ಶಾಲಾ-ಕಾಲೇಜುಗಳಲ್ಲಿ ಕನ್ನಡ ಕಡ್ಡಾಯಕ್ಕಾಗಿ ಹೋರಾಟ ಮುಂದುವರಿಸುತ್ತೇವೆ: ಸಿಎಂ ಬೊಮ್ಮಾಯಿ

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಾತ್ರವಲ್ಲದೆ ಪದವಿ ಹಂತದ ತರಗತಿಗಳಲ್ಲೂ ಕನ್ನಡವನ್ನು ಕಡ್ಡಾಯಗೊಳಿಸಲು ಕರ್ನಾಟಕ ಸರ್ಕಾರ ತನ್ನ ಹೋರಾಟವನ್ನು ಮುಂದುವರೆಸಲಿದೆ...
ಹುಬ್ಬಳ್ಳಿಯಲ್ಲಿ ನಡೆದ ‘ಕನ್ನಡಕ್ಕಾಗಿ ನಾವು’ಎಂಬ ಅಭಿಯಾನದಲ್ಲಿ ಸಿಎಂ
ಹುಬ್ಬಳ್ಳಿಯಲ್ಲಿ ನಡೆದ ‘ಕನ್ನಡಕ್ಕಾಗಿ ನಾವು’ಎಂಬ ಅಭಿಯಾನದಲ್ಲಿ ಸಿಎಂ

ಹುಬ್ಬಳ್ಳಿ/ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಾತ್ರವಲ್ಲದೆ ಪದವಿ ಹಂತದ ತರಗತಿಗಳಲ್ಲೂ ಕನ್ನಡವನ್ನು ಕಡ್ಡಾಯಗೊಳಿಸಲು ಕರ್ನಾಟಕ ಸರ್ಕಾರ ತನ್ನ ಹೋರಾಟವನ್ನು ಮುಂದುವರೆಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದ್ದಾರೆ.

ಇಂದು ರಾಜ್ಯಾದ್ಯಂತ ‘ಕನ್ನಡಕ್ಕಾಗಿ ನಾವು’ಎಂಬ ಅಭಿಯಾನದಲ್ಲಿ ಲಕ್ಷಾಂತರ ಜನರು ಕನ್ನಡ ಪರ ಹಾಡುಗಳನ್ನು ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯದ ಹಲವೆಡೆ ಬೆಳಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ನಾನು ಮುಖ್ಯಮಂತ್ರಿಯಾದ ನಂತರ ನಮ್ಮ ಸರ್ಕಾರವು ಮಾತೃಭಾಷೆಗೆ ಪ್ರಾಮುಖ್ಯತೆ ನೀಡುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ ಎಂದು ಹೇಳಿದರು.

ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣ ಮಾತ್ರವಲ್ಲದೆ ಪದವಿ ಹಂತದಲ್ಲೂ ಕನ್ನಡ ಕಡ್ಡಾಯಗೊಳಿಸಿ ಸುಗ್ರೀವಾಜ್ಞೆ ತಂದಿದ್ದೆವು, ಸದ್ಯ ಪ್ರಕರಣ ಹೈಕೋರ್ಟ್‌ನಲ್ಲಿದೆ, ಅದಕ್ಕಾಗಿ ಹೋರಾಟ ಮುಂದುವರಿಸುತ್ತೇವೆ ಎಂದು ಸಿಎಂ ತಿಳಿಸಿದರು.

ರಾಜ್ಯ ಸರ್ಕಾರ ಇಂಜಿನಿಯರಿಂಗ್ ಕೋರ್ಸ್ ಸಹ ಸಂಪೂರ್ಣ ಕನ್ನಡ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. ಕನ್ನಡದಲ್ಲಿ ಪದವಿ ಕೋರ್ಸ್ ನೀಡಲು ಕನಿಷ್ಠ 15 ಕಾಲೇಜುಗಳು ಮುಂದೆ ಬಂದಿದ್ದು, ಕನ್ನಡದಲ್ಲಿ ಬೋಧನೆ ಮಾಡಿ ಕನ್ನಡದಲ್ಲಿ ಪದವಿ ನೀಡುತ್ತಿರುವುದು ಐತಿಹಾಸಿಕ ಎಂದು ಬೊಮ್ಮಾಯಿ ಹೇಳಿದರು.

ಯಾವುದೇ ಭಾಷೆ ವ್ಯಾಪಕವಾಗಿ ಬಳಸಿದಾಗ ಅದು ಬೆಳೆಯುತ್ತದೆ. ಈ ಕ್ರಮಗಳೊಂದಿಗೆ ತಮ್ಮ ಸರ್ಕಾರ ಕನ್ನಡವನ್ನು ಉತ್ತೇಜಿಸುವ ಬದ್ಧತೆಯನ್ನು ಪುನರುಚ್ಚರಿಸುತ್ತಿದೆ ಎಂದು ಬೊಮ್ಮಾಯಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com