ಗದಗ: ಕಾರ್ಮಿಕರ ವಲಸೆ ತಡೆಯಲು ನರೇಗಾ ಅಧಿಕಾರಿಗಳ ಕ್ರಮ, ಗ್ರಾಮಸ್ಥರ ಉದ್ಯೋಗ ಆದ್ಯತೆ ಬಗ್ಗೆ ಮಾಹಿತಿ ಸಂಗ್ರಹ
ಗ್ರಾಮಸ್ಥರು ಉದ್ಯೋಗ ಅರಸಿ ಬೇರೆಡೆ ವಲಸೆ ಹೋಗುವುದನ್ನು ತಡೆಯಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂಜಿಎನ್ ಆರ್ ಇಜಿಎ) ಜಾರಿಯ ಉಸ್ತುವಾರಿ ಅಧಿಕಾರಿಗಳು ಮನೆ-ಮನೆಗೆ ಹೋಗಿ ಗ್ರಾಮಸ್ಥರ ಆದ್ಯತೆಯ ಉದ್ಯೋಗದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
Published: 05th October 2021 01:41 PM | Last Updated: 05th October 2021 02:16 PM | A+A A-

ನರೇಗಾದಡಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರು(ಸಂಗ್ರಹ ಚಿತ್ರ)
ಗದಗ: ಗ್ರಾಮಸ್ಥರು ಉದ್ಯೋಗ ಅರಸಿ ಬೇರೆಡೆ ವಲಸೆ ಹೋಗುವುದನ್ನು ತಡೆಯಲು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(ಎಂಜಿಎನ್ ಆರ್ ಇಜಿಎ) ಜಾರಿಯ ಉಸ್ತುವಾರಿ ಅಧಿಕಾರಿಗಳು ಮನೆ-ಮನೆಗೆ ಹೋಗಿ ಗ್ರಾಮಸ್ಥರ ಆದ್ಯತೆಯ ಉದ್ಯೋಗದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅಧಿಕಾರಿಗಳ ಈ ನಡೆ ಹಲವರನ್ನು ಆಕರ್ಷಿಸಿದ್ದು, ಈ ಬಗ್ಗೆ ತಮ್ಮ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡುತ್ತಿದ್ದಾರೆ. ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಈ ಬಗ್ಗೆ ಗ್ರಾಮ ಪಂಚಾಯತ್ ಅಧಿಕಾರಿಗಳು ಒಂದು ಬಾಕ್ಸ್ ನ್ನು ಇರಿಸಿದ್ದು, ಗ್ರಾಮಸ್ಥರು ಅಕ್ಟೋಬರ್ 30ರೊಳಗೆ ತಮ್ಮ ಆದ್ಯತೆಯ ಉದ್ಯೋಗದ ಬಗ್ಗೆ ಚೀಟಿಯಲ್ಲಿ ಬರೆದು ಬಾಕ್ಸ್ ಒಳಗೆ ಹಾಕಬಹುದು. ಅದಾದ ಒಂದು ವರ್ಷದವರೆಗೆ ಉದ್ಯೋಗದ ಬಗ್ಗೆ ಅಧಿಕಾರಿಗಳು ಯೋಜನೆ ರೂಪಿಸುತ್ತಾರೆ.
ನರಗುಂದ ತಾಲ್ಲೂಕಿನ ದಿನಗೂಲಿ ನೌಕರ ಸುರೇಶ್ ಮೈಗೇರಿ ಈ ಬಗ್ಗೆ ಮಾತನಾಡಿ, ಇಂತಹ ಯೋಜನೆಗಳಿಂದ ನಮಗೆ ಕೆಲಸ ಸಿಗಬಹುದು ಎಂದು ಖುಷಿಯಾಗಿದ್ದೇವೆ. ನಮ್ಮ ಗ್ರಾಮದಲ್ಲಿಯೇ ನಮಗೆ ಕೆಲಸ ಸಿಕ್ಕಿದರೆ ಬೇರೆ ಜಿಲ್ಲೆಗಳು ಮತ್ತು ನಗರಗಳಿಗೆ ವಲಸೆ ಹೋಗುವುದನ್ನು ತಡೆಯಬಹುದು ಎಂದಿದ್ದಾರೆ.
ಒಂದು ವರ್ಷದವರೆಗೆ ನಿರಂತರವಾಗಿ ಕೆಲಸ ಸಿಗುತ್ತದೆ ಎಂದು ಸುದ್ದಿ ಕೇಳಿ ಗೋವಾ, ಬೆಂಗಳೂರು ಮತ್ತು ಮಂಗಳೂರು ಕಡೆಗೆ ಹೋಗಿದ್ದ ಕೆಲವು ನೌಕರರು ಗ್ರಾಮಕ್ಕೆ ಹಿಂತಿರುಗಿ ಕೆಲಸಕ್ಕೆ ಅರ್ಜಿ ಹಾಕುತ್ತಿದ್ದಾರೆ.
ಗದಗ ಜಿಲ್ಲಾ ಪಂಚಾಯತ್ ನ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಗ್ರಾಮಸ್ಥರು ಹಿಂತಿರುಗಬೇಕೆಂದೇ ನಾವು ಬಯಸುವುದು. ಇದೀಗ ಬಹುತೇಕ ಗ್ರಾಮಸ್ಥರಿಗೆ ನರೇಗಾ ಯೋಜನೆಯಡಿ ಕೆಲಸ ಸಿಕ್ಕಿದೆ. ಅಂತವರನ್ನು ಗ್ರಾಮದಲ್ಲಿ ಉಳಿಸಿಕೊಂಡು, ಬೇರೆಡೆಗೆ ವಲಸೆ ಹೋದವರನ್ನು ಕೂಡ ಗ್ರಾಮಕ್ಕೆ ವಾಪಸ್ ಮರಳುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದರು.