'ಎಂತಹ ವಿಪರ್ಯಾಸ, ನಿನ್ನೆ ನನಗೆ ಫೋನ್ ಮಾಡಿದ್ದ ನಟ ಇಂದಿಲ್ಲ, ಪುನೀತ್ ಕೇವಲ ನಾಯಕ ಮಾತ್ರವಲ್ಲ 'ನಾಯಕತ್ವ' ಇದ್ದ ನಟ: ಸಿಎಂ ಬೊಮ್ಮಾಯಿ

ಅತ್ಯಂತ ಸಣ್ಣ ವಯಸ್ಸಿನಲ್ಲಿ ಮೇರು ಸಾಧನೆ ಮಾಡಿದ ವ್ಯಕ್ತಿ ಪುನೀತ್ ರಾಜ್ ಕುಮಾರ್. ಇಂತಹ ಮೇರು ನಟ ಹಠಾತ್ ನಮ್ಮಿಂದ ಅಗಲಿಹೋದಾಗ ದುಃಖವಾಗುತ್ತದೆ. ಈ ಸಂದರ್ಭದಲ್ಲಿ ಎಲ್ಲರೂ ಸಂಯಮದಿಂದ ವರ್ತಿಸಿ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್
Updated on

ಬೆಂಗಳೂರು: ಸ್ಯಾಂಡಲ್ ವುಡ್ ರಾಜಕುಮಾರ, ಯುವರತ್ನ ಪುನೀತ್ ರಾಜ್ ಕುಮಾರ್ ಅವರ ಹಠಾತ್ ನಿಧನದಿಂದ ನಮಗೆಲ್ಲರಿಗೂ ಆಘಾತವಾಗಿದೆ. ಅತ್ಯಂತ ಸಣ್ಣ ವಯಸ್ಸಿನಲ್ಲಿ ಮೇರು ಸಾಧನೆ ಮಾಡಿದ ವ್ಯಕ್ತಿ ಪುನೀತ್ ರಾಜ್ ಕುಮಾರ್. ಇಂತಹ ಮೇರು ನಟ ಹಠಾತ್ ನಮ್ಮಿಂದ ಅಗಲಿಹೋದಾಗ ದುಃಖವಾಗುತ್ತದೆ. ಈ ಸಂದರ್ಭದಲ್ಲಿ ಎಲ್ಲರೂ ಸಂಯಮದಿಂದ ವರ್ತಿಸಿ ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸರ್ಕಾರ ಅಂತಿಮ ದರ್ಶನಕ್ಕೆ, ಅಂತ್ಯಕ್ರಿಯೆಗೆ ಎಲ್ಲ ಸಿದ್ಧತೆ ಮಾಡುತ್ತಿದೆ. ಅವರ ಕುಟುಂಬದವರ ಜೊತೆಗೂ ಇರುತ್ತದೆ. ಅವರ ಕುಟುಂಬದ ಭಾವನೆಗಳಿಗೆ ಗೌರವ ಕೊಟ್ಟು ಅವರು ಹೇಳಿದ ರೀತಿ, ಹೇಳಿದಲ್ಲಿಯೇ ಅಂತ್ಯಕ್ರಿಯೆ ಮಾಡಲಾಗುವುದು ಎಂದರು.
ಇಂದು ಮತ್ತು ನಾಳೆ ಅಂತಿಮ ದರ್ಶನಕ್ಕೆ ವ್ಯವಸ್ಥೆ: ನಟ ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಕಂಠೀರವ ಸ್ಟೇಡಿಯಂನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇಂದು ಸಾಯಂಕಾಲದಿಂದ ನಾಳೆ ದಿನವಿಡೀ ಅವರನ್ನು ಅಂತಿಮವಾಗಿ ನೋಡಲಿಚ್ಛಿಸುವವರು ನೋಡಬಹುದು. ಅವರನ್ನು ಪ್ರೀತಿಯಿಂದ ಗೌರವಯುತವಾಗಿ ಬೀಳ್ಕೊಡೋಣ ಎಂದರು.

ಸಿಎಂ ಭೇಟಿಗೆ ನಿಗದಿಯಾಗಿದ್ದ ದಿನ: ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವಕ್ಕೆ ಪುನೀತ್ ರಾಜ್ ಕುಮಾರ್ ಅವರ ವೆಬ್ ಸೈಟ್ ಉದ್ಘಾಟನೆ ಮಾಡಲು ಸಿಎಂ ಜೊತೆಗೆ ಭೇಟಿ ನಿಗದಿಯಾಗಿತ್ತಂತೆ. ಅದರಂತೆ ನಿನ್ನೆ ಫೋನ್ ಮಾಡಿ ಪುನೀತ್ ಅವರಲ್ಲಿ ಸಿಎಂ ಮಾತನಾಡಿದ್ದರಂತೆ. ಇಂದು ಭೇಟಿ ಮಾಡಿ ಮಾತನಾಡುವುದೆಂದು ಸಮಯ ಕೂಡ ನಿಗದಿಯಾಗಿತ್ತು, ಆದರೆ ವಿಧಿಯೆಷ್ಟು ಕ್ರೂರ, ಇಂದು ಅವರು ನಮ್ಮ ಜೊತೆ ಇಲ್ಲ ಎಂದು ಬೇಸರಪಟ್ಟುಕೊಂಡರು. 

ಡಾ ರಾಜ್ ಕುಮಾರ್ ಅವರ ಕುಟುಂಬದ ಜೊತೆ ನನಗೆ ಹಿಂದಿನಿಂದಲೂ ಒಡನಾಟವಿತ್ತು. ಪುನೀತ್ ರಾಜ್ ಕುಮಾರ್ ಅವರು ಯುವ ಜನಾಂಗಕ್ಕೆ ಮಾದರಿಯಾಗಿದ್ದು, ಸರಳ, ಸಂಭಾವಿತ ಮನುಷ್ಯ, ಅವರು ಚಿತ್ರರಂಗದಲ್ಲಿ ಇನ್ನೂ ಎತ್ತರಕ್ಕೆ ಹೋಗುವವರಿದ್ದರು. ಒಬ್ಬ ಪ್ರತಿಭಾನ್ವಿತ ನಟನಾಗಿ ಸರ್ಕಾರದ ಅನೇಕ ಕಾರ್ಯಕ್ರಮಗಳಲ್ಲಿ ಜೊತೆಯಾಗಿದ್ದರು, ಅವರು ಕೇವಲ ನಾಯಕ ಮಾತ್ರವಲ್ಲ, ನಾಯಕತ್ವ ಇರುವ ನಟ, ಡಾ.ರಾಜ್ ಕುಮಾರ್ ಅವರ ನಡೆ-ನುಡಿಗಳನ್ನು ಮೈಗೂಡಿಸಿಕೊಂಡಿದ್ದವರು, ಎಲ್ಲರಿಗೂ ಅಚ್ಚುಮೆಚ್ಚಾಗಿದ್ದರು ಎಂದು ಸಿಎಂ ಹೇಳಿ ಭಾವುಕರಾದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com