ರಚಾರಪ್ರಿಯರೂ ಆಗಿದ್ದರು. ಅನೇಕ ಮಹತ್ವಾಕಾಂಕ್ಷೆಗಳ ನಡುವೆ ತಮ್ಮ ಜೊತೆಗಾರ್ತಿ ಐಎಎಸ್ ಅಧಿಕಾರಿಯ ನಿಕಟ ಒಡನಾಟದಲ್ಲಿ ಏಕಮುಖ ಪ್ರೀತಿಗೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡರು' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. 

ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ನಿರ್ದೇಶನಾಲಯದ ಹೆಚ್ಚುವರಿ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ರವಿ ಅವರಿಗೆ ತಮ್ಮ ಕೆಲಸ ಅಷ್ಟಾಗಿ ಖುಷಿ ಕೊಟ್ಟಿರಲಿಲ್ಲ. ಕೋಲಾರದಲ್ಲಿ ಡಿಸಿಯಾಗಿಯೇ ಮುಂದುವರಿಯುವ ಇಚ್ಛೆ ಇತ್ತು. ಆದರೆ, ಅವರ ಮಾವ ಹನುಮಂತರಾಯಪ್ಪ, ರಮೇಶ್ ಕುಮಾರ್ ಅವರ ಕೋರಿಕೆಯ ಮೇರೆಗೆ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದ್ದೆ. ಆದರೆ, ಅವರು ಕಾನೂನು ರೀತಿಯಲ್ಲಿ ಅಪಾರ ಹಣ ಸಂಪಾದಿಸಿ, ಐಎಎಸ್ ಹುದ್ದೆಗೆ ರಾಜೀನಾಮೆ ಕೊಟ್ಟು, ಉದ್ಯಮಿಯಾಗಿ ಹೆಸರು
ಮಾಡಬೇಕೆಂಬ ಆಸೆ ಹೊಂದಿದ್ದರು. ಅದು ಸಾಧ್ಯವಾಗಲಿಲ್ಲ. ಪ್ರಚಾರ ಮತ್ತು ಜನಪ್ರಿಯತೆಯ ಮಧ್ಯದಲ್ಲೇ ಅವರು ಭೂ-ಮರಳು ಮಾಫಿಯಾ ಮತ್ತು ಏಕಮುಖ ಪ್ರೀತಿಯಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದು ಮೂರ್ಖತನದ ಪರಮಾವಧಿ" ಎಂದರು.

"ರವಿ ಸಾವು ಆತ್ಮಹತ್ಯೆ ಎಂಬುದನ್ನು ಸಿಬಿಐ ದೃಢಪಡಿಸಿತು. ಆದರೆ, ಅದಕ್ಕೂ ಮೊದಲೇ ನನ್ನ ನೇತೃತ್ವದ ಕಾಂಗ್ರೆಸ್ ಸರ್ಕಾರ ಘಟನೆಯನ್ನು ಸಂಪೂರ್ಣ ಪಾರದರ್ಶಕವಾಗಿ ತನಿಖೆ ನಡೆಸಿತ್ತು. ಬಿಜೆಪಿ ಮತ್ತು ಜೆಡಿಎಸ್ ವಿರೋಧ ಪಕ್ಷಗಳಾಗಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದವು. ಅಂದಿನ ಗೃಹಮಂತ್ರಿಯಾಗಿದ್ದ ಅಲ್ಪಸಂಖ್ಯಾತ  ಸಮುದಾಯಕ್ಕೆ ಸೇರಿದ ಕೆ.ಜೆ. ಜಾರ್ಜ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿ ರಾಜೀನಾಮೆ ಕೊಡಿಸುವ ಯತ್ನ ಮಾಡಿದರು ಎಂದು ಸಿದ್ದರಾಮಯ್ಯ ಆರೋಪಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com