ಮಂಡ್ಯ: ವರುಣನ ಆರ್ಭಟಕ್ಕೆ ಜನಜೀವನ ತತ್ತರ, 400 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು, ಅಪಾರ ಬೆಳೆ ಹಾನಿ
ಮಂಡ್ಯದಲ್ಲಿ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ, ಹಲವು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಗಿದೆ.
Published: 22nd October 2021 12:32 PM | Last Updated: 22nd October 2021 05:43 PM | A+A A-

ಮಂಡ್ಯದಲ್ಲಿ ಜಮೀನಿಗೆ ನುಗ್ಗಿದ ನೀರು
ಮಂಡ್ಯ: ಮಂಡ್ಯದಲ್ಲಿ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ, ಹಲವು ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಗಿದೆ.
ಮಳೆ ಅಬ್ಬರಕ್ಕೆ ವಿದ್ಯುತ್ ಕಡಿತಗೊಂಡಿದೆ. ಹೀಗಾಗಿ, ಮನೆಯೊಳಗೆ ನುಗ್ಗಿ ಬರುತ್ತಿದ್ದ ಮಳೆ ನೀರನ್ನು ನಿವಾಸಿಗಳಿಗೆ ತಡೆಯಲಾಗಲಿಲ್ಲ. ಹೀಗಾಗಿ, ಮನೆಯೊಳಗಿನ ದವಸ-ಧಾನ್ಯಗಳು, ಬಟ್ಟೆ-ಬರೆ, ಹಾಸಿಗೆ, ಬೆಡ್‌ಶೀಟ್ ಹೀಗೆ ಅಗತ್ಯ ವಸ್ತುಗಳನ್ನು ಸಂರಕ್ಷಿಸಿಕೊಳ್ಳಲಾಗದೇ ಇಡೀ ರಾತ್ರಿ ನರಕಯಾತನೆ ಅನುಭವಿಸಿದ್ದಾರೆ.
ಮಳೆಯಿಂದ ಚರಂಡಿ, ಒಳಚರಂಡಿ ನೀರೆಲ್ಲವೂ ಮನೆಗಳಿಗೆ ನುಗ್ಗಿದೆ. ಮನೆಯ ಸುತ್ತ, ಹೊರಗೆ, ಎಲ್ಲೆಂದರಲ್ಲಿ ನೀರು ನಿಂತಿದೆ. ನೀರು ಹರಿದುಹೋಗುವುದಕ್ಕೆ ಸರಿಯಾದ ವ್ಯವಸ್ಥೆಗಳಿಲ್ಲ. ಒಳಚರಂಡಿ ಸಂಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದೆ. ಇದರಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೇ, ನಿಂತಲ್ಲೇ ನಿಲ್ಲುವಂತಾಗಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.
ಮಳೆ ಬಂದಾಗಲೆಲ್ಲ ನಮ್ಮ ಬದುಕು ಬೀದಿಗೆ ಬರುತ್ತಿದ್ದರೂ ಯಾರೋಬ್ಬರು ನಮ್ಮ ಗೋಳನ್ನು ಕೇಳುತ್ತಿಲ್ಲ ಎಂದು ಇಲ್ಲಿನ ನಿವಾಸಿಯೊಬ್ಬರು ಅಳಲು ವ್ಯಕ್ತಪಡಿಸಿದರು. ಮಳೆ ಜೊತೆಯಲ್ಲಿ, ಬೀಡಿ ಕಾಲೋನಿ ಸಾಂಕ್ರಾಮಿಕ ರೋಗಗಳ ಸಂತಾನೋತ್ಪತ್ತಿ ತಾಣವಾಗಿ ಮಾರ್ಪಟ್ಟಿದೆ ಎಂದು ನಿವಾಸಿ ನಸ್ರೀನ್ ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಭಾರೀ ಮಳೆ: ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸಚಿವ ಆರ್.ಅಶೋಕ್ ಸೂಚನೆ
ಶ್ರೀರಂಗಪಟ್ಟಣದಲ್ಲಿ, ದೊಡ್ಡಪಾಳ್ಯ, ಎಂ ಶೆಟ್ಟಹಳ್ಳಿ, ಚನ್ನಗಿರಿಕೊಪ್ಪಲ್, ಮಂಡ್ಯ ಕೊಪ್ಪಳದಲ್ಲಿ ಬುಧವಾರ ರಾತ್ರಿ ಸುರಿದ ಮಳೆಗೆ 13 ಕ್ಕೂ ಹೆಚ್ಚು ಮನೆಗಳು ಕುಸಿದು 100 ಎಕರೆಗೂ ಹೆಚ್ಚು ಬೆಳೆ ಹಾನಿಯಾಗಿದೆ. ಹಲವೆಡೆ ಬೃಹತ್ ಮರಗಳು ಧರೆಗುರುಳಿದ್ದು, ಮನೆಗಳ ಗೋಡೆಗಳು ಕುಸಿದಿವೆ. ಶ್ರೀರಂಗಪಟ್ಟಣ ತಾಲೂಕಿನಲ್ಲಿ 75 ಮಿಮೀ ಮಳೆಯಾಗಿದ್ದು, ಎಂ ಶೆಟ್ಟಹಳ್ಳಿಯಲ್ಲಿ 94 ಮಿಮೀ ಮಳೆಯಾಗಿದೆ.