'ಮುಖ್ಯಮಂತ್ರಿ ರೈತ ವಿದ್ಯಾನಿಧಿ' ಯೋಜನೆಗೆ ಚಾಲನೆ: ವಿದ್ಯಾರ್ಥಿಗಳಿಗೆ ಸ್ಕಾಲರ್ ಷಿಪ್, ಸಿಎಂ ಬೊಮ್ಮಾಯಿ ಮಹಾತ್ವಾಕಾಂಕ್ಷಿ ಕಾರ್ಯಕ್ರಮ

ತಾವು ಮುಖ್ಯಮಂತ್ರಿಯಾದ ಕೂಡಲೇ ಬಸವರಾಜ ಬೊಮ್ಮಾಯಿಯವರು ಘೋಷಿಸಿದ್ದ ಮಹಾತ್ವಾಕಾಂಕ್ಷಿ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಯೋಜನೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಭಾನುವಾರ ಚಾಲನೆ ನೀಡಲಾಗಿದೆ.
ರೈತ ವಿದ್ಯಾನಿಧಿ ಯೋಜನೆಗೆ ಚಾಲನೆ ನೀಡಿ ರೈತರ ಮಕ್ಕಳಿಗೆ ಸ್ಕಾಲರ್ ಷಿಪ್ ವಿತರಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಇತರರು
ರೈತ ವಿದ್ಯಾನಿಧಿ ಯೋಜನೆಗೆ ಚಾಲನೆ ನೀಡಿ ರೈತರ ಮಕ್ಕಳಿಗೆ ಸ್ಕಾಲರ್ ಷಿಪ್ ವಿತರಣೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಇತರರು

ಬೆಂಗಳೂರು: ತಾವು ಮುಖ್ಯಮಂತ್ರಿಯಾದ ಕೂಡಲೇ ಬಸವರಾಜ ಬೊಮ್ಮಾಯಿಯವರು ಘೋಷಿಸಿದ್ದ ಮಹಾತ್ವಾಕಾಂಕ್ಷಿ ‘ಮುಖ್ಯಮಂತ್ರಿ ರೈತ ವಿದ್ಯಾನಿಧಿ’ ಯೋಜನೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಭಾನುವಾರ ಚಾಲನೆ ನೀಡಲಾಗಿದೆ.

ರೈತ ವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳಿಗೆ ರಾಜ್ಯ ಸರ್ಕಾರ ಶಿಷ್ಯ ವೇತನ ನೀಡಲಿದ್ದು, ಇಂದು ಸಾಂಕೇತಿಕವಾಗಿ ಕೆಲವು ರೈತರ ಮಕ್ಕಳಿಗೆ ಚೆಕ್ ವಿತರಣೆ ಮಾಡಲಾಗಿದೆ.ಯೋಜನೆಗೆ ಬಟನ್ ಒತ್ತುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣ ಸಚಿವ ನರೇಂದ್ರ ಸಿಂಗ್ ತೋಮರ್​ ವಿದ್ಯಾರ್ಥಿಗಳ ಖಾತೆಗೆ ವಿದ್ಯಾನಿಧಿ ಹಣವನ್ನು ಸಾಂಕೇತಿಕವಾಗಿ ವರ್ಗಾವಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ,  ಕೃಷಿ ಸಚಿವ ಬಿ.ಸಿ.ಪಾಟೀಲ್, ಸಚಿವರಾದ ಮುನಿರತ್ನ, ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್, ಸಂಸದರು, ಶಾಸಕರು ಭಾಗಿಯಾಗಿದ್ದರು.

ಏನಿದು ಯೋಜನೆ: ಈ ಯೋಜನೆಯಿಂದ ಸುಮಾರು 17 ಲಕ್ಷ ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಪಿಯುಸಿ, ಐಟಿಐ, ಡಿಪ್ಲೊಮಾ ವಿದ್ಯಾರ್ಥಿಗಳಿಗೆ 2,500 ರೂಪಾಯಿ. ಮತ್ತು ವಿದ್ಯಾರ್ಥಿನಿಯರಿಗೆ 3 ಸಾವಿರ ರೂಪಾಯಿಗಳನ್ನು ಹಣವನ್ನು ಸರ್ಕಾರ ನೀಡಲಿದೆ. ಇನ್ನು ಪದವೀಧರ ವಿದ್ಯಾರ್ಥಿಗಳಿಗೆ 5 ಸಾವಿರ ರೂ, ವಿದ್ಯಾರ್ಥಿನಿಗಳಿಗೆ 5,500 ರೂ. ಹಣವನ್ನು ಸರ್ಕಾರ ನೀಡಲಿದೆ. ಎಲ್ಎಲ್​ಬಿ, ಪ್ಯಾರಾಮೆಡಿಕಲ್, ಬಿ ಫಾರ್ಮ್, ನರ್ಸಿಂಗ್, ವೃತ್ತಿಪರ ಕೋರ್ಸ್​ಗಳ ವಿದ್ಯಾರ್ಥಿಗಳಿಗೆ 7,500 ರೂ, ನೀಡಿದರೆ, ವಿದ್ಯಾರ್ಥಿನಿಯರಿಗೆ 8 ಸಾವಿರ ರೂ. ಹಣವನ್ನು ರಾಜ್ಯ ಸರ್ಕಾರ ನೀಡುತ್ತದೆ.

