ಪಿ.ಪಿ.ಪಿ ಮಾದರಿಯಲ್ಲಿ ರಾಜ್ಯದ 8 ಜಿಲ್ಲೆಗಳಲ್ಲಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಕ್ರಮ: ಬೊಮ್ಮಾಯಿ
ರಾಜ್ಯದ ಎಂಟು ಜಿಲ್ಲೆಗಳಿಗೆ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳನ್ನು ಒಂದೂವರೆ ವರ್ಷಗಳಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಸ್ಥಾಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
Published: 08th October 2021 06:34 PM | Last Updated: 08th October 2021 06:56 PM | A+A A-

ಆಸ್ಪತ್ರೆಯ ಉದ್ಘಾಟನಾ ಸಮಾರಂಭ
ಚಾಮರಾಜನಗರ: ರಾಜ್ಯದ ಎಂಟು ಜಿಲ್ಲೆಗಳಿಗೆ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳನ್ನು ಒಂದೂವರೆ ವರ್ಷಗಳಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಸ್ಥಾಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಚಾಮರಾಜನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವತಿಯಿಂದ ಆಯೋಜಿಸಿರುವ 450 ಹಾಸಿಗೆಯ ಬೋಧನಾ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಬುಡಕಟ್ಟು ಜನಾಂಗದವರು ಹೆಚ್ಚಾಗಿ ವಾಸಿಸುವ ಚಾಮರಾಜನಗರ ಜಿಲ್ಲೆಯು ನೈಸರ್ಗಿಕವಾಗಿ ಸಂಪದ್ಭರಿತವಾಗಿದ್ದರೂ, ಹಿಂದುಳಿದ ಜಿಲ್ಲೆ ಎಂದು ಪರಿಗಣಿಸ್ಪಟ್ಟಿದೆ. ಜಿಲ್ಲೆ ದೇವಸ್ಥಾನಗಳ ತವರೂರು ಕೂಡ ಹೌದು. ನಮ್ಮ ಸರ್ಕಾರ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸುವ ಪಣತೊಟ್ಟಿದೆ. ಶಿಕ್ಷಣ, ಆರೋಗ್ಯ, ಆರ್ಥಿಕ ಹಾಗೂ ಸಾಮಾಜಿಕ ತಾರತಮ್ಯಗಳನ್ನು ಹೋಗಲಾಡಿಸಿ, ಉಳಿದ ಜಿಲ್ಲೆಗಳಂತೆ ಮುಖ್ಯವಾಹಿನಿಗೆ ತರಲು ಶ್ರಮಿಸಲಾಗುವುದು ಎಂದರು.
ಇದನ್ನೂ ಓದಿ: ಚಾಮರಾಜನಗರಕ್ಕೆ ಬರದೇ ಇರುತ್ತಿದ್ದರೆ ನನ್ನ ಕರ್ತವ್ಯ ಲೋಪವಾಗುತ್ತಿತ್ತು: ಸಿಎಂ ಬಸವರಾಜ ಬೊಮ್ಮಾಯಿ