ಎಂಬಿಬಿಎಸ್, ಬಿಇ, ಬಿ.ಟೆಕ್ ಸ್ನಾತಕೋತ್ತರ ಕೋರ್ಸ್ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 10 ಸಾವಿರ, ವಿದ್ಯಾರ್ಥಿನಿಯರಿಗೆ 11,000 ರೂ. ಶಿಷ್ಯ ವೇತನ ನೀಡಲಾಗುವುದು. ನೋಂದಣಿಯಾದ ಶಿಕ್ಷಣ ಸಂಸ್ಥೆಗಳಲ್ಲಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆವರಿಗೆ ರಾಜ್ಯ ಸರ್ಕಾರ ಶಿಷ್ಯ ವೇತನ ನೀಡುತ್ತದೆ.

ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಜನಪ್ರತಿನಿಧಿ ತನ್ನ ವಿಚಾರವನ್ನು ಯೋಜನೆ ರೂಪಕ್ಕೆ ತಂದು, ಅದನ್ನು ಶೀಘ್ರ ಕಾರ್ಯರೂಪಕ್ಕೆ ತಂದರೆ ಸಂತೋಷವಾಗುತ್ತೆ. ರಾಜ್ಯದಲ್ಲಿ 10 ಕೃಷಿ ವಾತಾವರಣ ವಲಯಗಳಿವೆ. ಹೀಗಾಗಿ ವರ್ಷಪೂರ್ತಿ ವಿವಿಧ ಬೆಳೆಗಳನ್ನು ಬೆಳೆಯಬಹುದು. ರೈತಾಪಿ ವರ್ಗಕ್ಕೆ ಅತಿ ಹೆಚ್ಚು ಪ್ರೋತ್ಸಾಹ ಯೋಜನೆ ಕೊಟ್ಟ ಏಕೈಕ ನಾಯಕ ಯಡಿಯೂರಪ್ಪ. ಕೃಷಿ ಬಜೆಟ್, ರೈತರ ಪಂಪ್ ಸೆಟ್​ಗಳಿಗೆ ಉಚಿತ ವಿದ್ಯುತ್ ಕೊಟ್ಟವರು ಯಡಿಯೂರಪ್ಪ. ಅದೇ‌ ನಿಟ್ಟಿನಲ್ಲಿ ರೈತರ ಮಕ್ಕಳಿಗೆ ಸ್ಕಾಲರ್ ಶಿಪ್ ಯೋಜನೆ ತರುವುದಕ್ಕೆ ಯೋಚನೆ ಮಾಡಿದೆ. 17 ಲಕ್ಷ ರೈತ ಕುಟುಂಬದ ಮಕ್ಕಳಿಗೆ‌ ಅನುಕೂಲವಾಗಲಿದೆ. ಸಾರ್ಥಕತೆಯ ಸಮಾಧಾನ ನನಗಿದೆ ಎಂದು ತಿಳಿಸಿದರು.

ಕೃಷಿ ಸಚಿವ ಬಿ ಸಿ ಪಾಟೀಲ್ ಮಾತನಾಡಿ, ಹಲವು ರೈತರು ತಮ್ಮ ಮಕ್ಕಳನ್ನು ಪೋಷಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಉಂಟಾಗಿದೆ, ಅಂತವರಿಗೆ ಸರ್ಕಾರದ ಈ ಆರ್ಥಿಕ ಧನಸಹಾಯದಿಂದ ನೆರವಾಗಲಿದೆ ಎಂದರು. 

ರೈತರಿಗೆ ಸ್ವಾಭಿಮಾನಿ ರೈತ ಐಡಿ ಕಾರ್ಡ್ ನೀಡಲಾಗಿದೆ. ರಾಜ್ಯದ 78 ಲಕ್ಷ ರೈತರಿಗೆ ಐಡಿ ಕಾರ್ಡ್ ನೀಡಬೇಕಿದೆ. ಕೇಂದ್ರ ಸರ್ಕಾರ ಬೇಡಿಕೆಗಿಂತಲೂ ಹೆಚ್ಚು ಹಣ ಒದಗಿಸಿದೆ ಎಂದರು. 

ಕಾರ್ಯಕ್ರಮದಲ್ಲಿ ಹಾರ, ತುರಾಯಿ ಸನ್ಮಾನ: ಹಾರ, ತುರಾಯಿ ಸನ್ಮಾನ ಬೇಡ ಎಂದು ಆದೇಶ ಹೊರಡಿಸಿದ್ದ ಮುಖ್ಯಮಂತ್ರಿಗಳ ಇಂದಿನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಿಗೆ ಹಾರ, ತುರಾಯಿ ಹಾಕಿ ಸನ್ಮಾನ ಮಾಡಿದ್ದು ಕಂಡುಬಂತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com