ಆರೋಗ್ಯ ಎನ್ನುವುದು ವ್ಯಕ್ತಿಗೆ ಬಹಳ ಮುಖ್ಯ. ಆದರೆ ಅದನ್ನು ನಾವು ನಿರ್ಲಕ್ಷಿಸುತ್ತೇವೆ. ಯಾರು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೋ ಅವರು ಬದುಕಿನಲ್ಲಿ ಸಾಧನೆಯನ್ನು ಮಾಡುತ್ತಾರೆ ಎಂದ ಮುಖ್ಯಮಂತ್ರಿಗಳು ಈ ಆಸ್ಪತ್ರೆ ಜಿಲ್ಲೆಯ ಆರೋಗ್ಯವನ್ನು ಸಂಪೂರ್ಣವಾಗಿ ಅಭಿವೃದ್ದಿಪಡಿಸಲು ಸಶಕ್ತವಾದ ಆರೋಗ್ಯ ವ್ಯವಸ್ಥೆ ಮಾಡುವು ಕೇಂದ್ರಬಿಂದು ಆಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಇಲ್ಲಿ ವಿದ್ಯೆ ಕಲಿಸುವ ಎಲ್ಲಾ ಪ್ರಾಧ್ಯಾಪಕರು, ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಬೇಕು. ಇಲ್ಲಿ ಕಲಿತವರು ಅತ್ಯಂತ ಯಶಸ್ವಿ ವೈದ್ಯರು, ಪ್ಯಾರಾ ಮೆಡಿಕಲ್ ಸಿಬ್ಬಂದಿ ಹಾಗೂ ದಾದಿಯರಾಗಿ ಹೊರಹೊಮ್ಮಬೇಕು ಎಂದರು. ನಾಡಿನ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೌಲಭ್ಯ ತಲುಪಬೇಕು. ಅದಕ್ಕೆ ಸರ್ಕಾರ ಬದ್ಧವಾಗಿದ್ದು, ಆರೋಗ್ಯ ಮೂಲಸೌಕರ್ಯ ಹೆಚ್ಚಳವಾಗಬೇಕು. ವೈದ್ಯರಿಗೂ ಹಾಗೂ ರೋಗಿಯ ಅನುಪಾತದಲ್ಲಿ ಬಹಳಷ್ಟು ವ್ಯತ್ಯಾಸವಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳಿಗಿಂತಲೂ ರೋಗಿಗಳ ಮತ್ತು ಬೆಡ್ ಅನುಪಾತ ಕಡಿಮೆ ಇದೆ. ಇದನ್ನು ಸರಿದೂಗಿಸಲು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 154 ವೈದ್ಯಕೀಯ ಕಾಲೇಜುಗಳನ್ನು ಕೇವಲ 4 ವರ್ಷಗಳಲ್ಲಿ ಪ್ರಾರಂಭ ಮಾಡಿದ್ದಾರೆ. ರಾಜ್ಯದಲ್ಲಿ ಹಾವೇರಿ, ಯಾದಗಿರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಪ್ರಾರಂಭವಾಗಿದ್ದರೆ ಶೇ.60 ರಷ್ಟು ಹಣವನ್ನು ಕೇಂದ್ರ ಸರ್ಕಾರ ನೀಡಿದೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಬಹಳ ದೊಡ್ಡ ಪ್ರಮಾಣದ ಸಹಕಾರವನ್ನು ಕೊಟ್ಟಿದೆ ಎಂದರು.
"ಚಾಮರಾಜನಗರದ ಜನಕಲ್ಯಾಣ ನನ್ನ ಆದ್ಯ ಕರ್ತವ್ಯ. ನಾನು ಇಲ್ಲಿಗೆ ಬರದೇ ಇದ್ದರೆ ನನ್ನ ಕರ್ತವ್ಯ ಲೋಪವಾಗುತ್ತಿತ್ತು. ನನ್ನ ಕರ್ತವ್ಯ ಲೋಪವಾಗುವುದಕ್ಕೆ ನಾನು ತಯಾರಿಲ್ಲ" : ಮುಖ್ಯಮಂತ್ರಿ @BSBommai. pic.twitter.com/1RoPFfXHar
— CM of Karnataka (@CMofKarnataka) October 7, 2021
ಕೇಂದ್ರ ಸರ್ಕಾರ ಕರೋನಾ ಉಚಿತ ಲಸಿಕೆಯನ್ನು ಪೂರೈಕೆಯಲ್ಲಿ ಸಹಕಾರ ನೀಡಿದೆ. ಈಗಾಗಲೇ ರಾಜ್ಯದ ಜನತೆಗೆ ಶೇ.80 ರಷ್ಟು ಮೊದಲನೇ ಡೋಸ್ ಹಾಗೂ ಶೇ. 30 ರಷ್ಟು ಎರಡನೇ ಡೋಸ್ ನೀಡಲಾಗಿದೆ. ಡಿಸೆಂಬರ್ ಮಾಹೆಯೊಳಗೆ ರಾಜ್ಯದ ಎಲ್ಲರಿಗೂ ಲಸಿಕೆಯನ್ನು ಪೂರೈಸುವ ಗುರಿ ಇದೆ ಎಂದರು.